ಧಾರವಾಡ: ಕೇಂದ್ರ ಸರಕಾರ ವಿಧಿಸಿರುವ ಸ್ಯಾನಿಟರಿ ಪ್ಯಾಡ್‌ಗಳ ಮೇಲಿನ ತೆರಿಗೆ ಹಿಂಪಡೆಯುವಂತೆ ಆಗ್ರಹಿಸಿ ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಡಾ|ಎಸ್.ಬಿ.ಬೊಮ್ಮನಹಳ್ಳಿ ಅವರ ಮೂಲಕ ಕೇಂದ್ರ ಸರಕಾರಕ್ಕೆ ಗುರುವಾರ ಮನವಿ ಸಲ್ಲಿಸಲಾಯಿತು.
ದೇಶದಲ್ಲಿ ಸರಾಸರಿ 11-12 ಪ್ರಾಯದ ಬಾಲಿಕೆಯರಿಂದ 50 ವರ್ಷದ ಮಹಿಳೆಯರಿಗೆ ತಮ್ಮ ಋತುಚಕ್ರದ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅವಶ್ಯವಾದ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಆದರೆ ಕೇಂದ್ರ ಸರಕಾರವು ಜು.1ರಿಂದ ಜಿಎಸ್‌ಟಿ ಜಾರಿಗೊಳಿಸಿದ್ದು, ಇದರಲ್ಲಿ ಹೆಣ್ಣು ಮಕ್ಕಳು ಬಳಸುವ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಶೇ.12ರಷ್ಟು ತೆರಿಗೆ ವಿಧಿಸಿದೆ.
ಇದು ಸರಿಯಾದ ಕ್ರಮವಲ್ಲ. ಇದರಿಂದ ಮಧ್ಯಮ ವರ್ಗದ ಹಾಗೂ ಬಡ ವರ್ಗದ ಮಹಿಳೆಯರಿಗೆ ಹೊರೆಯಾಗಲಿದೆ ಎಂದು ದೂರಲಾಗಿದೆ. ಜಿಎಸ್‌ಟಿನಲ್ಲಿ ಸರ್ಕಾರವು ಶ್ರೀಮಂತರು ಬಳಸುವ ಕಾರುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಮಹಿಳೆಯರ ಆರೋಗ್ಯಕ್ಕೆ ಅವಶ್ಯವಿರುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ತೆರಿಗೆ ವಿಧಿಸಿದೆ.
ಅಂತೆಯೇ ಈಗ ಮಹಿಳೆಯರು ಉದ್ಯೋಗಿಗಳಾಗಿದ್ದು, ವಾಷಿಂಗ್ ಮೆಷಿನ್, ಫ್ರಿಡ್ಜ್ ಇವುಗಳನ್ನು ಅವರು ತಮ್ಮ ಜೀವನ ಸುಗಮಗೊಳಿಸಿಕೊಳ್ಳಲು ಬಳಸಲು ಅಪೇಕ್ಷಿಸುತ್ತಾರೆ. ಇನ್ಮುಂದೆ ಅವೂ ದುಬಾರಿಯಾಗಿದೆ ಎಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂದರ್ಭದಲ್ಲಿ ಸರ್ಕಾರ ವಿಧಿಸಿರುವ ತೆರಿಗೆಯನ್ನು ಹಿಂಪಡೆಯಬೇಕು ಮಾತ್ರವಲ್ಲ,
ಉಚಿತವಾಗಿ ಆರೋಗ್ಯ ಕೇಂದ್ರಗಳ ಮೂಲಕ, ಅಂಗನವಾಡಿ ಕೇಂದ್ರಗಳ ಮೂಲಕ, ಶಾಲಾ ಕಾಲೇಜು-ಕಚೇರಿಗಳಲ್ಲಿ, ಸಾರ್ವಜನಿಕ ಶೌಚಾಲಯಗಳಲ್ಲಿ ಸ್ಯಾನಿಟರಿ ಪ್ಯಾಡ್ ಗಳು ಉಚಿತವಾಗಿ ದೊರೆಯುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಜಿಲ್ಲಾಧ್ಯಕ್ಷೆ ಭುವನಾ, ಉಪಾಧ್ಯಕ್ಷೆ ಮಧುಲತಾ ಗೌಡರ್, ವಿಜಯಲಕೀ ದೇವದ್‌ಕಲ್, ನಿಂಗಮ್ಮ ಹುಡೇದ್, ದೇವಮ್ಮ ದೇವದ್‌ಕಲ್ಲ ಇದ್ದರು.