Advertisement

ದೇಶದ ಸುರಕ್ಷೆಯೇ ಮೊದಲ ಆದ್ಯತೆ

12:53 AM Jun 02, 2019 | Team Udayavani |

ಹೊಸದಿಲ್ಲಿ: “ದೇಶದ ಸುರಕ್ಷತೆ ಮತ್ತು ಜನರ ಅಭಿವೃದ್ಧಿಯೇ ಮೋದಿ ಸರಕಾರದ ಮೊದಲ ಆದ್ಯತೆಗಳಾಗಿದ್ದು, ಆ ಆದ್ಯತೆಗಳನ್ನು ಪೂರೈಸುವಲ್ಲಿ ನಾನು ನನ್ನ ಶಕ್ತಿ ಮೀರಿ ಶ್ರಮಿಸುತ್ತೇನೆ’ ಎಂದು ಕೇಂದ್ರದ ನೂತನ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

ಶನಿವಾರ, ಸಂಸತ್ತಿನ ನಾರ್ತ್‌ ಬ್ಲಾಕ್‌ನಲ್ಲಿರುವ ಗೃಹ ಸಚಿವರ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ ಅವರು ತಮ್ಮ ಕಾರ್ಯವೈಖರಿ ಬಗ್ಗೆ ಮಾತನಾಡಿದರು. ಪದಗ್ರಹಣದ ನಂತರ ಟ್ವೀಟ್‌ ಮಾಡಿರುವ ಅವರು, “ನಾನು ಇಂದು ಗೃಹ ಇಲಾಖೆಯ ಉಸ್ತುವಾರಿ ವಹಿಸಿಕೊಂಡಿದ್ದೇನೆ. ನನ್ನಲ್ಲಿ ನಂಬಿಕೆಯಿಟ್ಟು ನನಗೆ ಈ ಮುಖ್ಯವಾದ ಜವಾಬ್ದಾರಿ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದಿದ್ದಾರೆ. ಗೃಹ ಇಲಾಖೆಯ ಸಹಾಯಕ ಸಚಿವರಾದ ಜಿ.ಕೆ. ರೆಡ್ಡಿ ಹಾಗೂ ನಿತ್ಯಾನಂದ್‌ ರಾಯ್‌ ಅವರೂ ತಮ್ಮ ಕಚೇರಿಗಳಲ್ಲಿ ಶನಿವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದ್ದಾರೆ.

ಒಂದು ಗಂಟೆ ಸಭೆ: ಅಧಿಕಾರ ಸ್ವೀಕಾರದ ನಂತರ ಅಮಿತ್‌ ಶಾ ಅವರು, ಗೃಹ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸುಮಾರು ಒಂದು ಗಂಟೆ ಕಾಲ ಸಭೆ ನಡೆಸಿದರು. ಸಭೆಯ ಆರಂಭದಲ್ಲಿ ಸಚಿವರಿಗೆ ಹಿರಿಯ ಅಧಿಕಾರಿಗಳು ಗೃಹ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು. ಅನಂತರ, ಶಾ ಅವರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಇದೇ ವೇಳೆ, ಇಲಾಖೆಯ ಸುಗಮ ಆಡಳಿತಕ್ಕಾಗಿ ತಮಗೆ ಸಹಕಾರ ನೀಡಬೇಕೆಂದು ಕೋರಿದರು.

ಭವ್ಯ ಸ್ವಾಗತ: ಶನಿವಾರ ಬೆಳಗ್ಗೆ ಸಂಸತ್ತಿನ ನಾರ್ತ್‌ ಬ್ಲಾಕ್‌ನಲ್ಲಿರುವ ಗೃಹ ಸಚಿವಾಲಯಕ್ಕೆ ಆಗಮಿಸಿದ ಶಾ ಅವರಿಗೆ ಇಲಾಖೆಯ ಕಾರ್ಯದರ್ಶಿ ರಾಜೀವ್‌ ಗೌಬಾ, ಗುಪ್ತಚರ ಇಲಾಖೆಯ ಮುಖ್ಯಸ್ಥ ರಾಜೀವ್‌ ಜೈನ್‌ ಹಾಗೂ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಹೂಗುತ್ಛ ನೀಡಿ ಸ್ವಾಗತಿಸಿದರು.

