ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಎರಡು ವಾರ ಕಳೆದಿದ್ದರೂ ಇನ್ನೂ ಸರಕಾರ ರಚನೆಯಾಗಿಲ್ಲ. ರಾಜ್ಯದ ರಾಜಕೀಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಾ ಸಾಗುತ್ತಿದ್ದು, ಯಾರು ಸರಕಾರ ರಚಿಸುತ್ತಾರೆ ಎಂಬ ಕುತೂಹಲವನ್ನು ನಿರಂತರವಾಗಿ ಜಾರಿಯಲ್ಲಿಟ್ಟಿದೆ. ನಿಜಕ್ಕಾದರೆ ಸರಕಾರ ರಚಿಸಲು ಸ್ಪಷ್ಟ ಜನಾದೇಶ ಇರುವುದು ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ. ಆದರೆ ಶಿವಸೇನೆಯ ಕೆಲವು ಬೇಡಿಕೆಗಳಿಂದಾಗಿ ಸರಕಾರ ರಚನೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ರಾಜಕೀಯ ನಾಯಕರೆಲ್ಲ ಅಧಿಕಾರದ ಚೌಕಾಶಿಗಿಳಿದಿರುವುದರಿಂದ ಜನರ ಗೋಳನ್ನು ಕೇಳುವವರಿಲ್ಲದಂತಾಗಿದೆ. ವಿಧಾನಸಭೆಯ ಅವಧಿ ಮುಗಿದಿದ್ದು, ಬಹುಮತ ಇದ್ದರೂ ಸರಕಾರ ರಚಿಸದೆ ಕಾಲಹರಣ ಮಾಡುತ್ತಿರುವುದು ಜನಾದೇಶಕ್ಕೆ ಮಾಡುತ್ತಿರುವ ಅಪಮಾನ ಎನ್ನುವುದನ್ನು ನಾಯಕರು ಅರ್ಥ ಮಾಡಿಕೊಳ್ಳಬೇಕು.
ತನ್ನ ಬೆಂಬಲ ಸಿಗಬೇಕಾದರೆ ಸರಕಾರದಲ್ಲಿ 50:50 ಸೂತ್ರ ಅಳವಡಿಕೆ ಯಾಗಬೇಕು ಎನ್ನುವುದು ಶಿವಸೇನೆಯ ಬೇಡಿಕೆ. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಮೊದಲೇ ಬಿಜೆಪಿ ಜೊತೆ ಈ ಕುರಿತು ಮಾತುಕತೆ ಯಾಗಿತ್ತು ಎನ್ನುವುದು ಪಕ್ಷದ ಅಧ್ಯಕ್ಷ ಉದ್ಧವ ಠಾಕ್ರೆ ತನ್ನ ಬೇಡಿಕೆಗೆ ನೀಡುತ್ತಿರುವ ಸಮರ್ಥನೆ.ಈ ಸೂತ್ರದ ಪ್ರಕಾರ ಮಿತ್ರ ಪಕ್ಷಗಳೆರಡು ಮುಖ್ಯಮಂತ್ರಿ ಪಟ್ಟವನ್ನು ತಲಾ ಎರಡೂವರೆ ವರ್ಷದಂತೆ ಸಮಾನವಾಗಿ ಹಂಚಿ ಕೊಳ್ಳ ಬೇಕಾಗುತ್ತದೆ. ಆದರೆ ಮೈತ್ರಿ ಘೋಷಣೆಯಾಗವಾಗ ಆಗಲಿ, ಚುನಾವಣಾ ಪ್ರಚಾರದ ಸಂದರ್ಭದಲ್ಲಾಗಲಿ ಎರಡೂ ಪಕ್ಷಗಳು 50:50 ಸೂತ್ರದ ಬಗ್ಗೆ ಚಕಾರ ಎತ್ತಿರಲಿಲ್ಲ. ಫಲಿತಾಂಶ ಪ್ರಕಟವಾದ ಬಳಿಕವೇ ಶಿವಸೇನೆ ಕಡೆಯಿಂದ ಈ ಬೇಡಿಕೆ ಕೇಳಿ ಬಂದದ್ದು. ಹೀಗಾಗಿ ಶಿವಸೇನೆಯ ಮಾತಿನ ಮೇಲೆ ಜನರಿಗೆ ಈಗಲೂ ಪೂರ್ಣ ನಂಬಿಕೆಯಿಲ್ಲ. ಒಂದು ವೇಳೆ ಹಾಗೊಂದು ಒಪ್ಪಂದ ಎರಡೂ ಪಕ್ಷಗಳ ನಡುವೆ ಆಗಿದ್ದರೆ ಅದನ್ನು ಜನರಿಂದ ಮುಚ್ಚಿಟ್ಟದ್ದು ಎರಡೂ ಪಕ್ಷಗಳ ತಪ್ಪು. ಪ್ರಚಾರದ ವೇಳೆ ದೇವೇಂದ್ರ ಫಡ್ನವಿಸ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬಂತೆ ಬಿಂಬಿಸಿ ಇದೀಗ ಏಕಾಏಕಿ ಮುಖ್ಯಮಂತ್ರಿ ಪಟ್ಟಕ್ಕೆ ಪಾಲುದಾರರು ಇದ್ದಾರೆ ಎನ್ನುವುದು ಜನರ ನಂಬಿಕೆಗೆ ಬಗೆಯುವ ದ್ರೋಹವಾಗುತ್ತದೆ.
