Advertisement

ಮತ್ತೆ ಶುರುವಾದ ಸಂಗೊಳ್ಳಿ ರಾಯಣ್ಣ  ಬ್ರಿಗೇಡ್‌ ಕಾರ್ಯಚಟುವಟಿಕೆ

03:45 AM Apr 21, 2017 | |

ಬೆಂಗಳೂರು: ರಾಜ್ಯದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸಲು ತೀರ್ಮಾನಿಸಲಾಗಿದ್ದು, ಆ ನಿಟ್ಟಿನಲ್ಲಿ ಮೇ 8ರಂದು ರಾಯಚೂರಿನಲ್ಲಿ ಬ್ರಿಗೇಡ್‌ನ‌ ಅಭ್ಯಾಸವರ್ಗ ಮತ್ತು ಜೂ. 18ರಂದು ಮೈಸೂರಿನಲ್ಲಿ ಪದಾಧಿಕಾರಿಗಳ ಸಮಾವೇಶ ಏರ್ಪಡಿಸಲಾಗಿದೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

Advertisement

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ‌ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಇದೀಗ ಬ್ರಿಗೇಡ್‌ನ‌ ಯುವ ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮೇ 8ರಂದು ರಾಯಚೂರಿನಲ್ಲಿ ನಡೆಯುವ ಅಭ್ಯಾಸ ವರ್ಗದ ವೇಳೆ ಮಹಿಳಾ ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

ರಾಯಚೂರಿನಲ್ಲಿ ನಡೆಯುವ ಅಭ್ಯಾಸ ವರ್ಗದಲ್ಲಿ ಬ್ರಿಗೇಡ್‌ ಮತ್ತು ಬ್ರಿಗೇಡ್‌ ಯುವ ಘಟಕದ ಜಿಲ್ಲಾ ಸಮಿತಿ ಮತ್ತು ವಿಧಾನಸಕ್ಷಾ ಕ್ಷೇತ್ರ ಸಮಿತಿಯ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಗಳು ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ ಜೂ. 18ರಂದು ಮೈಸೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಬ್ರಿಗೇಡ್‌ ಮತ್ತು ಅದರ ಘಟಕಗಳ ಎಲ್ಲಾ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪ್ರಸ್ತುತ ಕೇಂದ್ರ ಸರ್ಕಾರ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ಸಂವಿಧಾನ ತಿದ್ದುಪಡಿಗೆ ಮುಂದಾಗಿದೆ. 

ಆದರೆ, ಲೋಕಸಭೆಯಲ್ಲಿ ತಿದ್ದುಪಡಿಗೆ ಬೆಂಬಲಿಸಿರುವ ಕಾಂಗ್ರೆಸ್‌ ರಾಜ್ಯಸಭೆಯಲ್ಲಿ ತಿದ್ದುಪಡಿಯನ್ನು ಸೆಲೆಕ್ಟ್ ಕಮಿಟಿಗೆ ವಹಿಸಿ ದ್ವಂದ್ವ ನೀತಿ ಅನುಸರಿಸಿದೆ. ಕಾಂಗ್ರೆಸ್‌ನ ಈ ದ್ವಂದ್ವ ನೀತಿ ಮತ್ತು ಆಯೋಗಕ್ಕೆ ಸಾಂವಿಧಾನಕ ಸ್ಥಾನಮಾನ ನೀಡುವ ಅಗತ್ಯತೆ ಕುರಿತು ಅಭ್ಯಾಸವರ್ಗ ಮತ್ತು ಸಮಾವೇಶದಲ್ಲಿ ಬ್ರಿಗೇಡ್‌ನ‌ ಪದಾಧಿಕಾರಿಗಳಿಗೆ ತಿಳಿಹೇಳಲಾಗುವುದು. ಆ ಮೂಲಕ ರಾಜ್ಯಾದ್ಯಂತ ಹಿಂದುಳಿದ ವರ್ಗಗಳನ್ನು ಸಂಘಟಿಸಲಾಗುವುದು ಎಂದರು.

