Advertisement
ಆರ್‌ಟಿಇ ಸೀಟು ಉಳ್ಳವರ ಪಾಲು: ಆರ್‌ಟಿಇ ಜಾರಿಗೆ ಬಂದಾಗಿನಿಂದ ಈ ಯೋಜನೆ ಉಳ್ಳವರ ಪಾಲಾಗಿದೆ. ಪಟ್ಟಣದ ಸಮೀಪದಲ್ಲಿನ ಗ್ರಾಮೀಣರು ತಮ್ಮ ಹಾಗೂ ಶಾಲೆಗೆ ದಾಖಲಾಗಬೇಕಿರುವ ಮಗುವಿನ ಆಧಾರ್ ವಿಳಾಸ ಬದಲಾಯಿಸಿಕೊಂಡು ಬಡವರ ಯೋಜನೆಯನ್ನು ಲಪಟಾಯಿಸಿಸುವ ಮೂಲಕ ದ್ರೋಹ ಮಾಡುತ್ತಿದ್ದಾರೆ. ಈ ರೀತಿ ದ್ರೋಹ ಬಗೆದಿರುವವರಲ್ಲಿ ಕೆಲ ಗುತ್ತಿಗೆದಾರರು, ಜನಪ್ರತಿನಿಧಿಗಳು, ಉದ್ಯಮಿಗಳು, ವ್ಯಾಪಾರಸ್ಥರು, ರಾಜಕಾರಣಿಗಳ ಹಿಂಬಾಲಕರು ಸೇರಿದಂತೆ ಸಮಾಜವನ್ನು ಸರಿದಾರಿಗೆ ತರುವ ಸಮಾಜಿಕ ಕಳಕಳಿ ಹೊಂದಿರುವರೂ ಇದ್ದಾರೆ.
Related Articles
Advertisement
ಖಾಸಗಿ ಶಾಲೆಗಳ ಹಿಡಿ ಶಾಪ: ಆರ್‌ಟಿಇಗೆ ಕಡಿವಾಣ ಹಾಕಲು ಹೊಸ ನಿಯಮ ಜಾರಿಗೆ ತಂದಿರುವುದರಿಂದ ಬಡವರು, ಕೂಲಿ ಕಾರ್ಮಿಕರು ಮಾತ್ರ ಮೈತ್ರಿ ಸರ್ಕಾರಕ್ಕೆ ಶಾಪ ಹಾಕುತ್ತಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯೂ ಶಾಪ ಹಾಕುತ್ತಿದೆ. ಯಾವುದೇ ತೊಂದರೆ ಇಲ್ಲದೇ ಪ್ರತಿ ವರ್ಷ ತಮ್ಮ ಸಂಸ್ಥೆ ಖಾತೆಗೆ ಹಣ ಜಮೆ ಆಗುತ್ತಿತ್ತು. ಆದರೆ ಸಿಎಂ ಕುಮಾರಸ್ವಾಮಿ ಮಾಡಿದ ಒಂದು ಎಡವಟ್ಟು ಹೊಸದಾಗಿ ದಾಖಲಾತಿ ನಿಂತಿರುವುದಲ್ಲದೇ ಸರ್ಕಾರದ ಹಣ ಖಾತೆಗೆ ಜಮಾ ಆಗುವುದು ನಿಲ್ಲುತ್ತಿದೆ, ಈ ಹಿಂದೆ ನೀಡಿದ ಸೀಟಿಗೆ ಮಾತ್ರ ಹಣ ಬರುವಂತಾಗಿದೆ.
ಆರ್‌ಟಿಇ ವ್ಯಾಪ್ತಿಗೆ ಒಂದೇ ಶಾಲೆ: ಕಂದಾಯ ಗ್ರಾಮದ ವ್ಯಾಪ್ತಿಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಯಿದ್ದರೆ ಅಲ್ಲಿಯೇ ಮಕ್ಕಳನ್ನು ದಾಖಲಿಸಬೇಕೆಂಬ ಹೊಸ ನಿಯಮವನ್ನು ರಾಜ್ಯದ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಜಾರಿಗೆ ತಂದಿರುವುರಿಂದ ತಾಲೂಕಿನಲ್ಲಿ 45 ಖಾಸಗಿ ಶಾಲೆಗಳ ಪೈಕಿ ಒಂದು ಶಾಲೆ ಮಾತ್ರ ಆರ್‌ಟಿಇಗೆ ಒಳಪಡಲಿದೆ. ದಂಡಿಗನಹಳ್ಳಿ ಹೋಬಳಿ ಅರಳಬರಗೂರು ಸಮೀಪದ ವೆಸ್ಟ್‌ಹಿಲ್ ರಿಪಬ್ಲಿಕ್ ಶಾಲೆ ಮಾತ್ರ ಹೊಸ ನಿಯಮದ ಅಡಿಗೆ ಬರುವುದಿಲ್ಲ. ಉಳಿದ 44 ಖಾಸಗಿ ಶಾಲೆ ಈ ಸಾಲಿನಲ್ಲಿ ಆರ್‌ಟಿಇ ಮೂಲಕ ವಿದ್ಯಾರ್ಥಿಯನ್ನು ದಾಖಲು ಮಾಡಿಕೊಳ್ಳುವಂತಿಲ್ಲ.
