Advertisement

ಪಾಳು ಬಿದ್ದಿವೆ ರಂಗಮಂದಿರ-ಶಾಪಿಂಗ್‌ ಕಾಂಪ್ಲೆಕ್ಸ್‌

12:22 PM May 16, 2022 | Team Udayavani |

ಚಿಂಚೋಳಿ: ಪಟ್ಟಣದಲ್ಲಿ ನಿರ್ಮಿಸುತ್ತಿರುವ ರಂಗಮಂದಿರ (ಟೌನ್‌ಹಾಲ್‌), ಶಾಪಿಂಗ್‌ ಕಾಂಪ್ಲೆಕ್‌ ಕಟ್ಟಡ ಮತ್ತು ಚರಂಡಿ, ಪುಟಪಾತ್‌ ಕಾಮಗಾರಿಗಳು ಪ್ರಗತಿ ಕಾಣದೇ ಸಾಮೂಹಿಕ ಶೌಚಾಲಯಗಳಾಗಿ ಪರಿವರ್ತನೆಯಾಗಿವೆ.

Advertisement

ಪಟ್ಟಣದ ಡಾ| ಬಿ.ಆರ್‌.ಅಂಬೇಡ್ಕರ್‌ ಕ್ರಾಸ್‌ ಹತ್ತಿರದ ಸರ್ಕಾರಿ ಸಾರ್ವಜನಿಕ ಆಸ್ಪತೆಯ ಹಳೆ ಕಟ್ಟಡ ನೆಲಸಮಗೊಳಿಸಿ ಸಾಂಸ್ಕೃತಿಕ ಕಾರ್ಯಕ್ರಮ, ರಸಮಂಜರಿ, ಸಂಗೀತೋತ್ಸವ, ಸಾರ್ವಜನಿಕರ ಸಭೆ-ಸಮಾರಂಭ, ಸರ್ಕಾರಿ ಕಾರ್ಯಕ್ರಮ ಆಯೋಜಿಸಲು ರಂಗಮಂದಿರ ಮತ್ತು ವ್ಯಾಪಾರ ವಹಿವಾಟು ನಡೆಸಲು, ವ್ಯಾಪಾರಸ್ಥರಿಗೆ ಕಡಿಮೆ ಬಾಡಿಗೆಗೆ ನೀಡಲು ನಿರ್ಮಿಸಲಾಗುತ್ತಿರುವ ಶಾಪಿಂಗ್‌ ಕಾಂಪ್ಲೆಕ್ಸ್‌ಗಳ ಕಾಮಗಾರಿ ಪ್ರಗತಿ ಕಾಣದೇ ಸಾರ್ವಜನಿಕ ಶೌಚಾಲಯದಂತೆ ಆಗಿವೆ.

2013-18ರಿಂದ ಚಿಂಚೋಳಿ ಶಾಸಕರಾಗಿದ್ದ ಕಲಬುರಗಿ ಸಂಸದ ಡಾ| ಉಮೇಶ ಜಾಧವ ಎಚ್‌ಕೆಆರ್‌ಡಿಬಿಯ 2015-16 ಮ್ಯಾಕ್ರೋ ಯೋಜನೆ (ನೆಮ್ಮದಿ ಊರು) ಅಡಿಯಲ್ಲಿ ರಂಗ ಮಂದಿರ ನಿರ್ಮಾಣಕ್ಕೆ 199 ಲಕ್ಷ ರೂ., ಶಾಪಿಂಗ್‌ ಕಾಂಪ್ಲೆಕ್ಸ್‌ ಕಟ್ಟಡಕ್ಕಾಗಿ 199.8ಲಕ್ಷ ರೂ. ಮಂಜೂರಿ ಮಾಡಿದ್ದರು. ಈ ಎರಡು ಕಟ್ಟಡಗಳ ಕಾಮಗಾರಿಗಳನ್ನು ಗುತ್ತಿಗೆ ಪಡೆದಿರುವ ಕರ್ನಾಟಕ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮ ಕಾಮಗಾರಿಯನ್ನು ವಿವಿಧ ಹಂತಗಳಲ್ಲಿ ಕೆಲಸ ಪ್ರಾರಂಭಿಸಿ ನಂತರ ಸ್ಥಗಿತಗೊಳಿಸಿದೆ.

