ಬಸ್ ಬಂತು ಹೊರಡ್ರೋ ಬೇಗ ಹತ್ತಿ ಎಂಬ ಮಾತಿನಿಂದ ನಮ್ಮ ಪ್ರಯಾಣ ಆರಂಭವಾಯಿತು. ಅಂದಿನ ಪ್ರಯಾಣ ಯಾವ ಊರಿನತ್ತವೂ ಅಲ್ಲ. ಸ್ವರ್ಗಕ್ಕೆ! ಸ್ವರ್ಗದ ನಾಡಿಗೆ ಸೊಬಗಿನ ಬೀಡಿಗೆ.
ಹೋಗುವ ಪ್ರವಾಸಿ ತಾಣದ ಬಗ್ಗೆ ಎಲ್ಲರಲ್ಲೂ ಸಂತೋಷ, ಕುತೂಹಲ ಮನೆ ಮಾಡಿತ್ತು. ಬಸ್ ಪ್ರಯಾಣದುದ್ದಕ್ಕೂ ಅಂತ್ಯಾಕ್ಷರಿಯಲ್ಲಿ ನಾವು ಮಗ್ನರಾಗಿದ್ದರೆ ಬಸ್ ಮಲೆನಾಡಿನ ಘಟ್ಟದ ರಸ್ತೆಯನ್ನು ದಾಟುತ್ತಿತ್ತು. ಇಕ್ಕಟ್ಟಾದ ರಸ್ತೆ, ಎಲ್ಲಿ ನೋಡಿದರು ಹಚ್ಚ ಹಸುರಿನ ಮರ -ಗಿಡಗಳು. ಬಸ್ ಚಲಿಸುತ್ತಿದ್ದರೆ ಕಾಡು ನಡೆದಾಡುತ್ತಿದೆಯೇನೊ ಎಂಬ ಭಾವನೆ. ಇದು ನಮ್ಮನ್ನು ಮನ ಸೆಳೆಯಿತು.
ಬಸ್ ಮುಂದೆ ಮುಂದೆ ಹೋದಂತೆ ಕಾಡಿನಲ್ಲಿ ಇಳಿಯತೊಡಗಿದೆವು. ನಮ್ಮ ಕಣ್ಣ ಮುಂದೆ ದೊಡ್ಡ ಜಲಪಾತ ಕಂಡಿತು. ಅದುವೇ ವಡ್ಡಿ ಫಾಲ್ಸ್. ಶಿರಸಿಯಿಂದ ಯಾಣಕ್ಕೆ ಹೋಗುವ ದಾರಿಯಲ್ಲಿನ ವಡ್ಡಿ ಘಾಟ್‌ನಲ್ಲಿ ಈ ಫಾಲ್ಸ್ ಬರುತ್ತದೆ. ಮಳೆಗಾಲದಲ್ಲಿ ಈ ಫಾಲ್ಸ್ ದೃಶ್ಯ ವೈಭವವನ್ನೇ ಸೃಷ್ಟಿಸುತ್ತದೆ.
ಬರಡಾದ ಭೂಮಿ, ಖಾಲಿ ಕೊಡಗಳು, ಬಿಸಿಲ ಝಳ, ಒಣಗಿದ ತುಟಿ, ಎತ್ತರೆತ್ತರ ಗಗನಚುಂಬಿ ಕಟ್ಟಡಗಳನ್ನು ನೋಡಿದ ಕಣ್ಣುಗಳ ಎದುರಿಗೆ ಪ್ರತ್ಯಕ್ಷವಾದದ್ದೇ ಧುಮ್ಮಿಕ್ಕುವ ಜಲಪಾತ. ಆಕಾಶದಿಂದಲೇ ನೀರು ಬಿಳಿ ಪದರು, ಪದರಾಗಿ ಧರೆಗಿಳಿದಂತೆ ಜಲಪಾತ ಕಾಣುತ್ತಿದ್ದರೆ, ದಬ-ದಬ ಸದ್ದು ಕಿವಿಗೆ ಉಮ್ಮಳಿಸಿ ಬಡಿಯುತ್ತಿತ್ತು.
