Advertisement

ಬಾಡಿಗೆ ತೆತ್ತು ಸರಕಾರಿ ಶಾಲಾ ಮುಖ್ಯ ಶಿಕ್ಷಕರ ಜೇಬಿಗೆ ಕತ್ತರಿ

09:39 PM Jun 01, 2019 | Team Udayavani |

ಬೆಳ್ತಂಗಡಿ: ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸರಕಾರ ನೀಡುತ್ತಿರುವ ಪಠ್ಯಪುಸ್ತಕಗಳ ವಿತರಣೆ ಅಸಮರ್ಪಕವಾಗಿರುವುದರಿಂದ, ಬಾಡಿಗೆ ವಾಹನ ಮೂಲಕ ಪದೇ ಪದೇ ಶಾಲೆಗೆ ಪುಸ್ತಕ ಸಾಗಿಸುತ್ತಿರುವ ಸರಕಾರಿ ಶಾಲೆಗಳ ಶಿಕ್ಷಕರ ಜೇಬಿಗೆ ಕತ್ತರಿ ಬೀಳುತ್ತಿದೆ!

Advertisement

ಸರಕಾರವು ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲಾ ಪಠ್ಯಪುಸ್ತಕವನ್ನು ನೀಡುತ್ತಿದ್ದು, ಸರಕಾರಿ, ಅನುದಾನಿತ ಶಾಲೆಗಳಿಗೆ ಉಚಿತವಾಗಿ ಹಾಗೂ ಖಾಸಗಿ ಶಾಲೆಗಳಿಂದ ಶುಲ್ಕ ಪಡೆದು ಪುಸ್ತಕ ವಿತರಿಸಲಾಗುತ್ತಿದೆ. ಆದರೆ ಪಠ್ಯ ಪುಸ್ತಕ ವಿತರಿಸುವ ಸಂಸ್ಥೆ ಎಲ್ಲ ಪುಸ್ತಕಗಳನ್ನು ಏಕಕಾಲದಲ್ಲಿ ವಿತರಿಸದೇ ಇರುವುದರಿಂದ ಪ್ರಸ್ತುತ ಸರಕಾರಿ ಶಾಲೆಗಳ ಶಿಕ್ಷಕರು ತೊಂದರೆಗೀಡಾಗಿದ್ದಾರೆ.

ಸರಕಾರದಿಂದ ಪೂರೈಕೆಯಾಗುವ ಪುಸ್ತಕಗಳನ್ನು ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ಗೋದಾಮಿಗೆ ಪೂರೈಕೆ ಮಾಡಲಾಗುತ್ತದೆ. ಅಲ್ಲಿಂದ ಪಠ್ಯಪುಸ್ತಕಗಳನ್ನು ಕ್ಲಸ್ಟರ್‌ ಕೇಂದ್ರಕ್ಕೆ ಕಳುಹಿಸಿ, ಬಳಿಕ ಅಲ್ಲಿಂದ ಶಾಲೆಗಳ ಶಿಕ್ಷಕರು ತಮ್ಮದೇ ಖರ್ಚಿನಿಂದ ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಬೇಕಾಗುತ್ತದೆ.

ಖಾಸಗಿ,ಅನುದಾನಿತ ಶಾಲೆಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಇರುವುದರಿಂದ ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸುವ ಜವಾಬ್ದಾರಿಗಳನ್ನು ಅವರು ಹೊರ ಬಹುದು. ಆದರೆ ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಖರ್ಚಿನಿಂದಲೇ ಅದನ್ನು ಶಾಲೆಗೆ ತಲುಪಿಸಬೇಕಾಗುತ್ತದೆ.

ಪಠ್ಯಪುಸ್ತಕಗಳು ಒಮ್ಮೆಲೇ ಬಂದರೆ ತೊಂದರೆ ಇರುವುದಿಲ್ಲ. ಪದೇ ಪದೇ ಪುಸ್ತಕಗಳು ಆಗಮಿಸುವುದರಿಂದ ಪದೇ ಪದೇ ಖಾಸಗಿ ವಾಹನಗಳಿಗೆ ಬಾಡಿಗೆ ಕೊಟ್ಟು ಸಾಗಿಸಬೇಕಾದ ಸ್ಥಿತಿ ಇದೆ. ಕ್ಲಸ್ಟರ್‌ ಕೇಂದ್ರದ ಹತ್ತಿರದ ಶಾಲೆಗಳಿಗೆ ತೊಂದರೆ ಆಗದಿದ್ದರೂ ತೀರಾ ಗ್ರಾಮೀಣ ಶಾಲಾ ಶಿಕ್ಷಕರು ದುಬಾರಿ ಬಾಡಿಗೆ ತೆರಬೇಕಿದೆ.

