Advertisement

ಒಂದಾದರು ಎಡಗೈ ಬಲಗೈ; ಸದಾಶಿವ ಆಯೋಗ

06:00 AM Jan 16, 2018 | |

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಮೀಸಲು ಮರು ವರ್ಗೀಕರಣ ಕುರಿತ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಶಾಸಕರ ಮಧ್ಯೆ ಭಿನ್ನಾಭಿಪ್ರಾಯಗಳಿದ್ದರೂ ದಲಿತರಲ್ಲಿರುವ ಎಡಗೈ ಮತ್ತು ಬಲಗೈ ಸಮುದಾಯ ಇದೀಗ ಒಟ್ಟಾಗಿದ್ದು, ವರದಿ ಜಾರಿಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದೆ.

Advertisement

ಸದಾಶಿವ ಆಯೋಗದ ವರದಿ ಜಾರಿ ಕುರಿತು ಪರ-ವಿರೋಧ ಹೋರಾಟ ನಡೆಸುತ್ತಿರುವ ಪರಿಶಿಷ್ಟ ಜಾತಿಗಳ ವಿವಿಧ ಬಣಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಮಹತ್ವದ ಸಭೆ ನಡೆಸಿದರು. ಎರಡೂ ಕಡೆಯವರು ವರದಿ ಜಾರಿಗೆ ಸಮ್ಮತಿಸುವುದರ ಜತೆಗೆ ಕೂಡಲೇ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ. ಅಲ್ಲದೆ, ಕಾನೂನು ಇಲಾಖೆ ಅಭಿಪ್ರಾಯ ಬರುವವರೆಗೂ ಹೋರಾಟದಿಂದ ಹಿಂದೆ ಸರಿದು ತಟಸ್ಥರಾಗಿರಲು ಎರಡೂ ಗುಂಪುಗಳ ಮನವೊಲಿಸಲು ಮುಖ್ಯಮಂತ್ರಿಗಳು ಯಶಸ್ವಿಯಾಗಿದ್ದಾರೆ.

ಸಭೆ ಆರಂಭದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಕಾನೂನು ಅಭಿಪ್ರಾಯ ಕೇಳುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ ಎಡಗೈ ಸಮುದಾಯದ ಮುಖಂಡರು, ಸರ್ಕಾರ ಕಾನೂನು ಅಭಿಪ್ರಾಯದ ಮೊರೆ ಹೋಗುವ ಮೂಲಕ ವರದಿ ಮೂಲೆಗುಂಪು ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಂಧ್ರಪ್ರದೇಶದಲ್ಲಿ ಒಳಮೀಸಲಿಗೆ ಮಾಡಿದ್ದ ಶಿಫಾರಸನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿತ್ತು. ಹೀಗಾಗಿ ವರದಿಯನ್ನು ಕಾನೂನು ಬದ್ಧವಾಗಿ ಅನುಷ್ಠಾನಗೊಳಿಸಬೇಕಾಗಿದ್ದು, ಅದಕ್ಕಾಗಿ ಅಡ್ವೋಕೇಟ್‌ ಜನರಲ್‌ ಮತ್ತು ಕಾನೂನು ಇಲಾಖೆ ಅಭಿಪ್ರಾಯ ಪಡೆಯಲಾಗಿದೆ ಎಂದು ಅವರನ್ನು ಸಮಾಧಾನಪಡಿಸಿದರು.

ಈ ಮಧ್ಯೆ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಗೆ ವಿರೋಧಿಸುತಿದ್ದ ಬಲಗೈ ಸಮುದಾಯದ ಮುಖಂಡರೂ ವರದಿ ಜಾರಿಗೆ ಶಿಫಾರಸು ಮಾಡಲು ಮುಖ್ಯಮಂತ್ರಿಗಳ ಸಭೆಯಲ್ಲಿ ಸಮ್ಮತಿ ಸೂಚಿಸಿದ್ದಾರೆ. ಆದರೆ, ಎಡಗೈಗೆ ಶೇ.6 ಹಾಗೂ ಬಲಗೈಗೆ ಶೇ. 5ರಷ್ಟು ಮೀಸಲು ಶಿಫಾರಸು ಮಾಡಿದ್ದು, ಇದನ್ನು ಸಮನಾಗಿ ಹಂಚುವಂತೆ ಒತ್ತಾಯಿಸಿದರು. ಆದರೆ, ಇದಕ್ಕೆ ನಿರಾಕರಿಸಿದ ಮುಖ್ಯಮಂತ್ರಿಗಳು, ಸದಾಶಿವ ಆಯೋಗದ ವರದಿ ಸಿದ್ಧಪಡಿಸುವ ವೇಳೆ ಜನಸಂಖ್ಯೆ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಆಧಾರದ ಮೇಲೆ ಮೀಸಲಾತಿ ಕಲ್ಪಿಸಲು ಶಿಫಾರಸು ಮಾಡಲಾಗಿದೆ. ಇದನ್ನು ಬದಲಿಸುವ ಅಧಿಕಾರಕ್ಕೆ ಸರ್ಕಾರಕ್ಕೆ ಇರುವುದಿಲ್ಲ. ಕಾನೂನು ಅಭಿಪ್ರಾಯದ ಬಳಿಕ ಈ ಬಗ್ಗೆ ಚರ್ಚಿಸೋಣ ಎಂದು ಹೇಳಿದರು. ಇದಕ್ಕೆ ದಲಿತ ಮುಖಂಡರು ಒಪ್ಪಿದ್ದರಿಂದ ಸಭೆ ಮುಕ್ತಾಯಗೊಳಿಸಲಾಯಿತು.