ಪಕ್ಕಕ್ಕಿರುವ ಕಾಡು ಅಲ್ಲದ, ಕಣಿವೆಯೂ ಅಲ್ಲದ ಒಂದು ವಡ್ಡಿ ಪ್ರದೇಶವನ್ನು ಹತ್ತುತ್ತಿದ್ದರೆ ಏಣಿ ಇಲ್ಲದೆ ಎತ್ತರದ ಪ್ರದೇಶ ಹತ್ತುತ್ತಿರುವಂತೆ ಭಾಸವಾಗುತ್ತಿತ್ತು. ಒಮ್ಮೆ ಹಿಂತಿರುಗಿ ನೋಡಿದರೆ ಕಾಣದ ನೆಲ. ಪಕ್ಕಕ್ಕೆ ಹರಿಯುತ್ತಿದ್ದ ಜಲಪಾತ ಹತ್ತಿದ್ದಷ್ಟು ಮುಗಿಯದ ಕಾಡು. ಮುಂದೆ ಹೊರಟ ಜನರ ಉತ್ಸಾಹ ನೋಡಿ ಉಳಿದ ಕಾಲುಗಳಿಗೂ ಶಕ್ತಿ. ತರಲೆಳೆಗಳು, ಹಸಿಮಣ್ಣು , ಹಿಡಿದುಕೊಳ್ಳಲು ಸ್ಥಿರವಾಗಿ ನಿಂತ ಬಿಳಲುಗಳು, ಆಗಾಗ ಸಹಾಯಕ್ಕೆ ಬರುತ್ತಿದ್ದ ಕೈಗಳು. ಆದರೂ ಜಾರುತ್ತಿದ್ದ ಕಾಲುಗಳು ಹೀಗೆ ಕಾಡನ್ನು ಅನುಭವಿಸುತ್ತಾ ಪ್ರಕೃತಿಯ ರಮಣೀಯತೆಯಲ್ಲಿ ನಾವು ಒಂದಾಗಿ ಹೊಸ ಪ್ರಪಂಚ ಕಂಡೆವು.
ಯಾರ ಹಂಗಿಲ್ಲದೇ ಸ್ವತ್ಛಂದವಾಗಿ ಹರಿಯುವ ನೀರು, ಪ್ರಕೃತಿಯ ನೋಟ, ಜಲಪಾತದ ಭೋರ್ಗರೆತ, ರಭಸದಿಂದ ಧುಮ್ಮಿಕ್ಕು ವಾಗ ಸಿಡಿಯುವ ಹನಿಗಳ ಸ್ಪರ್ಶ ಮನಸ್ಸನ್ನು ಪುಳಕಿಸಿ, ಪ್ರಕೃತಿ ಮತ್ತು ನಮ್ಮ ಮಧ್ಯೆ ಆತ್ಮೀಯತೆ ಬೆಳೆದು ನಿಲ್ಲಿಸಿತು. ಕೊನೆಗೆ ಮನಸ್ಸಿಲ್ಲದ ಮನಸ್ಸಿನಿಂದ ಮರಳಿದೆವು. ಅಷ್ಟು ಹೊತ್ತು ಜಲಪಾತದಲ್ಲಿ ಕಾಲು ನೆನೆದದ್ದರಿಂದ ಮರಳಿನ ರಸ್ತೆಯಲ್ಲಿ ಕಾಲು ಇಟ್ಟಾಗ ಸುರ್ರೆಂದು ಜಾರತೊಡಗಿದವು. ಈ ಜಲಪಾತದ ಪ್ರಯಾಣ ನಮ್ಮಲ್ಲೊಂದು ಬದುಕುವ ಹುಮ್ಮಸ್ಸನ್ನು ನೀಡಿತ್ತು. ನೀರಿನಂತೆ ಸ್ವತ್ಛಂದ ಬದುಕು ಕಟ್ಟಿಕೊಳ್ಳುವ ಆಶಯ ಈ ಪ್ರಯಾಣದಿಂದ ನಮಗೆ ದೊರೆಯಿತು.
ಮಹಿಮಾ ಭಟ್ , ಧಾರವಾಡ ವಿವಿ, ಧಾರವಾಡ