Advertisement

ಮುಗಿಯದ ಅತೃಪ್ತ ಶಾಸಕರ ಹಗ್ಗಜಗ್ಗಾಟ

06:10 AM Jun 17, 2018 | |

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ವಂಚಿತ ಕಾಂಗ್ರೆಸ್‌ ಶಾಸಕರ ಮುನಿಸು ಮುಂದುವರಿದಿದೆ. ಅತೃಪ್ತ ಶಾಸಕರ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದ್ದು, “ಹೈಕಮಾಂಡ್‌ ಒಮ್ಮೆ ಅವಕಾಶ ನೀಡಿದರೆ ತಾವೂ
ಸಚಿವ ಸ್ಥಾನ ನಿರ್ವಹಿಸಲು ಸಿದ್ಧ’ ಎಂಬ ಹೇಳಿಕೆಗಳು ವ್ಯಕ್ತವಾಗುತ್ತಲೇ ಇದೆ.

Advertisement

ಇಡೀ ಬೆಳವಣಿಗೆ ಕುರಿತಂತೆ ಚಿಕ್ಕ ಬಳ್ಳಾಪುರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಎಂ.ವೀರಪ್ಪ ಮೊಯ್ಲಿ, “ಎಲ್ಲರಿಗೂ ಸಚಿವ ಸ್ಥಾನ ಕೊಡಲು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿಲ್ಲ. ಇರುವುದು ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರ.

ಆದ್ದರಿಂದ ಉಳಿದ 6 ಸ್ಥಾನಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದಾರಲ್ಲದೆ,”ಸಚಿವ ಸ್ಥಾನ ವಂಚಿತ ಶಾಸಕರಿಗೆ ಪ್ರಮುಖವಾದ ನಿಗಮ, ಮಂಡಳಿಗಳಲ್ಲಿ ಅವಕಾಶ ಮಾಡಿ ಕೊಡಲಾಗುವುದು’ ಎಂದೂ ಭರವಸೆ
ನೀಡಿದ್ದಾರೆ.

“ನಾವು ಅತೃಪ್ತರಲ್ಲ. ಸಮಾನ ಮನಸ್ಕರರು. ಸಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಉಳಿವಿಗೆ ಅಷ್ಟೇ ನಮ್ಮ ಹೋರಾಟ ಹೊರತು ಯಾವುದೇ ಆಸೆ,ಅಧಿಕಾರ, ಸ್ಥಾನಮಾನಕ್ಕೆ ಅಲ್ಲ’ ಎಂದು ಸಚಿವ ಸ್ಥಾನ ವಂಚಿತ ಶಾಸಕರ ಬಣದಲ್ಲಿ
ಗುರುತಿಸಿಕೊಂಡಿರುವ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಸ್ಪಷ್ಟಪಡಿಸಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಕೂಡ ಕಾಂಗ್ರೆಸ್‌ ಪಕ್ಷ ಉಳಿಯಬೇಕಿದೆ. ಅದಕ್ಕಾಗಿ ನಮ್ಮ ಹೋರಾಟವೇ ಹೊರತು ಯಾವುದೇ ವೈಯಕ್ತಿಕ ಆಸೆ, ಆಕಾಂಕ್ಷೆಗಳಿಗಾಗಿ ನಾವು ಸಭೆ ನಡೆಸುತ್ತಿಲ್ಲ ಎಂದೂ ಸುಧಾಕರ್‌ ಸ್ಪಷ್ಟಪಡಿಸಿದ್ದಾರೆ.

Advertisement

ಈ ನಡುವೆ, ಕುಷ್ಟಗಿಯಲ್ಲಿ ಮಾತನಾಡಿರುವ ಅಮರೇಗೌಡ ಪಾಟೀಲ ಬಯ್ನಾಪೂರ, “ಮೈತ್ರಿ ಸರ್ಕಾರದಲ್ಲಿ ನನಗೆ ಮಂತ್ರಿ ಸ್ಥಾನ ಸಿಕ್ಕರೂ ಅಚ್ಚರಿಯಿಲ್ಲ’ ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಹೈ-ಕ ಪ್ರಾತಿನಿಧ್ಯತೆ ಹಿನ್ನೆಲೆಯಲ್ಲಿ ನನ್ನ ಹೆಸರು ಪ್ರಸ್ತಾಪಿಸಿರಬಹುದು. ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ನಿಜ. ಜವಾಬ್ದಾರಿ ವಹಿಸಿದರೆ ನಿಷ್ಠೆಯಿಂದ ಕಾರ್ಯ ನಿರ್ವಹಿಸುವೆ ಎಂದಿದ್ದಾರೆ. “ಸಂಪುಟ ಸೇರಲು ನಾನೂ ಆಕಾಂಕ್ಷಿ. ನನ್ನ ಹಿರಿತನ, ಬದಟಛಿತೆ ಗಮನಿಸಿ ಹೈಕಮಾಂಡ್‌ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ಧ ‘ ಎಂದು ಬಳ್ಳಾರಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಕೆ.ಸಿ.ಕೊಂಡಯ್ಯ ಹೇಳಿದ್ದಾರೆ.

ಆಪ್ತರಿಗೆ ಅವಕಾಶ ಕೊಡಿಸಲು ಹೋರಾಟ
ಬೆಂಗಳೂರು:
ನನಗೆ ಸಚಿವ ಸ್ಥಾನದ ಅಗತ್ಯವಿಲ್ಲ. ನಮ್ಮೊಂದಿಗೆ ಗುರುತಿಸಿಕೊಂಡ ಶಾಸಕರಿಗೆ ನಿಗಮ-ಮಂಡಳಿಯಲ್ಲಿ ಅವಕಾಶ ಕಲ್ಪಿಸಲು ಹೋರಾಟ ಮುಂದುವರಿಸಲಾಗುವುದು ಎಂದು ಕಾಂಗ್ರೆಸ್‌ ಹಿರಿಯ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಸಿಎಂ ಕುಮಾರಸ್ವಾಮಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದ ನಂತರ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕೆ ಅವಕಾಶವಿಲ್ಲ. ಹೀಗಾಗಿ ಸಚಿವ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿಲ್ಲ.
ನಮ್ಮ ಜತೆ ಗುರುತಿಸಿಕೊಂಡ ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಕೊಡಿಸಲು ಪ್ರಯತ್ನ ನಡೆಸಿದ್ದೇವೆಂದು ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಡವೆಂದು ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಅವರಿಗೆ ತಿಳಿಸಿದ್ದೇನೆ. 

ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ಪಕ್ಷದಲ್ಲಿ ಅಸಮಾಧಾನವಿದೆ. ಪಕ್ಷದ ವರಿಷ್ಠರು ಅದನ್ನು ಸರಿಪಡಿಸಬೇಕೆಂದು ಹೇಳಿದರು. ಕುಮಾರಸ್ವಾಮಿಯವರ ಭೇಟಿ ರಾಜಕೀಯ ವಿಚಾರದ್ದಲ್ಲ. ಬೆಳಗಾವಿ ನಗರಾಭಿವೃದ್ಧಿ
ವಿಷಯ ಕುರಿತು ಚರ್ಚಿಸಲು ಮುಖ್ಯಮಂತ್ರಿ ಮನೆಗೆ ಬಂದಿದ್ದೆ ಎಂದು ಸಮಜಾಯಿಷಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next