Advertisement

ನೋಡಲ್‌ಗ‌ಳಿಗೆ ನಿದ್ದೆಯಿಲ್ಲ
ಪ್ರತಿ ಶಾಲೆಗಳಿಂದ ಪಠ್ಯಪುಸ್ತಕಗಳ ಬೇಡಿಕೆ ಸ್ವೀಕರಿಸುವುದು, ಅದರ ವಿತರಣೆಗೆ ಸಂಬಂಧಿಸಿ ಪ್ರತಿ ಬಿಇಒ ಕಚೇರಿಗಳಲ್ಲಿ ಒಬ್ಬೊಬ್ಬರು ನೋಡಲ್‌ ಅಧಿಕಾರಿಗಳು ಇರುತ್ತಾರೆ. ಪಠ್ಯಪುಸ್ತಕಗಳು ಗೋದಾಮಿಗೆ ಆಗಮಿಸುವುದಕ್ಕೆ ನಿಗದಿತ ವೇಳೆ ಇಲ್ಲದೇ ಇರುವುದರಿಂದ ತಡರಾತ್ರಿ ಪುಸ್ತಕ ಬಂದರೂ ಎದ್ದು ಹೋಗಬೇಕಾಗುತ್ತದೆ.

ಜತೆಗೆ ರವಿವಾರ ಸಹಿತ ನಿಗದಿತ ದಿನವನ್ನು ತಿಳಿಸದೇ ಪುಸ್ತಕ ಆಗಮಿಸುವು ದರಿಂದ ನೋಡಲ್‌ಗ‌ಳು ನಿದ್ದೆ, ರಜೆಯನ್ನು ಬಿಟ್ಟು 24×7 ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಮಾರ್ಚ್‌ 13ಕ್ಕೆ ಪಠ್ಯಪುಸ್ತಕಗಳ ಸ್ಟಾಕ್‌ ಆಗಮಿಸುವುದಕ್ಕೆ ಆರಂಭಿಸಿದ್ದು, ಈಗಲೂ ನಿಗದಿತ ಸಮಯವಿಲ್ಲದೆ ಪುಸ್ತಕಗಳು ಬರುತ್ತಿವೆ.

ಗೋದಾಮು ಸಮರ್ಪಕವಿಲ್ಲ!
ಪಠ್ಯಪುಸ್ತಕ ದಾಸ್ತಾನಿರಿಸುವ ಕ್ಷೇತ್ರ ಶಿಕ್ಷಾಣಾಧಿಕಾರಿ ಕಚೇರಿ ವ್ಯಾಪ್ತಿಯ ಗೋದಾಮುಗಳು ಬಹುತೇಕ ಕಡೆ ಸಮರ್ಪಕವಾಗಿಲ್ಲದ ಪರಿಣಾಮ ಈ ತೊಂದರೆ ಎದುರಾಗುತ್ತದೆ. ಗೋದಾಮುಗಳಲ್ಲಿ ಗೆದ್ದಲು-ಇಲಿಗಳ ಕಾಟ, ಮಳೆಗೆ ಸೋರುವಿಕೆ ಮೊದಲಾದ ತೊಂದರೆ ಇರುವುದರಿಂದ ಪುಸ್ತಕಗಳನ್ನು ಹೆಚ್ಚು ದಿನ ದಾಸ್ತಾನಿರಿಸದೇ ಪದೇ ಪದೇ ಅದನ್ನು ಕ್ಲಸ್ಟರ್‌ಗಳಿಗೆ ಕಳುಹಿಸಲಾಗುತ್ತದೆ. ಕ್ಲಸ್ಟರ್‌ನವರು ತಮಗೆ ಪುಸ್ತಕ ಬಂದರೆ ಶಾಲೆಗಳ ಮುಖ್ಯ ಶಿಕ್ಷಕರನ್ನು ಕರೆಸಿ ಪುಸ್ತಕಗಳನ್ನು ಕೊಂಡು ಹೋಗುವಂತೆ ಹೇಳುತ್ತಾರೆ. ಎಲ್ಲ ಪುಸ್ತಕಗಳು ಬರುವಂತೆ ಗೋದಾಮಿನಲ್ಲೇ ದಾಸ್ತಾನಿಟ್ಟು ಏನಾದರೂ ಪುಸ್ತಕಗಳಿಗೆ ತೊಂದರೆಯಾದರೆ ಆಗ ಸಂಬಂಧಪಟ್ಟ ಬಿಇಒ ಕಚೇರಿಗಳ ನೋಡಲ್‌ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ.

