ಶಿರಸಿ: ಚಿಪಗಿ ಬನವಾಸಿ ರಸ್ತೆಯಲ್ಲಿ ಹದ್ದಿನ ಕಣ್ಣು ತ್ಯಾಜ್ಯ ಹಾಕುವವರ ಬಗ್ಗೆ ಇದ್ದಂತೆ ಇನ್ನೊಂದೆಡೆ ಶಿರಸಿಯಿಂದ ಕುಮಟಾ ಹಾಗೂ ಸಿದ್ದಾಪುರಕ್ಕೆ ತೆರಳುವ ಗ್ರಾಮೀಣ ಭಾಗದ ರಸ್ತೆಗಳು ಕಸದ ತೊಟ್ಟಿಗಳಾಗುತ್ತಿವೆ.
ಜೀವಜಲ ಕಾರ್ಯಪಡೆ ಮುಖ್ಯಸ್ಥ ಶ್ರೀನಿವಾಸ ಹೆಬ್ಟಾರರ ನೇತೃತ್ವದಲ್ಲಿ ಬಹುಕಾಲದಿಂದ ಬೇಕಾಬಿಟ್ಟಿಯಾಗಿ ತ್ಯಾಜ್ಯ ಚೆಲ್ಲುತ್ತಿದ್ದ ಚಿಪಗಿ ರಸ್ತೆ, ಜಿಲ್ಲಾ ಕ್ರೀಡಾಂಗಣ ಸಮೀಪವನ್ನು ಸ್ವತಃ ಸ್ವಚ್ಛಗೊಳಿಸಿದ್ದರು. ಬನವಾಸಿ ಮಾರ್ಗದಲ್ಲಿಯೂ ಸ್ವಚ್ಛತಾ ಅಭಿಯಾನ ನಡೆಸಿದ್ದರು. ಒಮ್ಮೆ ಸ್ವಚ್ಛಗೊಳಿಸಿದ್ದು ಮಾತ್ರ ಅಲ್ಲದೇ ಯಾರೇ ಕಸ ಚೆಲ್ಲಲು ಬಂದರೂ ತಡೆಯುತ್ತಿದ್ದರು. ಈಗ ಈ ಭಾಗದಲ್ಲಿ ಕಸ ಚೆಲ್ಲುವವರಿಗೆ ಆತಂಕ ಸೃಷ್ಟಿಯಾಗಿದೆ.
ಈ ಮಧ್ಯೆ ತ್ಯಾಜ್ಯವನ್ನು ಬೇಕಾಬಿಟ್ಟಿ ಚೆಲ್ಲುವ ಮನಸ್ಥಿತಿಯವರು ಸ್ಥಳ ಬದಲಾಯಿಸಿಕೊಂಡಂತೆ ಇದೆ. ಕುಮಟಾ ರಸ್ತೆಯ ಹೀಪನಳ್ಳಿ, ಮೆಣಸಿಕೇರಿ, ಶಿರಸಿಮಕ್ಕಿ ಕತ್ರಿಗಳ ತನಕವೂ ನಡು ರಾತ್ರಿ ಕಸ ಚೆಲ್ಲುತ್ತಿದ್ದಾರೆ.
ಇನ್ನೊಂದೆಡೆ ಸಿದ್ದಾಪುರ ಮಾರ್ಗದ ಅಬ್ರಿಮನೆ ಕತ್ತರಿ, ಗಿಡಮಾವಿನಕಟ್ಟೆ, ಸಣ್ಣಕೇರಿ, ಬೆಳ್ಳೆಕೇರಿ, ಕಾಗೇರಿ, ಯಡಹಳ್ಳಿ ತನಕವೂ ಕಸ ಚೆಲ್ಲುತ್ತಿದ್ದಾರೆ. ಅಬ್ರಿಮನೆ ಕತ್ರಿ ಬಳಿ ಇರುವ ಮೋರಿ ಕಟ್ಟೆ ಕೂಡ ಬಾರ್ ಕಟ್ಟೆ ಆಗಿದೆ. ಇದೂ ಅಲ್ಲದೇ ಸಾವಿರಕ್ಕೂ ಅಧಿಕ ಬಾಟಲಿಗಳು ಮೋರಿ ಕಟ್ಟೆ ಕೆಳಗೆ ಬಿದ್ದಿವೆ. ಕಂಪ್ಯೂಟರ್‌ಗಳು, ಫ್ರಿಜ್ ಐಟಂಗಳು, ಮನೆಯ ತ್ಯಾಜ್ಯಗಳೂ ಗಟಾರದಲ್ಲಿ ಬೀಳುತ್ತಿವೆ.
ಈ ಮಧ್ಯೆ ಹೀಪನಳ್ಳಿ ಭಾಗದ ನಾಗರಿಕರು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿ ಕೂಡ ಮನವಿ ಮಾಡಿಕೊಂಡಿದ್ದಾರೆ. ಮಳೆಗಾಲದಲ್ಲಿ ಈ ತ್ಯಾಜ್ಯಗಳು ತೋಟ ಪಟ್ಟಿ, ನದಿಗಳನ್ನೂ ತಲುಪಿ ಅನೇಕ ಅಧ್ವಾನ ಮಾಡುತ್ತಿವೆ ಎಂಬುದೂ ಗ್ರಾಮಸ್ಥರ ಆಗ್ರಹವಾಗಿದೆ.
ಗಸ್ತಿಗೂ ಚಿಂತನೆ:
ಈ ಭಾಗದಲ್ಲಿ ರಾತ್ರಿ ರಸ್ತೆ ಪಕ್ಕ ಪಾರ್ಟಿ ಮಾಡುವವರೂ ಹೆಚ್ಚಿದ್ದಾರೆ. ಈ ಬಗ್ಗೆ ರಾತ್ರಿ ಗಸ್ತು ತಿರುಗುವುದಕ್ಕೂ ಯೋಜಿಸಿದ್ದೇವೆ.•ಭಾಸ್ಕರ ಹೆಗಡೆ ಸ್ಥಳೀಯ ಪ್ರಮುಖ
ರಕ್ಷಕ ಹಳ್ಳಿಗೂ ಬರಲಿ:
ಹಿಂದೆ ರಕ್ಷಕ ವಾಹನಗಳು ಹಳ್ಳಿಗೆ ಬರುತ್ತಿದ್ದವು. ಇನ್ನು ಮುಂದೆ ಕೂಡ ರಾತ್ರಿ ವೇಳೆ ಬಾರ್ ಕಟ್ಟೆ ತಪ್ಪಿಸಲು ಪೊಲೀಸರ ವಾಹನ ಕೂಡ ಓಡಾಟ ಮಾಡಬೇಕು.•ರಾಜು ನಾಯ್ಕ, ಸ್ಥಳೀಯ