ಸುಷ್ಮಾ ಹಾದಿಯಲ್ಲೇ ಸಾಗುವೆ: ಹೊಸ ವಿದೇಶಾಂಗ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಎಸ್‌.ಜೈಶಂಕರ್‌ ಅವರು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಹಾದಿಯಲ್ಲೇ ಸಾಗುವುದಾಗಿ ಹೇಳಿದ್ದಾರೆ. ವಿದೇಶಾಂಗ ಸಚಿವೆಯಾಗಿ ಎಲ್ಲರ ನೋವು, ಕಷ್ಟಗಳಿಗೆ ಧ್ವನಿಯಾಗಿ, ತತ್‌ಕ್ಷಣವೇ ಸ್ಪಂದಿಸುವ ಮೂಲಕ ಸುಷ್ಮಾ ಅವರು ದೇಶ-ವಿದೇಶಗಳಲ್ಲಿ ಭಾರತೀಯರ ಮನ ಗೆದ್ದಿದ್ದರು. ಇದೀಗ ಅವರ ಸ್ಥಾನದಲ್ಲಿ ಕುಳಿತಿರುವ ಜೈಶಂಕರ್‌ ಅವರು, “ನಾನು ಕೂಡ ಸುಷ್ಮಾ ಸ್ವರಾಜ್‌ ಅವರ ಹಾದಿಯಲ್ಲೇ ಸಾಗಲು ಹೆಮ್ಮೆ ಪಡುತ್ತೇನೆ. ಸದಾಕಾಲವೂ ಜನರಿಗೆ ಲಭ್ಯವಿರುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

ಮೊದಲ ದಿನವೇ ಕಿಡಿ!
ನೂತನ ಗೃಹ ಸಚಿವರಾದ ಅಮಿತ್‌ ಶಾ ಪದಗ್ರಹಣ ಮಾಡಿದ ಮೊದಲ ದಿನವೇ ಅವರ ಸಹಾಯಕ ಸಚಿವ ಕಿಶನ್‌ ರೆಡ್ಡಿ ನೀಡಿದ ಹೇಳಿಕೆಯೊಂದು ವಿವಾದದ ಕಿಡಿ ಹೊತ್ತಿಸಿದೆ. ಈ ಹಿನ್ನೆಲೆಯಲ್ಲಿ ಅಮಿತ್‌ ಶಾ ಅವರು, ಅಧಿಕಾರ ಸ್ವೀಕಾರದ ನಂತರ ನಡೆದ ಸಭೆಯಲ್ಲಿ ರೆಡ್ಡಿಯವರನ್ನು ಈ ಬಗ್ಗೆ ಎಚ್ಚರಿಸಿದ್ದಾರೆಂದು ಮೂಲಗಳು ತಿಳಿಸಿವೆ. ಮಾಧ್ಯಮಗಳೊಂದಿಗೆ ಮಾತನಾಡಿದ ಕಿಶನ್‌, “ಬೆಂಗಳೂರು, ಭೋಪಾಲ್‌ ಅಥವಾ ದೇಶದ ಮತ್ಯಾವುದೇ ನಗರಗಳಲ್ಲಿ ಯಾವುದೇ ಭಯೋತ್ಪಾದಕ ಕೃತ್ಯ ನಡೆದರೂ ಅದರ ಬೇರುಗಳು ಹೈದರಾಬಾದ್‌ನಲ್ಲಿ ಇರುವುದು ಪದೇ ಪದೆ ಸಾಬೀತಾಗುತ್ತಿದೆ. ಹೈದರಾಬಾದ್‌ನಲ್ಲಿ ಪ್ರತಿ 2-3 ತಿಂಗಳುಗಳಿಗೊಮ್ಮೆ ಭಯೋತ್ಪಾದಕರ ಬಂಧನವಾಗುತ್ತದೆ’ ಎಂದಿದ್ದು ವಿವಾದಕ್ಕೆ ಕಾರಣವಾಗಿದೆ. ಕಿಶನ್‌ ರೆಡ್ಡಿಯವರ ಮಾತುಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ, “ಹೈದರಾಬಾದ್‌ ಉಗ್ರರ ಸ್ವರ್ಗ ಎಂದು ಗುಪ್ತಚರ, ಎನ್‌ಐಎ ಅಥವಾ ಐಬಿ ಲಿಖೀತ ರೂಪದಲ್ಲಿ ಸರಕಾರಕ್ಕೆ ಸಲ್ಲಿಸಿವೆಯೇ ಎಂದು ಪ್ರಶ್ನಿಸಿದ್ದಾರೆ. ಸಚಿವರ ಮಾತು ಮುಸ್ಲಿಮರ ವಿರುದ್ಧ ಬಿಜೆಪಿ ಹೊಂದಿರುವ ದ್ವೇಷದ ಮನಸ್ಥಿತಿಯನ್ನು ಬಿಂಬಿಸುತ್ತದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next