Advertisement

ಶಾಲೆ, ಶಿಕ್ಷಣ ಕ್ಷೇತ್ರಕ್ಕೆನಿರೀಕ್ಷಿತ ಒತ್ತು ಸಿಕ್ಕಿಲ್ಲ

10:08 AM Feb 02, 2018 | |

ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಜನರ ಆಶಯ ಹಾಗೂ ಬಜೆಟ್‌ ಪ್ರಸ್ತಾಪ ಬೇರೆ ಬೇರೆಯಾಗಿದೆ. ಶಾಲಾ ಶಿಕ್ಷಣಕ್ಕೆ ನಿರೀಕ್ಷಿತ ಮಟ್ಟದಲ್ಲಿ ಒತ್ತು ಸಿಕ್ಕಿಲ್ಲ. ಬಜೆಟ್‌ ಘೋಷಣೆಯಲ್ಲೇ ಸಾಕಷ್ಟು ಮಿಥ್ಯಗಳಿವೆ. ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡುವ ಬಗ್ಗೆ ಉಲ್ಲೇಖೀಸಲಾಗಿದೆ. ದೇಶದಲ್ಲಿ 1.19 ಕೋಟಿ ಮಕ್ಕಳು ಶಾಲಾ ಶಿಕ್ಷಣದಿಂದ ಹೊರಗಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ತರಲು ವಿಶೇಷ ಯೋಜನೆ ಹಾಗೂ ನಿರ್ದಿಷ್ಟ ಅನುದಾನ ಹಂಚಿಕೆ ಮಾಡಿಲ್ಲ. ಪೂರ್ವ ಪ್ರಾಥಮಿಕ ತರಗತಿಯಿಂದ 12ನೇ ತರಗತಿ ತನಕ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ತರುವುದಾಗಿ ಹೇಳಿದ್ದಾರೆ. ಆದರೆ, ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಸ್ಪಷ್ಟತೆ ಇಲ್ಲ.

Advertisement

ಶಿಕ್ಷಣ ಗುಣಮಟ್ಟದ ಭರವಸೆ ನೀಡಿದ್ದು, ಕಾರ್ಯಕ್ರಮ ಅನುಷ್ಠಾನದ ಬಗ್ಗೆ ತಿಳಿಸಿಲ್ಲ. ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ತೆರೆಯಲು ಬೇಕಾದ ಅನುದಾನ ಹಾಗೂ  ಮೂಲಭೂತ ಸೌಕರ್ಯದ ಬಗ್ಗೆ ತಿಳಿಸಿಲ್ಲ. ಹಾಗೆಯೇ 11 ಮತ್ತು 12ನೇ ತರಗತಿಯನ್ನು ಕಾಯ್ದೆ ವ್ಯಾಪ್ತಿಗೆ ಸೇರಿಸಲು ಬೇಕಾದಷ್ಟು ಅನುದಾನ ಮೀಸಲಿಟ್ಟಿಲ್ಲ. ಕೇವಲ ಘೋಷಣೆ ಮಾಡಿರುವುದರಿಂದ ಏನೂ ಪ್ರಯೋಜನವಾಗದು, ಅನುಷ್ಠಾನ ಅಗತ್ಯವಿದೆ.