ರಂಗಮಂದಿರ, ಶಾಪಿಂಗ್‌ ಕಾಂಪ್ಲೆಕ್ಸ್‌, ಚರಂಡಿ, ಪುಟಪಾತ್‌ ನಿರ್ಮಾಣಕ್ಕಾಗಿ ಒಟ್ಟು 5.20ಕೋಟಿ ರೂ. ಅನುದಾನ ಮಂಜೂರಿಯಾಗಿದೆ. ಕಾಮಗಾರಿ ಪ್ರಾರಂಭಿಸುವುದಕ್ಕಾಗಿ ನಿಗಮಕ್ಕೆ 4.16ಕೋಟಿ ರೂ.ನೀಡಲಾಗಿದೆ. ನಿಗಮವು ಕಾಮಗಾರಿಗಾಗಿ ಒಟ್ಟು 3.54 ಕೋಟಿ ರೂ. ಖರ್ಚು ಮಾಡಿದೆ. ಪಟ್ಟಣದ ಹಳೆ ಆಸ್ಪತ್ರೆ ಸ್ಥಳದಲ್ಲಿ ನಿರ್ಮಿಸುತ್ತಿರುವ ರಂಗಮಂದಿರ ಮತ್ತು ಶಾಪಿಂಗ್‌ ಕಾಂಪ್ಲೆಕ್ಸ್‌ ಪ್ರತಿಯನ್ನು ಶಾಸಕ ಡಾ| ಅವಿನಾಶ ಜಾಧವ ಒಮ್ಮೆಯೂ ಪರಿಶೀಲಿಸಿಲ್ಲ ಎಂದು ಪುರಸಭೆ ಮಾಜಿ ಸದಸ್ಯ ಭೀಮರಾವ್‌ ಮರಾಠ ಬೇಸರ ವ್ಯಕ್ತಪಡಿಸಿದ್ದಾರೆ.

ಚಂದಾಪುರ ನಗರದ ಗಾಂಧಿ ಚೌಕ್‌ನಿಂದ ತಾಂಡೂರ ಕ್ರಾಸ್‌ವರೆಗೆ ರಸ್ತೆಯ ಎರಡು ಬದಿಗಳಲ್ಲಿ ಚರಂಡಿ ಮತ್ತು ಪುಟಪಾತ್‌ ನಿರ್ಮಿಸಲು 122ಲಕ್ಷ ರೂ. ಅನುದಾನವನ್ನು ನಿಗಮಕ್ಕೆ ನೀಡಲಾಗಿದೆ. ಆದರೆ ಚರಂಡಿ ಮತ್ತು ಪುಟಪಾತ್‌ ಕಾಮಗಾರಿಗಳು ಇನ್ನು ಪೂರ್ಣವಾಗಿಲ್ಲ. ಕೆಲವು ಕಡೆಗಳಲ್ಲಿ ಕಳಪೆಮಟ್ಟದಿಂದ ನಿರ್ಮಿಸಿದ ಪುಟಪಾತ್‌, ಚರಂಡಿ ಹದಗೆಟ್ಟು ಹೋಗಿವೆ.

Advertisement

ರಂಗಮಂದಿರ ಮತ್ತು ಶಾಪಿಂಗ್‌ ಕ್ಲಾಂಪ್ಲೆಕ್ಸ್‌, ಚರಂಡಿ, ಪುಟ್‌ಪಾತ್‌ ಕಾಮಗಾರಿಗಳೆಲ್ಲ ಜಿಲ್ಲಾಧಿಕಾರಿಗಳ ಆಧೀನದಲ್ಲಿ ಇರುತ್ತವೆ. ಕೆಲಸ ಪ್ರಾರಂಭಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪತ್ರ ನೀಡಲಾಗಿದೆ. ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಮಂಡಳಿ ಜಿಲ್ಲಾಧಿಕಾರಿಗಳ ಆಧೀನದಲ್ಲಿ ಇರುವುದರಿಂದ ಬಹುತೇಕ ಕುಂಠಿತಗೊಂಡಿರುವ ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಲ್ಯಾಂಡ್‌ ಆರ್ಮಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಲಾಗುವುದು. -ಡಾ| ಅವಿನಾಶ ಜಾಧವಶಾಮರಾವ ಚಿಂಚೋಳಿ

Advertisement

Udayavani is now on Telegram. Click here to join our channel and stay updated with the latest news.

Next