ಬೆಳ್ತಂಗಡಿಯಲ್ಲಿ ಹೀಗಿದೆ
ಬೆಳ್ತಂಗಡಿ ತಾಲೂಕು ಬಿಇಒ ಕಚೇರಿಯ ಗೋದಾಮು ಉಜಿರೆ ಹಳೆಪೇಟೆಯಲ್ಲಿದ್ದು, ಒಟ್ಟು 214 ಶಾಲೆ (ಸರಕಾರಿ ಹಾಗೂ ಅನುದಾನಿತ ಮಾತ್ರ)ಗಳಿಗೆ 19 ಕ್ಲಸ್ಟರ್‌ಗಳಿವೆ. ತಾಲೂಕಿಗೆ ಈಗಾಗಲೇ ಸುಮಾರು ಶೇ. 60 ರಷ್ಟು ಪಠ್ಯಪುಸ್ತಕಗಳು ಆಗಮಿಸಿದ್ದು, ಅದನ್ನು ವಿತರಣೆ ಮಾಡಲಾಗಿದೆ. ಪ್ರಸ್ತುತ ಮತ್ತೆ ಶೇ. 12 ಪುಸ್ತಕಗಳು ಆಗಮಿಸಿದ್ದು, ಗೋದಾಮು ಸರಿ ಇಲ್ಲದೇ ಇರುವುದರಿಂದ ಅದನ್ನೂ ಕೂಡ ಶೀಘ್ರದಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ ಎಂದು ಬಿಇಒ ಕಚೇರಿ ಅಧಿಕಾರಿ ತಿಳಿಸಿದ್ದಾರೆ. ಈಗಾಗಲೇ ಮೂರು ಬಾರಿ ಶಿಕ್ಷಕರು ಕ್ಲಸ್ಟರ್‌ ಕೇಂದ್ರಕ್ಕೆ ಆಗಮಿಸಿ ಪುಸ್ತಕಗಳನ್ನು ಸಾಗಿಸಿದ್ದಾರೆ.

 ಶೇ. 60ರ‌ಷ್ಟು ವಿತರಣೆ
ಪ್ರತಿ ತರಗತಿಗೆ ಭಾಷಾ ವಿಷಯಕ್ಕೆ ಸಂಬಂಧಿಸಿ ವರ್ಷಕ್ಕೆ ಒಂದೇ ಪುಸ್ತಕ ಬಂದರೆ, ಗಣಿತ, ಸಮಾಜ ವಿಜ್ಞಾನ ಹಾಗೂ ವಿಜ್ಞಾನಕ್ಕೆ ಭಾಗ 1 ಹಾಗೂ 2 ಬರುತ್ತದೆ. ಗೋದಾಮಿಗೆ ಬಂದ ಯಾವುದೇ ಪುಸ್ತಕಗಳನ್ನು ಹೆಚ್ಚು ದಿನ ಉಳಿಸಿಕೊಳ್ಳದೆ ವಿತರಣೆ ಮಾಡಲಾಗುತ್ತದೆ. ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿ ಈಗಾಗಲೇ ಶೇ. 60ರಷ್ಟು ಪುಸ್ತಕ ವಿತರಣೆಯಾಗಿದೆ. ಪ್ರಸ್ತುತ ಶೇ. 12ರ‌ಷ್ಟು ಪುಸ್ತಕ ಬಂದಿದ್ದು, ಅದನ್ನು ಶೀಘ್ರದಲ್ಲಿ ವಿತರಣೆ ಮಾಡಲಾಗುವುದು.
– ರಮೇಶ್‌, ನೋಡಲ್‌ ಅಧಿಕಾರಿ, ಬಿಇಒ ಕಚೇರಿ, ಬೆಳ್ತಂಗಡಿ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next