ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹುಣಸೂರು ವನ್ಯಜೀವಿ ವಲಯದ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಕೆತ್ತನೆ(ಹದ) ಮಾಡುತ್ತಿದ್ದ ಆರೋಪಿಗಳನ್ನು ಹಿಡಿಯಲು ಯತ್ನಿಸಿದ ವೇಳೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಅರಣ್ಯ ಸಿಬ್ಬಂದಿ ಪ್ರಾಣ ರಕ್ಷಣೆಗಾಗಿ ಗುಂಡು ಹಾರಿಸಿದ ವೇಳೆ ಆರೋಪಿಯೋರ್ವನಿಗೆ ಗುಂಡು ತಗುಲಿದೆ.
ಪಿರಿಯಾಪಟ್ಟಣ ತಾಲೂಕಿನ ರಾಣಿ ಗೇಟ್‌ನ ಆದಿವಾಸಿ ಸಮುದಾಯದ ಸಣ್ಣಪ್ಪರ ಪುತ್ರ ಬಸವ ಗಾಯಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಹಾಡಿಯ ದಿಲೀಪ ಮತ್ತು ಸತೀಶ್ ಪರಾರಿಯಾಗಿದ್ದಾರೆ.
ಘಟನೆ ವಿವರ: ದೊಡ್ಡ ಹರವೆ ಮೀಸಲು ಅರಣ್ಯ ಪ್ರದೇಶದ ಕಾವೇರಿ ಬ್ಲಾಕ್ ಸಿಪಿಟಿ ಒಂದರ ಮೀಸಲು ಅರಣ್ಯದಲ್ಲಿ ಗಂಧದ ತುಂಡುಗಳನ್ನು ಕೆತ್ತನೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿ ದಾಳಿ ನಡೆಸಿದ ವೇಳೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಇದರಿಂದ ಆತಂಕಗೊಂಡ ಸಿಬ್ಬಂದಿಗಳು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ ವೇಳೆ ಆರೋಪಿಗಳಿಗೆ ಗುಂಡು ತಗುಲಿದೆ. ಉಳಿದವರು ತಪ್ಪಿಸಿಕೊಂಡಿದ್ದಾರೆ.
ತಕ್ಷಣವೇ ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 50 ಕೆ.ಜಿ.ಯಷ್ಟು ಗಂಧದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಬೈಲಕುಪ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದಿಬ್ಬರು ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಡಿಸಿಎಫ್ ಮಹೇಶ್ ಕುಮಾರ್ ತಿಳಿಸಿದ್ದಾರೆ.
ಅಧಿಕಾರಿಗಳ ಭೇಟಿ: ಘಟನಾ ಸ್ಥಳಕ್ಕೆ ಎಸ್ ಸ್ಪಿ ಚೇತನ್, ಡಿವೈಎಸ್ಪಿ ರವಿಪ್ರಸಾದ್, ಡಿಸಿಎಫ್.ಮಹೇಶ್‌ಕುಮಾರ್, ಎಸಿಎಫ್ ಸತೀಶ್, ಆರ್‌ಎಫ್‌ಒ ಹನುಮಂತರಾಜು ಭೇಟಿ ನೀಡಿದ್ದರು