ಬಿಎಸ್‌ವೈ, ರಾಷ್ಟ್ರೀಯ ನಾಯಕರನ್ನು ಆಹ್ವಾನಿಸುತ್ತೇವೆ: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಪಾಲ್ಗೊಳ್ಳದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಘಟನೆಗೆ ಯಾರನ್ನೂ ಆಹ್ವಾನಿಸುತ್ತಿಲ್ಲ. ಅವರಾಗಿಯೇ ಬಂದರೆ ಸ್ವಾಗತಿಸುತ್ತೇವೆ. ಸದ್ಯದಲ್ಲೇ ಬ್ರಿಗೇಡ್‌ ವತಿಯಿಂದ ರಾಜ್ಯಾದ್ಯಂತ ಇರುವ ಜೂನಿಯರ್‌ ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಲು ನಿರ್ಧರಿಸಿದ್ದು, ಈ ಕಾರ್ಯಕ್ರಮಕ್ಕೆ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪಕ್ಷದ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಪದಾಧಿಕಾರಿಗಳಾದ ಮುಕುಡಪ್ಪ, ಪುಟ್ಟಸ್ವಾಮಿ, ವೆಂಕಟೇಶ್‌ಮೂರ್ತಿ, ಸೋಮಶೇಖರ್‌, ವೀರೇಶ್‌ ಮತ್ತಿತರರು ಹಾಜರಿದ್ದರು.

ಬ್ರಿಗೇಡ್‌ ಯುವ ಘಟಕಕ್ಕೆ ಪದಾಧಿಕಾರಿಗಳ ನೇಮಕ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ‌ ಯುವ ಘಟಕ ರಚಿಸಿ ಅದಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಬಾಗಲಕೋಟೆಯ ವೀರೇಶ್‌ ಉಂಡೋಡಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಉಳಿದಂತೆ ಉಪಾಧ್ಯಕ್ಷರಾಗಿ ಆನೇಕಲ್‌ನ ಎಂ.ದೊಡ್ಡಯ್ಯ, ಮೈಸೂರಿನ ಜೋಗಿ ಮಂಜು, ಬೆಂಗಳೂರಿನ ಸಂತೋಷ್‌ ಗೌಡ, ಕೊಪ್ಪಳದ ವಿನಯ್‌ಕುಮಾರ್‌, ಬೆಳಗಾವಿಯ ವಿ.ಜ್ಞಾನೇಶ್ವರ್‌, ಉಡುಪಿಯ ಮಹೇಶ್‌ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾಗಿ ಹಾವೇರಿಯ ಪ್ರದೀಪ್‌ ಮಳ್ಳೂರು, ಗದಗದ ಆನಂದ್‌ ಸೇs…, ರಾಯಚೂರಿನ ದೇವಿಸಿಂಗ್‌ ಠಾಕೂರ್‌, ಚಿತ್ರದುರ್ಗದ ಮಂಜುನಾಥ್‌, ದಾವಣಗೆರೆಯ ಕೀರ್ತಿ ಕುಮಾರ್‌ ಅವರನ್ನು ನೇಮಿಸಲಾಗಿದೆ.

ಅದೇ ರೀತಿ ಕಾರ್ಯದರ್ಶಿಗಳಾಗಿ ತುಮಕೂರಿನ ಚಂದನ್‌, ರಾಯಚೂರಿನ ಸಿದ್ದರಾಮೇಶ್‌, ಮಳವಳ್ಳಿಯ ರಾಜೇಶ್‌, ಚಿತ್ರದುರ್ಗದ ಚಂದ್ರಶೇಖರ್‌, ವಿಜಯಪುರದ ರಾಜಕುಮಾರ್‌ ಸಗಾಯಿ, ಮಂಡ್ಯದ ಮಂಜುನಾಥ್‌, ಬೆಂಗಳೂರಿನ ಕೃಷ್ಣಪ್ಪ ಹಾಗೂ ಖಜಾಂಚಿಯಾಗಿ ಧಾರವಾಡದ ನರಹಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಮಧ್ಯೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಮತ್ತು ಬ್ರಿಗೇಡ್‌ ಯುವ ಘಟಕದ ಮಾಧ್ಯಮ ಕಾರ್ಯದರ್ಶಿಯಾಗಿ ಎನ್‌.ಎಸ್‌.ವಿನಯ್‌ ಅವರನ್ನು ನೇಮಕ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next