ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ರೌಡಿಶೀಟರ್‌ನನ್ನು ನಾಲ್ವರು ದುಷ್ಕರ್ಮಿಗಳು ನಡು ರಸ್ತೆಯಲ್ಲೇ ಭೀಕರವಾಗಿ ಹತ್ಯೆಗೈದಿರುವ ಘಟನೆ ಯಶವಂತಪುರದ ಜಾಮೀಯ ಮಸೀದಿ ಬಳಿ ಶನಿವಾರ ನಸುಕಿನಲ್ಲಿ ನಡೆದಿದೆ.
ಗೊರಗುಂಟೆಪಾಳ್ಯ ನಿವಾಸಿ ವಿಜಯ್ ಅಲಿಯಾಸ್ ವಿಜಿ (29) ಕೊಲೆಯಾದ ಯುವಕ. ಕೃತ್ಯ ಎಸಗಿದ ರೌಡಿಶೀಟರ್, ನಂದಿನಿಲೇಔಟ್‌ನ ಕಂಠೀರವ ನಗರ ನಿವಾಸಿ ಮಂಜ ಅಲಿಯಾಸ್ ಕಿರಿಕ್, ಶಿವರಾಜ್ ಹಾಗೂ ಇತರರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ತುಮಕೂರು ಮೂಲದ ವಿಜಯ್ ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದು, ಕುಟುಂಬ ಸಮೇತ ಗೊರಗುಂಟೆ ಪಾಳ್ಯದಲ್ಲಿ ವಾಸವಾಗಿದ್ದಾನೆ. ಕಾರು ಚಾಲಕನಾಗಿದ್ದ ವಿಜಯ್, 2012ರಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ನಂತರ ಜಾಮೀನು ಪಡೆದು ಹೊರ ಬಂದ ವಿಜಯ್ ಇತರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಆತನ ವಿರುದ್ಧ ನಂದಿನಿ ಲೇಔಟ್ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಸ್ನೇಹಿತ ಶಿವರಾಜ್ ಜತೆ ವಿಜಯ್ ಗೊರಗುಂಟೆಪಾಳ್ಯದ ಕ್ಲಬ್‌ವೊಂದಕ್ಕೆ ತೆರಳಿದ್ದ. ನಂತರ ಇಬ್ಬರು ಸಮೀಪದಲ್ಲಿರುವ ಬಾರ್‌ಗೆ ಹೋಗಿದ್ದಾರೆ. ಅಲ್ಲಿ ಮಂಜ ಅಲಿಯಾಸ್ ಕಿರಿಕ್, ನವೀನ್ ಹಾಗೂ ಇತರರು ಸಿಕ್ಕಿದ್ದು, ಎಲ್ಲರೂ ಕಂಠಪೂರ್ತಿ ಮದ್ಯ ಸೇವಿಸಿದ್ದರು.
ತಡರಾತ್ರಿ 1ಗಂಟೆ ಸುಮಾರಿಗೆ ಊಟಕ್ಕಾಗಿ ಸ್ನೇಹಿತರನ್ನು ತನ್ನ ಕಾರಿನಲ್ಲಿ ಯಶವಂತಪುರದ ಕಡೆಗೆ ಕರೆದುಕೊಂಡು ಹೋಗುತ್ತಿದ್ದ. ಮಾರ್ಗಮಧ್ಯೆ ಕಾರಿನಲ್ಲಿ ಬರುವಾಗ ಆರೋಪಿಗಳು ಮತ್ತು ವಿಜಯ್ ನಡುವೆ ವೈಯಕ್ತಿಕ ವಿಚಾರಗಳಿಗೆ ಜಗಳ ನಡೆದಿದೆ. ಜಗಳ ತೀವ್ರ ವಿಕೋಪಕ್ಕೆ ಹೋದಾಗ ಯಶವಂತಪುರದ ಆರ್‌ಟಿಒ ಕಚೇರಿ ಪಕ್ಕದಲ್ಲಿರುವ ಜಾಮೀಯ ಮಸೀದಿ ಸಮೀಪದಲ್ಲಿ ವಿಜಯ್ ಕಾರು ನಿಲ್ಲಿಸಿ, ಕೆಳಗೆ ಇಳಿದಿದ್ದಾನೆ.
ಈ ವೇಳೆ ಆರೋಪಿಗಳು ವಿಜಯ್ ಕುತ್ತಿಗೆಗೆ ಚಾಕುವಿನಿಂದ ಹಲವು ಬಾರಿ ಇರಿದು ಕೊಲೆಗೈದು ಪರಾರಿಯಾಗಿದಾರೆ. ಕೊಲೆ ಪ್ರಕರಣ ದಾಖಲಾಗಿದ್ದು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.