ಆರ್‌ಟಿಇ ಯೋಜನೆ ಜಾರಿಯಾದಾಗಿನಿಂದ ಶಾಲೆಗೆ ದಾಖಲಾಗುವುದರಲ್ಲಿ ಶೇ.25 ರಷ್ಟು ಸೀಟು ಆರ್‌ಟಿಇಗೆ ಮೀಸಲಿಡಬೇಕಿದೆ. 2012-13ರಲ್ಲಿ ತಾಲೂಕಿನ 43 ಖಾಸಗಿ ಶಾಲೆಗಳಿಗೆ 143 ಮಂದಿ ಆರ್‌ಟಿಇ ಮೂಲಕ ಪ್ರವೇಶಾತಿ ಪಡೆದಿದ್ದರು. 2013-14ರ ಸಾಲಿನಲ್ಲಿ ದತ್ತಾತ್ರೇಯ ಹಾಗೂ ಜಗನ್ಮಾತ ಈ ಎರಡು ಖಾಸಗಿ ಶಾಲೆಗಳ ಮಾನ್ಯತೆಯನ್ನು ಸರ್ಕಾರ ಹಿಂಪಡೆಯಲಾಗಿತ್ತು ಹಾಗಾಗಿ 43 ಶಾಲೆಯಿಂದ 41ಕ್ಕೆ ಕುಸಿಯುವಂತಾಯಿತು. ಆದರೂ ದಾಖಲೆ ಪ್ರಮಾಣ ಏರಿಕೆಯಾಯಿತು. ಆ ವರ್ಷದಲ್ಲಿ 41 ಶಾಲೆಗಳಿಂದ 215 ವಿದ್ಯಾರ್ಥಿಗಳು ಆರ್‌ಟಿಇ ಮೂಲಕ ಖಾಸಗಿ ಶಾಲೆಗ ದಾಖಲಾದರು.
2014-15ರಲ್ಲಿ 41 ಖಾಸಗಿ ಶಾಲೆಗಳಿಂದ 275 ವಿದ್ಯಾರ್ಥಿಗಳು, 2015-16ರಲ್ಲಿ 41 ಶಾಲೆಯಿಂದ 313 ವಿದ್ಯಾರ್ಥಿಗಳು, 2016-17 ರಲ್ಲಿ 41 ಖಾಸಗಿ ಶಾಲೆಯಿಂದ 279 ವಿದ್ಯಾರ್ಥಿಗಳು ಆರ್‌ಟಿಇ ಯೋಜನೆ ಫಲಾನುಭವಿಗಳಾಗಿದ್ದು ಸರ್ಕಾರದ ಹಣದಲ್ಲಿ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಪ್ರಾರಂಭಿಸಿದ್ದರು.
2017-18ರಲ್ಲಿ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳಿದ್ದರೆ ಅವುಗಳಿಗೆ ದಾಖಲು ಮಾಡಬೇಕು ಎಂಬ ನಿಯಮವನ್ನು ಸಡಿಲ ಮಾಡಿದ್ದರಿಂದ ಆ ಸಾಲಿನಲ್ಲಿ ನಾಲ್ಕು ಖಾಸಗಿ ಶಾಲೆಗಳಿಗೆ ಆರ್‌ಟಿಇ ಮೂಲಕ ವಿದ್ಯಾರ್ಥಿಗಳು ದಾಖಲೆ ಮಾಡಿಕೊಳ್ಳಲು ಅವಕಾಶ ದೊರೆಯಿತು. ಅಂದು 45 ಖಾಸಗಿ ಶಾಲೆಯಿಂದ 417 ವಿದ್ಯಾರ್ಥಿಗಳು ಸರ್ಕಾರದ ಹಣದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಅವಕಾಶ ಪಡೆದರು.
ಸಾಲಮನ್ನಾಕ್ಕೆ ಹಣ ಹೊಂದಿಸಲು ಆರ್‌ಟಿಇಗೆ ಬ್ರೇಕ್: ರಾಜ್ಯದ ಮೈತ್ರಿ ಸರ್ಕಾರ ರೈತರ ಬೆಳೆ ಸಾಲಮನ್ನಾ ಮಾಡಿದ್ದರಿಂದ ಹಣ ಹೊಂದಿಸಲು ಅನ್ಯ ಮಾರ್ಗವಿಲ್ಲದೆ ಆರ್‌ಟಿಇಗೆ ಬ್ರೇಕ್ ಹಾಕಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಹಿಂದೆ ಬಡವರ ಯೋಜನೆಯನ್ನು ಕಿತ್ತುಕೊಂಡವರಿಂದ ಬಡವರಿಗೆ ಮುಳುವಾಗುವಂತೆ ಸರ್ಕಾರ ಹೊಸ ನಿಯಮ ಜಾರಿಗೆ ತಂದಿರುವುದು ಸಮಂಜಸವಲ್ಲ.
● ಶಾಮಸುಂದರ್ ಕೆ. ಅಣ್ಣೇನಹಳ್ಳಿ