ಶೈಕ್ಷಣಿಕ ಗುಣಾತ್ಮಕತೆಯ ಬಗ್ಗೆ ಹೇಳಿದ್ದಾರೆ. ಶಿಕ್ಷಕರ ನೇಮಕಾತಿ ಮಾಡಿಕೊಳ್ಳದೇ ಯಾವುದೇ ರೀತಿಯಲ್ಲೂ ಗುಣಮಟ್ಟ
ಸುಧಾರಣೆ ಸಾಧ್ಯವಿಲ್ಲ. ದೇಶದಲ್ಲಿ 9 ಲಕ್ಷ ಶಿಕ್ಷಕರ ಹುದ್ದೆ ಖಾಲಿ ಇದೆ. 6.60 ಲಕ್ಷ ಶಿಕ್ಷಕರು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿ
ದ್ದಾರೆ. ಈ ಹುದ್ದೆಗಳ ಕಾಯಂ ನೇಮಕಾತಿ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಶಿಕ್ಷಕರ ಶಿಕ್ಷಣದಲ್ಲಿ ಬದಲಾವಣೆ ತರಲು ನಾಲ್ಕು
ವರ್ಷದ ಬಿ.ಇಡಿ ಕೋರ್ಸ್‌ ಮಾಡುವುದಾಗಿ ಹೇಳಿದ್ದಾರೆ. ಆದರೆ, ಜಿಲ್ಲಾ ಮಟ್ಟದಲ್ಲಿ ಈಗಾಗಲೇ ಇರುವ ಶಿಕ್ಷಕರ ತರಬೇತಿ
ಕೇಂದ್ರಗಳನ್ನು ಉನ್ನತೀಕರಿಸುವ ಅಥವಾ ಹೊಸ ಬಿ.ಇಡಿ ಕಾಲೇಜು ತೆರೆಯುವ ಬಗ್ಗೆಯೂ ಪ್ರಸ್ತಾಪಿಸಿಲ್ಲ. 

ಶಿಕ್ಷಣ ಕ್ಷೇತ್ರಕ್ಕೆ ಮೂಲ ಬಜೆಟ್‌ನಲ್ಲಿ ಹಣ ಕಡಿಮೆ ಆಗುತ್ತಿದೆ. ಶಿಕ್ಷಣ ಸೆಸ್‌ ಪ್ರಮಾಣವನ್ನು ಶೇ.4ಕ್ಕೆ ಏರಿಸಿದ್ದಾರೆ. ಸರ್ಕಾರ ಮೂಲ ಬಜೆಟ್‌ನಲ್ಲಿ ಹಣ ನೀಡದೇ, ನಾಗರಿಕರ ತೆರಿಗೆ ಮೇಲೆ ಅವಲಂಬಿತವಾಗುವುದು ಸರಿಯಲ್ಲ. ಉತ್ತರ ಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಆರ್‌ಟಿಇಯಲ್ಲಿ ಸೂಚಿಸಿರುವ  ಪ್ರಮುಖವಾದ 8 ಅಂಶಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಸಾಧ್ಯವಾಗುತ್ತಿಲ್ಲ. 100 ಶಾಲೆಗಳಲ್ಲಿ 9 ಶಾಲೆಗಳು  ಮಾತ್ರ ಸುಸ್ಥಿರವಾಗಿದೆ. ಗುಣಮಟ್ಟ ಕಡಿಮೆಯಾಗುತ್ತಿದೆ. ಶಿಕ್ಷಣ ವ್ಯವಸ್ಥೆಯ ಸುಧಾರಣೆಯ ಮುನ್ಸೂಚನೆ ಬಜೆಟ್‌ ಇದಾಗಿಲ್ಲ. ಹತ್ತು ಹದಿನೈದು ಏಕಲವ್ಯ ಶಾಲೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಎಲ್ಲಾ ರಾಜ್ಯದ ಸರ್ಕಾರಿ ಶಾಲೆಗಳನ್ನು
ಏಕಲವ್ಯ ಶಾಲೆಯಾಗಿ ಮಾರ್ಪಡಿಸಬೇಕು. ಆರ್‌ಟಿಇ ಕಾಯ್ದೆಯ ಸಮರ್ಪಕ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಬೇಕಾದ
ರಾಜಕೀಯ ಕಾಳಜಿಯ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ.  

ನಿರಂಜನಾರಾಧ್ಯ ಶಿಕ್ಷಣ ತಜ್ಞ

Advertisement
Advertisement

Udayavani is now on Telegram. Click here to join our channel and stay updated with the latest news.

Next