Advertisement

ಬದುಕು ಕೊಟ್ಟ ರೊಟ್ಟಿ

07:14 PM Jul 30, 2019 | mahesh |

ಗಂಗಾಬಾಯಿ ತಯಾರಿಸುವ ರೊಟ್ಟಿ- ಚಟ್ನಿಪುಡಿಯ ರುಚಿಗೆ ಮಾರು ಹೋಗದವರಿಲ್ಲ. ನೀವೇನಾದರೂ ವಿಜಯಪುರಕ್ಕೆ ಹೋದರೆ, ಅಲ್ಲಿನ ಗಾಂಧಿಚೌಕದಲ್ಲಿರುವ ಗಂಗಾಬಾಯಿ ರೊಟ್ಟಿ ಅಂಗಡಿಗೆ ಹೋಗಲು ಮರೆಯದಿರಿ.

Advertisement

ಸ್ವಂತ ಸಂಪಾದನೆಗೆ ಸರ್ಕಾರಿ/ಖಾಸಗಿ ಕೆಲಸವೇ ಆಗಬೇಕಿಲ್ಲ, ಅಕ್ಷರ ತಿಳಿದಿರಬೇಕೆಂಬ ನಿಯಮವಿಲ್ಲ, ಲಕ್ಷಾಂತರ ರೂಪಾಯಿ ಬಂಡವಾಳವೂ ಬೇಕಿಲ್ಲ ಅಂತ ಹೇಳಿದರೆ ನಿಮಗೆ ಅಚ್ಚರಿಯಾಗಬಹುದು. ಗೊತ್ತಿರುವ ಕೌಶಲವನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡರೆ, ಆದಾಯ ಗಳಿಸುವುದು ಕಷ್ಟವಲ್ಲ ಎನ್ನುತ್ತಾರೆ ಗಂಗಾಬಾಯಿ ಮಕಣಾಪೂರ.

ವಿಜಯಪುರದ ಸಿಂದಗಿ ತಾಲೂಕಿನ ಗಂಗಾಬಾಯಿಗೆ, ಓದು-ಬರಹ ಗೊತ್ತಿಲ್ಲ. ಆದರೆ, ರುಚಿರುಚಿಯಾಗಿ ಅಡುಗೆ ಮಾಡಲು ಗೊತ್ತಿದೆ. ಅದುವೇ ಅವರ ಶಕ್ತಿ. ಅಯ್ಯೋ, ನಂಗೆ ಬೇರೇನೂ ಗೊತ್ತಿಲ್ಲ ಅಂತ ಕೀಳರಿಮೆ ಪಡದೆ, ಅಡುಗೆಯಿಂದಲೇ ದುಡಿಮೆ ಮಾಡುತ್ತಿರುವುದು ಗಂಗಾಬಾಯಿಯ ಜಾಣ್ಮೆ.

ಮನೆಯಲ್ಲಿಯೇ ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಅಗಸಿ ಚಟ್ನಿಪುಡಿ, ಶೇಂಗಾ ಚಟ್ನಿಪುಡಿ, ಮೆಂತ್ಯೆ ಹಿಟ್ಟು ತಯಾರಿಸಿ, ವಿಜಯಪುರದ ಗಾಂಧೀಚೌಕ್‌ನ ಕಾಲೇಜಿನ ಎದುರು, ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ವ್ಯಾಪಾರ ಮಾಡುತ್ತಾರೆ. ಇವರ ರೊಟ್ಟಿ, ಚಟ್ನಿ ಪುಡಿಯನ್ನು ಜನ ಮುಗಿಬಿದ್ದು ಕೊಳ್ಳುತ್ತಾರೆ. ಮೆಂತ್ಯೆ ಹಿಟ್ಟನ್ನು ಮಧುಮೇಹಿಗಳು ಇಷ್ಟಪಡುತ್ತಾರೆ.

ಮುಂಗಡ ಕೊಟ್ಟು ಕೊಳ್ತಾರೆ
ವಲಸೆ ಬಂದ ಜನರು ಪ್ರತಿದಿನ ಇವರಿಂದ ರೊಟ್ಟಿ ಖರೀದಿಸುತ್ತಾರೆ. ಹಾಸ್ಟೆಲ್‌, ಪಿ.ಜಿಯಲ್ಲಿರುವ ಯುವಕ-ಯುವತಿಯರಿಗೂ ಗಂಗಾಬಾಯಿ ತಯಾರಿಸುವ ರೊಟ್ಟಿ ಅಂದ್ರೆ ಇಷ್ಟ. ಕೆಲವೊಮ್ಮೆ, ಸಾವಿರ ರೊಟ್ಟಿ ಬೇಕು ಅಂತ ಮುಂಗಡ ಹಣ ಕೊಟ್ಟು ಖರೀದಿಸುವಷ್ಟು ಫೇಮಸ್‌ ಆಗಿದೆ ಇವರ ರೊಟ್ಟಿ.

Advertisement

ಮೊದಲು ವ್ಯಾಪಾರವೇ ಆಗ್ಲಿಲ್ಲ
“ಮೊದ ಮೊದಲು ಯಾರೂ ನನ್ನ ರೊಟ್ಟಿಗಳನ್ನು ಖರೀದಿಸುತ್ತಿರಲಿಲ್ಲ. ಒಂದು ದಿನ ಕೆಲ ಹುಡುಗರು ಬಂದು ರೊಟ್ಟಿ ತೆಗೆದುಕೊಂಡು ಹೋದರು. ಅದಾದಮೇಲೆ ಪ್ರತಿದಿನವೂ 20-30 ರೊಟ್ಟಿ ಕೊಳ್ಳತೊಡಗಿದರು. ಹಾಗೇ ಒಬ್ಬರಿಂದ ಒಬ್ಬರಿಗೆ ಗೊತ್ತಾಗಿ, ನನ್ನ ವ್ಯಾಪಾರ ಹೆಚ್ಚಾಯ್ತು. ಈಗ ದಿನಕ್ಕೆ 600-1000 ರೂ.ವರೆಗೆ ವ್ಯಾಪಾರ ಆಗುತ್ತೆ ಅಂತಾರೆ’ ಗಂಗಾಬಾಯಿ. ಇವರಿಗೆ, ಇಬ್ಬರು ಗಂಡು ಹಾಗೂ ಒಬ್ಬಳು ಮಗಳಿದ್ದಾಳೆ. ಹೆಂಡತಿಯ ರೊಟ್ಟಿ ವ್ಯಾಪಾರಕ್ಕೆ ಗಂಡ ಸಾಯಬಣ್ಣ ಅವರ ಸಹಕಾರ ದೊಡ್ಡದಿದೆ.

“ಬಾಳ ಬಂಡಿ ಸಾಗಿಸಲು ಒಂದು ಎತ್ತು ದುಡಿದರೆ ಸಾಲದು, ಜೋಡೆತ್ತುಗಳೂ ಸಮನಾಗಿ ದುಡೀಬೇಕು. ರೊಟ್ಟಿ ವ್ಯಾಪಾರಕ್ಕೆ ಗಂಡ ಬೆನ್ನೆಲುಬಾಗಿ ನಿಂತಿರೋದ್ರಿಂದ ಯಾವುದೂ ಕಷ್ಟ ಅನ್ನಿಸ್ತಿಲ್ಲ’
-ಗಂಗಾಬಾಯಿ ಮಕಣಾಪೂರ.

-ವಿದ್ಯಾಶ್ರೀ ಗಾಣಿಗೇರ

Advertisement

Udayavani is now on Telegram. Click here to join our channel and stay updated with the latest news.

Next