ವಾಡಿ: ಕಾಲು ಕಸವಾಗಿ ಬಿದ್ದು ತಿಪ್ಪೆಸೇರಿ ಕೊಳೆಯುತ್ತಿದ್ದ ಗೃಹ ಬಳಕೆಯ ವಿವಿಧ ವಸ್ತುಗಳ ತ್ಯಾಜ್ಯ ಹೂವಾಗಿ ಅರಳಿ ನಿಂತು ಮರಳಿ ಮನೆಯ ಗೋಡೆಗಳ ಅಂದ ಹೆಚ್ಚಿಸಿದವು. ಮಕ್ಕಳ ಕೈಚಳಕದಿಂದ ಕಸವೂ ರಸವಾಗಿ ಮೌಲ್ಯ ತಂದುಕೊಟ್ಟವು.
ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಸಚ್ಚಿದಾನಂದ ಪ್ರೌಢಶಾಲೆ ಇಕೋಕ್ಲಬ್‌ನ ವಿದ್ಯಾರ್ಥಿಗಳು, ತಿಪ್ಪೆ ಕಸ ಹೆಕ್ಕಿತಂದು ತರತರದ ಹೂದಾನಿಗಳನ್ನು ಸಿದ್ಧಪಡಿಸುವ ಮೂಲಕ ಬಣ್ಣ ಲೇಪಿಸಿ ಬೆರಗಾಗುವಂತೆ ಮಾಡಿದರು.
ನಾವು ನಿತ್ಯ ಉಪಯೋಗಿಸಿ ಬೀಸಾಡುವ ಪ್ಲಾಸ್ಟಿಕ್ ಚೀಲಗಳು, ಕಾಗದ, ಕುರ್‌ಕುರೆ ಪ್ಯಾಕೇಟ್, ರಬ್ಬರ್, ಬಾಟಲಿ, ಗಾಜು, ಐಸ್‌ಕ್ರೀಂ ಕಡ್ಡಿ, ಬೆಂಕಿ ಪೊಟ್ಟಣ, ರಟ್ಟು, ಚಹಾ ಕಪ್ಪು ಸೇರಿದಮತೆ ವಿವಿಧ ರೀತಿಯ ಘನತ್ಯಾಜ್ಯ ವಸ್ತುಗಳನ್ನೇ ಕತ್ತರಿಸಿ ಜೋಡಿಸಿ, ಅವುಗಳಿಗೆ ಕಲ್ಪನೆಯ ಚಿತ್ರದ ರೂಪ ಕೊಟ್ಟರು. ಕಸದಿಂದ ಸಿದ್ಧಪಡಿಸಿದ ಸುಂದರ ವಸ್ತುಗಳನ್ನು ಶಿಕ್ಷಕರಿಗೆ ಕೊಟ್ಟು ಪ್ರತಿಭೆ ಮೆರೆದರು.
ಕಸದಿಂದ ರಸ ಎನ್ನುವ ಸ್ಲೋಗನ್ ಹೊತ್ತು ಶಾಲೆಯಲ್ಲಿ ಸ್ಥಾಪಿಸಲಾದ ಇಕೋಕ್ಲಬ್‌ನ ಸದಸ್ಯ ವಿದ್ಯಾರ್ಥಿಗಳು, ಮೊದಲ ಕಾರ್ಯಕ್ರಮದಲ್ಲೆ ಯಶಸ್ಸು ಕಂಡು ಶಿಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಇಕೋಕ್ಲಬ್ ಸಂಯೋಜಕಿ ಸುಗುಣಾ ಕೋಳಕೂರ ಮಾರ್ಗದರ್ಶನದಲ್ಲಿ ಕಸದಿಂದ ರಸ ಮಾಡುವ ಕಲೆ ಕಲೆತುಕೊಂಡ ವಿದ್ಯಾರ್ಥಿ ಸಮುದಾಯ, ಪರಿಸರ ಜಾಗೃತಿ ಮೂಡಿಸುವತ್ತ ಯಶಸ್ವಿ ಹೆಜ್ಜೆ ಹಾಕಿದರು.
ತೀರ್ಪುಗಾರರಾಗಿದ್ದ ಸಚ್ಚಿದಾನಂದ ಪಪೂ ಕಾಲೇಜಿನ ಪ್ರಾಂಶುಪಾಲ ಕೆ.ಐ. ಬಡಿಗೇರ ಅವರು ಹತ್ತು ಮಕ್ಕಳನ್ನು ಅತ್ಯತ್ತಮ ಕರಕುಶಲ ಕಲೆಗಾಗಿ ಆಯ್ಕೆ ಮಾಡಿದರು. ಇಕೋಕ್ಲಬ್ ಸಂಯೋಜಕಿ ಸುಗುಣಾ ಕೋಳಕೂರ, ಮುಖ್ಯಶಿಕ್ಷಕ ವಿದ್ಯಾಧರ ಖಂಡಾಳ, ಶಿಕ್ಷಕರಾದ ಈಶ್ವರಗೌಡ ಪಾಟೀಲ, ಸಿದ್ದಲಿಂಗ ಬಾಳಿ, ಭುವನೇಶ್ವರಿ ಎಂ., ಶಿವುಕುಮಾರ ಸರಡಗಿ, ರಾಧಾ ರಾಠೊಡ ಪಾಲ್ಗೊಂಡಿದ್ದರು.