ಹರಪನಹಳ್ಳಿ: ಕಳೆದ ಎರಡು ದಶಕಗಳಿಂದ ನನೆಗುದಿಗೆ ಬಿದಿದ್ದ ತಾಲೂಕಿನ ಗರ್ಭಗುಡಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿದ್ದ “ಗರ್ಭಗುಡಿ ಬಿಡ್ಜ್ ಕಂ ಬ್ಯಾರೇಜ್’ ಯೋಜನೆಗೆ ಕಳೆದ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿರುವುದರಿಂದ ಇದೀಗ ಎರಡು ದಶಕದ ಕನಸು ನನಸಾಗುವ ಕಾಲ ಸಮೀಪಿಸಿದೆ.
ರಾಷ್ಟ್ರ ನಾಯಕ, ಮಾಜಿ ಮುಖ್ಯಮಂತ್ರಿ ದಿ| ಎಸ್ .ನಿಜಲಿಂಗಪ್ಪನವರ ಕನಸಿನ ಕೂಸಾದ ಗರ್ಭಗುಡಿ ಏತ ನೀರಾವರಿ ಯೋಜನೆಗೆ ತಾಂತ್ರಿಕ ತೊಂದರೆ ಹಾಗೂ ಪದೇ ಪದೇ ಕ್ರಿಯೆಯೋಜನೆ ಬದಲಾವಣೆಗೊಳ್ಳುತ್ತಾ ಸಾಗಿತ್ತು. ಆದರೆ ಇದೀಗ ಪರಿಷ್ಕೃತ ದರದೊಂದಿಗೆ ತೆಲಂಗಾಣದಲ್ಲಿ ಅಳವಡಿಸಿರುವ ಪೈಪ್‌ಲೈನ್ ಮಾದರಿಯ ಕಾಮಗಾರಿ ನಡೆಸಲು ಸಿದ್ಧತೆ ಕೈಗೊಂಡಿದ್ದು, ಯೋಜನೆ ಟೆಂಡರ್ ಹಂತಕ್ಕೆ ಬಂದಿದೆ.
ಜೆ.ಎಚ್. ಪಟೇಲ್ ನೇತೃತ್ವದ ಸರ್ಕಾರ ಈ ಯೋಜನೆಗಾಗಿ 1998ರಲ್ಲಿ 9.30 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. 1999ರಲ್ಲಿ ತಾಂತ್ರಿಕ ಅನುಮೋದನೆ ದೊರೆತ ನಂತರ ಅಂದಿನ ಮುಖ್ಯಮಂತ್ರಿ ಜೆ.ಎಚ್ .ಪಟೇಲ್ ಅವರು ಯೋಜನೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು.
ಅಂದಿನಿಂದ ಇಂದಿನವರೆಗೆ ಈ ಯೋಜನೆಯನ್ನು ಜನ ಪ್ರತಿನಿ ಧಿಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆಯೇ ವಿನಃ ಯಾರು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಇಂದಿನ ಶಾಸಕ ಎಂ.ಪಿ.ರವೀಂದ್ರ ಅವರು ಜನರ ಆಶಯದಂತೆ ಯೋಜನೆ ಅನುಷ್ಠಾನಗೊಳಿಸಲು ಕ್ಯಾಬಿನೆಟ್ ಅನುಮತಿ ಪಡೆದುಕೊಂಡಿದ್ದಾರೆ.
ಯೋಜನೆಯ ಉದ್ದೇಶವೇನು?: ಕುಡಿಯುವ ನೀರು, ನೀರಾವರಿ, ಸಂಪರ್ಕ ಸೇತುವೆ, ಮೀನುಗಾರಿಕೆ ಅಭಿವೃದ್ಧಿ ಸೇರಿದಂತೆ ವಿವಿಧೋದ್ದೇಶಗಳನ್ನು ಯೋಜನೆ ಒಳಗೊಂಡಿದ್ದು, ಕಿರು ಜಲಾಶಯ ನಿರ್ಮಾಣದಿಂದ ನದಿಪಾತ್ರದಲ್ಲಿ 19 ಕಿ.ಮೀ ಉದ್ದಕ್ಕೂ 50 ದಶಲಕ್ಷ ಘನ ಅಡಿಯಷ್ಟು ನೀರು ಸಂಗ್ರಹಗೊಳ್ಳಲಿದೆ.
ಇದರಿಂದ ತಾಲೂಕಿನ ಹಲವಾಗಲು, ಕಡತಿ, ನಂದ್ಯಾಲ, ನಿಟ್ಟೂರು, ತಾವರಗೊಂದಿ ಹಾಗೂ ರಾಣಿಬೆನ್ನೂರು ತಾಲೂಕಿನ ಕೆಲವು ಗ್ರಾಮಗಳು ಸೇರಿ ಒಟ್ಟು 3,400 ಎಕರೆ ರೈತರ ಭೂಮಿಗೆ ನೀರುಣಿಸುವುದು ಯೋಜನೆ ಮುಖ್ಯ ಉದ್ದೇಶವಾಗಿದೆ. ಅಲ್ಲದೇ ಹರಪನಹಳ್ಳಿ-ರಾಣಿಬೆನ್ನೂರು ತಾಲೂಕುಗಳ ನಡುವೆ ಪ್ರಯಾಣಿಸಲು 25 ಕಿ.ಮೀ ಅಂತರ ಕಡಿಮೆಯಾಗಲಿದೆ. ಹರಪನಹಳ್ಳಿ-ಕೊಟ್ಟೂರು-ರಾಣಿಬೆನ್ನೂರು ನಡುವಿನ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ.
* ಎಸ್.ಎನ್.ಕುಮಾರ್ ಪುಣಬಗಟ್ಟಿ