Advertisement

ನಡೆದಾಡುವ ದೇವರ ದೃಶ್ಯ-ಕಾವ್ಯ

06:00 AM Jan 22, 2019 | |

“ನಡೆದಾಡುವ ದೇವರು’ ಚಲನಚಿತ್ರದ ಕ್ಯಾಮೆರಾಗಳಿಗೂ ಸೆರೆ ಆದವರು. ಸಂಪೂರ್ಣವಾಗಿ ಅವರ ಬಯೋಪಿಕ್‌ ಬರದೇ ಹೋದರೂ, ಶ್ರೀಗಳ ಬದುಕಿನ ಬಹುಭಾಗವನ್ನು ಸ್ಪರ್ಶಿಸಿದ ಸಿನಿಮಾಗಳು ಬಂದಿವೆ. ಮಠದ ಹಾಡುಗಳಲ್ಲಿ ಅವರ ದರ್ಶನವಾಗಿದೆ. ಸಾಕ್ಷ್ಯಚಿತ್ರದಲ್ಲೂ ಅವರ ಜೀವನ-  ಸಾಧನೆಯನ್ನು ಕಟ್ಟಿಕೊಡಲಾಗಿದೆ…  

Advertisement

ಜ್ಞಾನಜ್ಯೋತಿ ಶ್ರೀ ಸಿದ್ಧಗಂಗಾ… ಇದು ಶ್ರೀಗಳ ಬದುಕಿನ ಬಗ್ಗೆ ಬೆಳಕು ಚೆಲ್ಲಿದ ಸಿನಿಮಾ. ಇದರಲ್ಲಿ ನಾನು 700 ವರ್ಷಗಳ ಇತಿಹಾಸವನ್ನು ಹೇಳಿದ್ದೇನೆ.  ಅಲ್ಲೊಂದು ಬೆಟ್ಟ. ಅಲ್ಲಿ ಗೋಸಲ ಸಿದ್ದೇಶ್ವರರು ಮೊದಲು ಬಂದು ನೆಲೆಸಿದ್ದರು. ಅದೊಂದು ರಾತ್ರಿ ಮಲಗಿದ್ದಾಗ, ಅವರ ಶಿಷ್ಯಂದಿರಿಗೆ ಬಾಯಾರಿಕೆ ಆಯಿತು.  ಶ್ರೀಗಳು ತಮ್ಮ ಹೆಬ್ಬೆಟ್ಟಿನಲ್ಲಿ ಬೆಟ್ಟದ ಕಲ್ಲನ್ನು ಪುಡಿಮಾಡಿ, ನೀರು ಚಿಮ್ಮುವಂತೆ ಮಾಡಿ, ಶಿಷ್ಯರ ಬಾಯಾರಿಕೆಯನ್ನು ನೀಗಿಸಿದ್ದರು.

ಈ ಕಾರಣಕ್ಕೆ  ಆ ಸ್ಥಳಕ್ಕೆ “ಸಿದ್ಧಗಂಗಾ’ ಎಂಬ ಹೆಸರು ಬಂತು ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇನೆ. ಅವರ ಬಳಿಕ ಅಲ್ಲಿಗೆ ಚನ್ನಬಸವೇಶ್ವರರು ಬಂದರು. ಅಲ್ಲಿಂದ  ಅವರು ಗುಬ್ಬಿಗೆ ಹೋಗಿ ಅನುಷ್ಠಾನಗೊಂಡರು. ಆ ನಂತರ ಗೋಸಲ ಅವರ ಶಿಷ್ಯ ಎಡೆಯೂರು ಸಿದ್ಧಲಿಂಗೇಶ್ವರರ ಪ್ರವೇಶ. ಅಟವಿ ಸ್ವಾಮೀಜಿ  ಎಂಬ ಮಹಾನ್‌ಪುರುಷ ಅಲ್ಲಿಗೆ ಬಂದು ಪ್ರಥಮ ಬಾರಿಗೆ ದಾಸೋಹ ಆರಂಭಿಸಿದರು.

ಅವರು ಹಚ್ಚಿದ ಒಲೆ ಇವತ್ತಿಗೂ ನಿರಂತರವಾಗಿ ಉರಿಯುತ್ತಲೇ  ಇದೆ. ಇವೆಲ್ಲ ಇತಿಹಾಸವನ್ನು ಹೇಳುತ್ತಲೇ, ಶ್ರೀ ಶಿವಕುಮಾರ ಸ್ವಾಮೀಜಿಗಳ ಬದುಕನ್ನೂ ಚಿತ್ರಿಸಿದ್ದೇನೆ. ಅವರ ಹುಟ್ಟೂರು, ವಿದ್ಯಾಭ್ಯಾಸ, ಸಾಧನೆ, ಮಠದ ಅಭಿವೃದ್ಧಿ, ಶಿಕ್ಷಣ, ದಾಸೋಹ ಇನ್ನಿತರ ಸಂಗತಿಗಳ ಬಗ್ಗೆ ಸಿನಿಮಾದ ಫೋಕಸ್‌ ಇದೆ. ಸುಮಾರು 35 ದಿನಗಳ ಕಾಲ ನಡೆದ  ಚಿತ್ರೀಕರಣವಿದು.