Advertisement

ಇಂದು ದಲಿತ ಸಂಘಟನೆಗಳ ಸಭೆ
ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಕುರಿತಂತೆ ಮುಂದೆ ಕೈಗೊಳ್ಳಬೇಕಾದ ತೀರ್ಮಾನಗಳ ಕುರಿತು ಚರ್ಚಿಸಲು ಮಂಗಳವಾರ ಬೆಳಗ್ಗೆ 11 ಗಂಟೆಗೆ ದಲಿತರ ಎಡಗೈ ಮತ್ತು ಬಲಗೈ ಸಮುದಾಯದ ಮುಖಂಡರ ಸಭೆ ಕರೆಯಲಾಗಿದೆ.

ಸೋಮವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯ ನಿರ್ಧಾರಗಳು ಹಾಗೂ ನ್ಯಾ. ಸದಾಶಿವ ಆಯೋಗ ವರದಿ ಬಗ್ಗೆ ಸೂಕ್ತ ನಿಲುವು ತೆಗೆದುಕೊಳ್ಳುವ ಸಲುವಾಗಿ ಈ ಸಭೆ ಕರೆಯಲಾಗಿದೆ. ಸಭೆಯಲ್ಲಿ ಸದಾಶಿವ ವರದಿ ಬಗ್ಗೆ ಒಟ್ಟಾಗಿ ಹೋರಾಟ ಮುಂದುವರಿಸಬೇಕೇ ಅಥವಾ ಸರ್ಕಾರ ನಿರ್ದಾರ ಕೈಗೊಳ್ಳುವವರೆಗೆ ಕಾಯಬೇಕೇ ಎಂಬ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಎರಡೂವರೆ ದಶಕಗಳಿಂದ ಒಳ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಒಳ ಮೀಸಲಾತಿಗೆ ಬಲಗೈ ಹಾಗೂ ಎಡಗೈ ಬಣಗಳ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ. ವರದಿ ಬಗೆಗಿನ ಎಲ್ಲಾ ಗೊಂದಲಗಳನ್ನೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಗೆಹರಿಸಿದ್ದಾರೆ. ಕಾನೂನು ಇಲಾಖೆ ಅಭಿಪ್ರಾಯ ಆದಷ್ಟು ಬೇಗ ಪಡೆದು ನಿರ್ಧಾರ ಕೈಗೊಳ್ಳಲಾಗುವುದು.
– ಎಚ್‌.ಆಂಜನೇಯ, ಸಮಾಜ ಕಲ್ಯಾಣ ಸಚಿವ

ನ್ಯಾ.ಸದಾಶಿವ ಆಯೋಗದ ವರದಿ ಕುರಿತು ಇದ್ದ ಆತಂಕ ಬಗೆಹರಿದಿದ್ದು, ಅದು ಜಾರಿಯಾಗಬೇಕು ಎಂಬುದು ದಲಿತರ ಎರಡೂ ಸಮುದಾಯದವರ ಆಗ್ರಹ. ಚುನಾವಣೆ ನೆಪ ಮಾಡಿಕೊಂಡು ಕಾನೂನು ಅಭಿಪ್ರಾಯ ಪಡೆದುಕೊಳ್ಳುತ್ತೇವೆ ಎಂದು ನುಣುಚಿಕೊಳ್ಳುವುದು ಸರಿಯಲ್ಲ. ಸರ್ಕಾರ ಕೂಡಲೇ ಸಚಿವ ಸಂಪುಟದಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಬೇಕು.
– ಮಾವಳ್ಳಿ ಶಂಕರ್‌, ದಲಿತ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next