ಮೈತ್ರಿಧರ್ಮ ಪಾಲನೆ ವಿಚಾರದಲ್ಲಿ ಶಿವಸೇನೆಯೊಳಗೆ ದ್ವಂದ್ವವಿರುವಂತೆ ಕಾಣಿಸುತ್ತದೆ. ಹಿಂದಿನ ಅವಧಿಯಲ್ಲೂ ಅದು ಅಧಿಕಾರದ ಪಾಲು ದಾರನಾಗಿರುವ ಹೊರತಾಗಿಯೂ ಸರಕಾರದ ತೀವ್ರ ಟೀಕಾಕಾರನಾಗಿತ್ತು. ಪ್ರಧಾನಿ ಮೋದಿಯನ್ನಂತೂ ನಿತ್ಯ ಎಂಬಂತೆ ಟೀಕಿಸುತ್ತಿತ್ತು.ಹಲವು ವಿಚಾರಗಳಲ್ಲಿ ಭಿನ್ನಭಿಪ್ರಾಯಗಳಿದ್ದರೂ ಸರಕಾರದಿಂದ ಹೊರಬರುವ ದಿಟ್ಟತನವನ್ನು ಅದು ತೋರಿಸಲಿಲ್ಲ. ಅನಂತರ ಚುನಾವಣೆ ಘೋಷಣೆಯಾದಾಗ ದಿಢೀರ್ ಎಂದು ಅದರ ನಿಲುವು ಮೆತ್ತಗಾಯಿತು. ಜೊತೆಯಾಗಿ ಸ್ಪರ್ಧಿಸಲು ಒಪ್ಪಿ ಇದೀಗ ಮೈತ್ರಿಕೂಟಕ್ಕೆ ಬಹುಮತ ಸಿಕ್ಕಿದರೂ ಸರಕಾರ ರಚಿಸಲು ಅನುವು ಮಾಡಿಕೊಡದಿರುವುದು ಸರಿಯಲ್ಲ.
ಯಾವ ಪಕ್ಷಕ್ಕೂ ಒಂಟಿಯಾಗಿ ಸರಕಾರ ರಚಿಸಲು ಬಹುಮತ ಇಲ್ಲದಿರುವ ಸ್ಥಿತಿಯಲ್ಲಿ ನಾನಾ ತರದ ಮೈತ್ರಿ ಚರ್ಚೆಯಲ್ಲಿದೆ. ಚುನಾವಣಾ ಕಣದಲ್ಲಿ ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಿ, ತದ್ವಿರುದ್ಧ ಸಿದ್ಧಾಂತಗಳುಳ್ಳ ಪಕ್ಷಗಳು ಒಂದು ವೇಳೆ ಅಧಿಕಾರಕ್ಕಾಗಿ ಕೈಜೋಡಿಸಿದರೆ ಅದು ಪ್ರಜಾ ತಂತ್ರದ ವಿಕಟ ಅಣಕವಾಗುತ್ತದೆ. ಹೀಗೊಂದು ಪ್ರಮಾದವನ್ನು ರಾಜ ಕೀಯ ಪಕ್ಷಗಳು ಎಸಗಿದರೆ ಮತದಾರರ ದೃಷ್ಟಿಯಲ್ಲಿ ಸಣ್ಣವರಾಗಬೇಕಾ ಗುತ್ತದೆ ಎಂಬ ಎಚ್ಚರಿಕೆ ಇರುವುದು ಅಗತ್ಯ.
ಮಹಾರಾಷ್ಟ್ರ ಕೈಗಾರಿಕೋದ್ಯಮದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರ. ಮುಂಬಯಿಗೆ ದೇಶದ ವಾಣಿಜ್ಯ ರಾಜಧಾನಿ ಎಂಬ ಹಿರಿಮೆಯಿದೆ. ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಿನಂತಿರುವ ನಗರವಿದು. ಇಂಥ ರಾಜ್ಯವೊಂದು ಬಹುಕಾಲ ಅರಾಜಕ ಸ್ಥಿತಿಯಲ್ಲಿರುವುದು ಸರಿಯಲ್ಲ. ಯಾರಿಗೂ ಸ್ಪಷ್ಟ ಜನಾದೇಶ ಸಿಕ್ಕಿಲ್ಲ ಎನ್ನುವುದು ನಿಜ. ಹಾಗೆಂದು ಸಿಕ್ಕಿರುವ ಜನಾದೇಶವನ್ನು ತಮ್ಮ ಲಾಲಸೆಗೆ ತಕ್ಕಂತೆ ಬಳಸಿಕೊಳ್ಳುವ ಅಧಿಕಾರ ಪಕ್ಷಗಳಿಗಿಲ್ಲ. ರಾಜ್ಯದ ರಾಜಕೀಯ ವ್ಯವಸ್ಥೆಯನ್ನು ಸ್ಥಿರತೆಗೆ ತರುವುದು ಎಲ್ಲ ಪಕ್ಷಗಳ ಸಮಾನ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಅವುಗಳು ಕಾರ್ಯ ಪ್ರವೃತ್ತವಾಗಬೇಕು.