ಶ್ರೀ ಸಿದ್ಧಗಂಗಾ ಮಠ, ವೀರಾಪುರ ಗ್ರಾಮ, ಶಿವಗಂಗೆಯ ಸುತ್ತಮುತ್ತ ಶೂಟಿಂಗ್‌ ನಡೆಸಿದ್ದೆ. ಬಾಲ್ಯದ ದೃಶ್ಯಗಳನ್ನು ಬಿಟ್ಟು, ನಂತರ  ಕಾಣುವ  ದೃಶ್ಯಗಳಲ್ಲಿ ಶ್ರೀಗಳನ್ನೇ ಚಿತ್ರೀಕರಿಸಿರುವುದು ವಿಶೇಷ. ಅದು ನನ್ನ ಅದೃಷ್ಟ. “ಕಾಣುವ ದೇವರು ಇವರು ಸಿದ್ಧಗಂಗೆಯ ಪೂಜ್ಯರು’ ಎಂಬ ಹಾಡಿನಲ್ಲೇ ಅವರೇ ಸಾಕ್ಷಾತ್‌ ದೇವರಾಗಿದ್ದಾರೆ. ಈ ಚಿತ್ರದ ಮತ್ತೂಂದು ವಿಶೇಷ, ನಟ ಡಾ. ವಿಷ್ಣುವರ್ಧನ್‌ ಹಾಗೂ ಭಾರತಿ ವಿಷ್ಣುವರ್ಧನ್‌ ಅವರು ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿರುವುದು.

Advertisement

ಶ್ರೀಗಳ ಪಾದಪೂಜೆ ಮಾಡುವ ದೃಶ್ಯದಲ್ಲಿ ಅವರು ನಟಿಸಿದ್ದರು. ನಿಜಕ್ಕೂ ಅದೊಂದು ಭವ್ಯ ನೋಟ. ಪ್ರಸ್ತುತ,  “ಕಾಯಕ ಯೋಗಿ’ ಎಂಬ ಚಿತ್ರವನ್ನು ನಿರ್ದೇಶಿಸಲು ತಯಾರಿ ನಡೆಸಿದ್ದೇನೆ. ಸ್ವತಃ ಶ್ರೀಗಳೇ ಈ ಚಿತ್ರಕ್ಕೆ ಕ್ಲಾಪ್‌ ಮಾಡಿ, ಆಶೀರ್ವಾದ ಮಾಡಿದ್ದರು. ಇದಲ್ಲದೇ, ಮಠದ ಕುರಿತು ಭಕ್ತಿಗೀತೆಗಳನ್ನು ರಚಿಸುವ ಅವಕಾಶ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯ. ಆ ಅನುಭವವೇ ಅನನ್ಯ.

ಅದು 1988 ರ ಆಸುಪಾಸು. ಆ ಶಿವಯೋಗಿ ಮಠದ ಕುರಿತು ಮೊದಲ ಬಾರಿಗೆ ಗೀತೆಗಳನ್ನು ಬರೆದು ಕ್ಯಾಸೆಟ್‌ ಮಾಡಿದ್ದೆ. ಅದಕ್ಕೆ “ಶ್ರೀ ಸಿದ್ಧಗಂಗಾ’ ಎಂಬ  ಹೆಸರಿಟ್ಟು, ಮಠ ಮತ್ತು ಶ್ರೀಗಳ ಕುರಿತಂತೆ 8 ಭಕ್ತಿ ಗೀತೆಗಳನ್ನು ಬರೆದಿದ್ದೆ. ಜೀವನದಲ್ಲಿ ಬರಹಗಾರನಾಗಿ ಗುರುತಿಸಿಕೊಂಡಿದ್ದೇ, ಆ ಗೀತೆಗಳನ್ನು ರಚಿಸುವ  ಮೂಲಕ. ಅದುವರೆಗೂ ಶ್ರೀಗಳ ಕುರಿತು ಯಾವುದೇ ಆಡಿಯೋ ಕ್ಯಾಸೆಟ್‌ಗಳು ಬಂದಿರಲಿಲ್ಲ.

ಬಳಿಕ “ಶ್ರೀ ಸಿದ್ಧಗಂಗಾಮೃತ’ ಎಂಬ ಹೆಸರಿನಲ್ಲಿ  ಪುನಃ ಭಕ್ತಿಗೀತೆಗಳನ್ನು ರಚಿಸಿ, ಮತ್ತೂಂದು ಆಡಿಯೋ ಕ್ಯಾಸೆಟ್‌ ಬಿಡುಗಡೆ ಮಾಡಿದ್ದೆ. ಸುಮಾರು 30ಕ್ಕೂ ಹೆಚ್ಚು ಭಕ್ತಿಗೀತೆಯ ಆಡಿಯೋ ಕ್ಯಾಸೆಟ್‌ಗಳನ್ನು ಮಾಡಿದ್ದೇನೆ. ಅದರೊಂದಿಗೆ ಮಠದ ಇತಿಹಾಸದ ಕುರಿತಂತೆ, “ಶ್ರೀ ಸಿದ್ಧಗಂಗಾ ದರ್ಶನ’ ಹೆಸರಿನ ವಿಡಿಯೋ ಸಾಂಗ್‌ ಕೂಡ  ಮಾಡಿದ್ದೇನೆ. 

* ಓಂಕಾರ್‌ (ಪುರುಷೋತ್ತಮ್‌), ಚಲನಚಿತ್ರ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next