Advertisement

ಸಾಹಿತ್ಯಾಸಕ್ತರಿಗಾಗಿ ಬರಲಿದೆ “ವಜ್ರದ ಬೇರುಗಳು’

06:00 AM Jul 23, 2018 | |

ಬೆಂಗಳೂರು: ಸಾಹಿತ್ಯ ಕ್ಷೇತ್ರದ ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರಿಗೆ ಹೊಸಬಗೆಯಲ್ಲಿ ಕನ್ನಡ ಸಾಹಿತ್ಯ ತಿಳಿಸಲು ಕರ್ನಾಟಕ ಸಾಹಿತ್ಯ ಅಕಾಡೆಮಿ “ವಜ್ರದ ಬೇರುಗಳು’ ಯೋಜನೆಯಡಿ “ಸಾಹಿತ್ಯ ಪ್ರಕಾರ ಮಾಲಿಕೆ’ ಪ್ರಕಟಿಸುವ ಕಾರ್ಯಕ್ಕೆ ಮುಂದಾಗಿದೆ.

Advertisement

ಸುಮಾರು 20 ಕೃತಿಗಳ ಮಾಲಿಕೆ ಇದಾಗಲಿದ್ದು, ಲೇಖಕರ ಆಯ್ಕೆಗಾಗಿ ದೊಡ್ಡ ಪಟ್ಟಿಯನ್ನೇ ಸಿದ್ಧಪಡಿಸಲಾಗಿದೆ. ಈ ಪೈಕಿ ಆಯ್ದ ಲೇಖಕರಿಂದ ಲೇಖನಗಳನ್ನು ಬರೆಸಿ ಪ್ರಕಟಿಸಲಾಗುತ್ತದೆ.  ಸಾಹಿತ್ಯ ಕ್ಷೇತ್ರ ಪ್ರವೇಶಿಸುವ ವಿದ್ಯಾರ್ಥಿಗಳು  ಹಾಗೂ ಸಾಹಿತ್ಯ ಪ್ರಕಾರಗಳನ್ನು ಅಭ್ಯಸಿಸುವರಿಗೆ ಈ ಪುಸ್ತಕ ಕೈಪಿಡಿಯಂತೆ ಕೆಲಸ ಮಾಡಲಿದೆ.

ಸಾಹಿತ್ಯ ಪ್ರಕಾರಗಳು, ಛಂದೋ ಪ್ರಕಾರಗಳು ಮತ್ತು ಕನ್ನಡ ಸಾಹಿತ್ಯದ ಮೇಲೆ ಗಾಢ ಪ್ರಭಾವ ಬೀರಿರುವ ಕೆಲವು ಪ್ರಕ್ರಿಯೆಗಳನ್ನು ಪರಿಚಯ ಮಾಡಿಕೊಡುವುದು “ವಜ್ರದ ಬೇರುಗಳು – ಸಾಹಿತ್ಯ ಪ್ರಕಾರ ಮಾಲಿಕೆ’ಯ ಮುಖ್ಯ ಉದ್ದೇಶವಾಗಿದೆ ಎನ್ನುತ್ತಾರೆ ಅಕಾಡೆಮಿ ಅಧಿಕಾರಿಗಳು.

ಯೋಜನಾ ವೆಚ್ಚ 15 ಲಕ್ಷ:
ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ನೇತೃತ್ವದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಪುಸ್ತಕದ ರೂಪರೇಷೆಗಳ ಬಗ್ಗೆ ಚರ್ಚಿಸಲಾಗಿದೆ. ಒಂದು ಕೃತಿ ಎಷ್ಟು ಪುಟ ಒಳಗೊಂಡಿರಬೇಕು?ಯಾವೆಲ್ಲಾ ಸಾಹಿತ್ಯ ಇರಬೇಕು ಎಂಬ ಬಗ್ಗೆಯೂ ಸಮಾಲೋಚಿಸಲಾಗಿದೆ. ಆಯ್ದ ಲೇಖಕರಿಂದ ಕೃತಿ ಬರೆಸುವ ಕಾರ್ಯವನ್ನು ಕೂಡ ಸಾಹಿತ್ಯ ಅಕಾಡೆಮಿ ಆರಂಭಿಸಿದ್ದು, ಇದಕ್ಕಾಗಿ 15 ಲಕ್ಷ ರೂ. ಮೀಸಲಿಟ್ಟಿದೆ.

