ಆಳಂದ: ತಾಲೂಕಿನ ಎಲ್ಲ ಶಾಲೆಗಳ ಮಕ್ಕಳಿಗೆ ಸರ್ಕಾರದಿಂದ ಬರುವ ಉಚಿತ ಸೌಲಭ್ಯಗಳನ್ನು ಜೂನ್ 10ರೊಳಗೆ ವಿತರಿಸಬೇಕು. ಇಲ್ಲವಾದಲ್ಲಿ ಆಯಾ ಶಾಲೆಗಳ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿ ಧಿಕಾರಿ ಗುರಣ್ಣಾ ಗುಂಡಗುರತಿ ಹೇಳಿದರು.
ಶುಕ್ರವಾರ ತಾಲೂಕಿನ ಶಾಲೆಗಳ ಮುಖ್ಯಸ್ಥರಿಗೆ ಪಠ್ಯ-ಪುಸ್ತಕ ಮತ್ತು ಸಮವಸ್ತ್ರ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದಾಸ್ತಾನು ಮಳಿಗೆಯಲ್ಲಿ ಎಲ್ಲ ಶಾಲೆಗಳಿಗೆ ಆಗುವಷ್ಟು ಸಮವಸ್ತ್ರ ಪೂರೈಕೆ ಆಗಿದೆ. ಪಠ್ಯ- ಪುಸ್ತಕ, ಸಮವಸ್ತ್ರ ಹಾಗೂ ಸೈಕಲ್ ಪಡೆದು ಶಾಲೆಗಳಲ್ಲಿ ಮಕ್ಕಳಿಗೆ ಜೂನ್ 10ರೊಳಗೆ ವಿತರಣೆ ಕಾರ್ಯ ಪೂರ್ಣಗೊಳಿಸಿ ಅನುಕೂಲ ಮಾಡಬೇಕು ಎಂದರು.
ಈಗಾಗಲೇ ಶೇ. 47.6 ರಷ್ಟು ಪಠ್ಯ-ಪುಸ್ತಕ ದಾಸ್ತಾನು ಮಾಡಲಾಗಿದೆ. ಇನ್ನೂ ದಾಸ್ತಾನು ಮಾಡಲಾಗುತ್ತಿದೆ. ಸರಬರಾಜು ಆದ ಪುಸ್ತಗಳನ್ನು ಪಡೆದುಕೊಂಡು ವಿತರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. 2ನೇ ಹಂತದ ಸಮವಸ್ತ್ರ ವಿತರಿಸುವ ಜವಾಬ್ದಾರಿ ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ನೀಡಲಾಗಿದೆ.
ಶಿಕ್ಷಕರೇ ಸಮವಸ್ತ್ರ ಖರೀದಿಸಿ ಮಕ್ಕಳಿಗೆ ವಿತರಣೆ ಮಾಡಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಸಹಿಸಲ್ಲ ಎಂದು ತಾಕೀತು ಮಾಡಿದರು. ನೋಡಲ್ ಅಧಿಕಾರಿ ಶಂಕರ ಡಾಂಗೆ ಮಾತನಾಡಿ, 2017-18ನೇ ಸಾಲಿನಲ್ಲಿ 415165 ಪಠ್ಯಪುಸ್ತಕಗಳಿಗೆ ಬೇಡಿಕೆ ಇದೆ.
ಈಗಾಗಲೇ 197591 (ಶೇ. 47.6) ಪುಸ್ತಕ ದಾಸ್ತಾನು ಮಾಡಿ ಶಾಲೆಗಳ ಮುಖ್ಯಸ್ಥರಿಗೆ ವಿತರಣೆ ಮಾಡಲಾಗುತ್ತಿದೆ. ಇನ್ನೂ 217574 (ಶೇ.52.4) ಪುಸ್ತಕಗಳು ಬರುವುದು ಬಾಕಿ ಇದೆ ಎಂದು ಹೇಳಿದರು. ತಾಲೂಕಿನ ಪ್ರೌಢಶಾಲೆ 48, ಪ್ರಾಥಮಿಕ 265 ಸೇರಿ ಒಟ್ಟು 314 ಶಾಲೆಗಳಿಗೆ 42711 ಸಮವಸ್ತ್ರ ಬೇಡಿಕೆ ಪೈಕಿ 22629 ಗಂಡು ಮಕ್ಕಳ ಸಮವಸ್ತ್ರ ದಾಸ್ತಾನಾಗಿದೆ ಎಂದರು.
ಸಹಾಯಕ ನೋಡಲ್ ಅಧಿಕಾರಿ ರಾಜಶೇಖರ ಬಿರಾದಾರ, ಮಲ್ಲಿಕಾರ್ಜುನ ಪಾಟೀಲ, ಸಿದ್ಧಣ್ಣ, ಶಾಲೆಗಳ ಮುಖ್ಯಶಿಕ್ಷಕರಾದ ಅಶೋಕ ಹಿರೇಮಠ, ರವಿ ಕುಲಕರ್ಣಿ, ಶ್ರೀಶೈಲ, ಬಸಪ್ಪ ನಾಟಿಕಾರ, ಮಹಾದೇವಪ್ಪ ತರಮುಡೆ ಹಾಜರಿದ್ದರು.