ಆಳಂದ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ವಿವಿಧ ಗ್ರಾಮದಲ್ಲಿ 17 ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ ತಡೋಳಾ, ಮಾಡಿಯಾಳ, ಸರಸಂಬಾ, ಕೊಡಲಹಂಗರಗಾ ಸೇರಿದಂತೆ ಅನೇಕ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕಟ್ಟಡದ ಛಾವಣಿಯಿಂದ ನೀರು ಒಸರುತ್ತಿದೆ. ಇದರಿಂದ ಪಾಠ ಬೋಧನೆಗೆ ಅಡೆ, ತಡೆಯಾಗುತ್ತಿದೆ. ತಡೋಳಾ ಗ್ರಾಮದ ಹೊರವಲಯದಲ್ಲಿ 2011ರಲ್ಲಿ ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣವಾಗಿದೆ.
ಮರಾಠಿ ಮಾಧ್ಯಮ ಪ್ರೌಢಶಾಲೆಯಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯ ಛಾವಣಿ ಮೇಲೆ ನೀರು ಸಂಗ್ರಹವಾಗಿ ಕೋಣೆಗಳ ಒಳಗೆ ನೀರು ಜಿನುಗುತ್ತಿದೆ. ತಡೋಳಾ ಗ್ರಾಪಂ ಅಧ್ಯಕ್ಷ ಮೈಲಾರಿ ಜೋಗೆ ನೇತೃತ್ವದಲ್ಲಿ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿಯಾಗಿ ಕೋಣೆಗಳ ದುರಸ್ಥಿಗೆ ಮನವಿ ಮಾಡಿದರು.
ಕಳೆದ 10ವರ್ಷಗಳ ಹಿಂದೆ ಕಟ್ಟಿದ ಶಾಲಾ ಕಟ್ಟಡದ ಕಾಮಗಾರಿ ಕಳಪೆಯಾಗಿದ್ದರಿಂದ ಈ ಸ್ಥಿತಿ ನಿರ್ಮಾಣವಾಗಿದೆ. ಎಂಜಿನಿಯರ್ ಕರೆಯಿಸಿ ಕಟ್ಟಡದ ಬಾಳಿಕೆ ಪರಿಶೀಲಿಸಿ ಎಂದು ಹೋರಾಟಗಾರ ಮೌಲಾ ಮುಲ್ಲಾ ಒತ್ತಾಯಿಸಿದರು.
ಡಿಡಿಪಿಐಗಳಿಗೆ ತಕ್ಷಣ ವರದಿ ಸಲ್ಲಿಸಲಾಗುವುದು. ತಾತ್ಕಾಲಿಕವಾಗಿ ಸಮೀಪದಲ್ಲಿನ ಸರ್ಕಾರಿ ಕಟ್ಟಡದಲ್ಲಿ ಪ್ರೌಢಶಾಲೆ ತರಗತಿಗಳು ನಡೆಸುವ ವ್ಯವಸ್ಥೆ ಮಾಡುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮುಡಿ ಭರವಸೆ ನೀಡಿದರು.
ಗ್ರಾಪಂ ಸದಸ್ಯರಾದ ಮಹಾವೀರ ಕಾಂಬಳೆ, ಕಮಲೇಶ ಅವಟೆ, ಪ್ರಭಾಕರ ಸುತಾರ, ಜೈಭೀಮ ಗಾಯಕವಾಡ, ಅಸ್ಪಾಕ್ ಮುಲ್ಲಾ, ತುಕರಾಮ ನಕಾತೆ ಇದ್ದರು. ಮಳೆಗೆ ಸೋರುತ್ತಿರುವ ಕುರಿತು ಸಾಕಷ್ಟು ಶಾಲೆಗಳಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾ ಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಶಾಲೆಯ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.