ಡಾ.ಎಚ್‌.ಎಸ್‌.ರಾಘವೇಂದ್ರರಾವ್‌, ಡಾ.ಬಸವರಾಜ ಕಲ್ಗುಡಿ ಅವರ ಸಂಪಾದಕೀಯದಲ್ಲಿ “ವಜ್ರದ ಬೇರುಗಳ ಮಾಲಿಕೆ’ ಮೂಡಿಬರಲಿದೆ. ಒಂದೊಂದು ಕೃತಿ ಸುಮಾರು 100 ಪುಟಗಳನ್ನು ಒಳಗೊಳ್ಳಲಿದೆ. ಪುಸ್ತಕ ರೂಪದಲ್ಲಿ ಹೊರಬರಲು 8-9 ತಿಂಗಳು ಹಿಡಿಯುವ ಸಾಧ್ಯತೆ ಇದೆ ಎಂದು ಅಕಾಡೆಮಿಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

Advertisement

ಲೇಖಕರು ಯಾರ್ಯಾರು?:
ಈ ಮಾಲಿಕೆಯಲ್ಲಿ ಮಕ್ಕಳ ಸಾಹಿತ್ಯ, ಜಾನಪದ, ಸಾಹಿತ್ಯ ವಿಮರ್ಶೆ, ಕಾವ್ಯ ಮತ್ತು ಮಹಾಕಾವ್ಯ, ಸಣ್ಣಕತೆ ಮತ್ತು ಗದ್ಯದ ನೆಲೆಗಳು ಸೇರಿದಂತೆ ಹಲವು ವಿಷಯಗಳಿಗೆ ಆದ್ಯತೆ ನೀಡಲಾಗಿದೆ.  “ತಾತ್ವಿಕ ಅಧ್ಯಯನ ‘ ವಿಷಯದ ಬಗ್ಗೆ ಡಾ.ಬಸವರಾಜ ಕಲ್ಗುಡಿ ಮತ್ತು ಡಾ.ಎಚ್‌.ಎಸ್‌.ರಾಘವೇಂದ್ರ ರಾವ್‌ ಬರೆಯಲಿದ್ದಾರೆ. ಹಾಗೆಯೇ  ಡಾ.ಲಕ್ಷ್ಮೀನಾರಾಯಣ “ಹಳೆಗನ್ನಡ ಸಾಹಿತ್ಯ’, ಡಾ.ಎಂ.ಪ್ರಸ್ನಕುಮಾರ್‌ “ನಡುಗನ್ನಡ ಸಾಹಿತ್ಯ’ , ಡಾ.ಅಮರೇಶ ನುಗಡೋಣಿ  “ಸಣ್ಣಕತೆ’, ಎಸ್‌.ಆರ್‌.ವಿಜಯಶಂಕರ್‌ ” ಸಾಹಿತ್ಯ ವಿಮರ್ಶೆ’, ಡಾ.ಅನಂದ ಪಾಟೀಲ “ಮಕ್ಕಳ ಸಾಹಿತ್ಯ’, ಡಾ.ಎಚ್‌.ಶಶಿಕಲಾ “ಕಾದಂಬರಿ’ ಬಗ್ಗೆ ದಾಖಲಿಸಲಿದ್ದಾರೆ.

ಚರಿತ್ರೆಯನ್ನ ಪ್ರತಿನಿಧಿಸುವುದಿಲ್ಲ.
ಈ ಮಾಲಿಕೆ ಪ್ರಧಾನವಾಗಿ ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ಆಧುನಿಕ ಕನ್ನಡ ಸಾಹಿತ್ಯಗಳಿಗೆ ಸಂಬಂಧಿಸಿದ್ದಾಗಿದೆ. ಸಾಹಿತ್ಯದ ಚರಿತ್ರೆಯನ್ನಾಗಲಿ, ಕವಿಚರಿತ್ರೆಯನ್ನಾಗಲಿ ಪ್ರತಿನಿಧಿಸುವುದಿಲ್ಲ. ಬದಲಾಗಿ ಪ್ರತಿಯೊಂದು ಸಾಹಿತ್ಯ ಪ್ರಕಾರಗಳ ಆಕೃತಿಯ ತ್ವಾತ್ವಿಕ ವಿಶ್ಲೇಷಣೆ ಒಳಗೊಂಡಿರುತ್ತದೆ. ಸಾಹಿತ್ಯ ಸೃಷ್ಟಿಯ ಆಕರಗಳು ಮತ್ತು ಪರಿಕರಗಳನ್ನು ಕುರಿತು ಕೆಲವು ಸಂಪುಟಗಳು ಚರ್ಚಿಸಲಿವೆ.

ಕನ್ನಡ ಸಾಹಿತ್ಯದ ಬೆಳವಣಿಗೆಗೆ ಸಂಬಂಧಿಸಿದಂತೆ ಅಕಾಡೆಮಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರಲ್ಲಿ ವಜ್ರದ ಬೇರುಗಳು ಯೋಜನೆ – ಸಾಹಿತ್ಯ ಪ್ರಕಾರ ಮಾಲಿಕೆ ಕೂಡ ಒಂದು. ಸಾಹಿತ್ಯದ ವಿದ್ಯಾರ್ಥಿಗಳಿಗೆ ಈ ಪುಸ್ತಕ ಕೈಪಿಡಿಯಾಗಲಿದೆ.
– ಡಾ.ಅರವಿಂದ ಮಾಲಗತ್ತಿ,ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next