Advertisement

ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು; ಎಂ.ಪಿ. ರೇಣುಕಾಚಾರ್ಯ

05:44 PM Apr 20, 2022 | Team Udayavani |

ಹೊನ್ನಾಳಿ: ಹೆಣ್ಣು ಕುಟುಂಬದ ಕಣ್ಣು, ಕುಟುಂಬದ ಜವಾಬ್ದಾರಿ ಹೊತ್ತು ಪ್ರಸ್ತುತ ದಿನಗಳಲ್ಲಿ ಮನೆ ಒಳಗಡೆ ಹಾಗೂ ಹೊರಗಡೆ ದುಡಿಯುವ ಮಹಿಳೆ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಸಹಕಾರಿಯಾಗಿದ್ದಾಳೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ಜಿಪಂ, ತಾಪಂ, ಹೊನ್ನಾಳಿ-ನ್ಯಾಮತಿ ತಾಲೂಕುಗಳ ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಹೊನ್ನಾಳಿ, ನ್ಯಾಮತಿ ಸಂಜೀವಿನಿ ಯೋಜನೆ ಸಹಯೋಗದೊಂದಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಂಗಳವಾರ ಪಟ್ಟಣದ ಅಗಳ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅವಳಿ ತಾಲೂಕುಗಳ ಸಂಜೀವಿನಿ ಹಾಗೂ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಹಾಯಧನ ಹಾಗೂ ಸುತ್ತುನಿಧಿ ಚೆಕ್‌ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 7500 ಸ್ತ್ರೀಶಕ್ತಿ ಗುಂಪುಗಳಿಗೆ ಕಿರು ಉದ್ಯಮಕ್ಕೆ ಮರುಪಾವತಿ ಇಲ್ಲದ 75 ಕೋಟಿ ರೂ. ಧನಸಹಾಯ ನೀಡಲಾಗುತ್ತಿದೆ. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ 64 ಸ್ತ್ರೀಶಕ್ತಿ ಸಂಘಗಳಿಗೆ ತಲಾ 1 ಲಕ್ಷ ರೂ.ನಂತೆ ಒಟ್ಟು 64 ಲಕ್ಷ ರೂ.ಗಳನ್ನು ಚೆಕ್‌ ಮೂಲಕ ವಿತರಿಸಲಾಗುತ್ತಿದೆ. 95 ಎನ್‌ಆರ್‌ಎಲ್‌ಎಂ ಸಂಜೀವಿನಿ ಸ್ವಸಹಾಯ ಗುಂಪುಗಳಿಗೆ ಸುತ್ತುನಿಧಿಯಾಗಿ ತಲಾ 15 ಸಾವಿರ ರೂ.ಗಳ ಚೆಕ್‌ ವಿತರಣೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ
ಸ್ತ್ರೀಶಕ್ತಿ ಸಂಘಗಳು ಸರ್ಕಾರದಿಂದ ಸಿಗುವ ಸಹಾಯಧನದಿಂದ ಸ್ವಉದ್ಯೋಗ ಕೈಗೊಂಡು ವೈಯಕ್ತಿಕ ಹಾಗೂ ಸಾಮಾಜಿಕವಾಗಿ ಆರ್ಥಿಕಾಭಿವೃದ್ಧಿ ಹೊಂದಬೇಕೆಂದು ಕರೆ ನೀಡಿದರು.

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪಿನ ಮಹಿಳೆಯರಿಗೆ ಕೆಲಸದ ಸಂಬಂಧ ಏನೇ ಸಮಸ್ಯೆ ಇದ್ದರೆ ನನಗೆ ಕರೆ ಮಾಡಿ. ನನ್ನ ಕೈಲಾದಷ್ಟು ಸಮಸ್ಯೆ ಬಗೆಹರಿಸಿ ಆರ್ಥಿಕ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು.

ಉಪವಿಭಾಗಾಧಿ ಕಾರಿ ಹುಲ್ಲುಮನಿ ತಿಮ್ಮಣ್ಣ, ಹೊನ್ನಾಳಿ ಮತ್ತು ನ್ಯಾಮತಿ ತಹಶೀಲ್ದಾರ್‌ಗಳಾದ ರಶ್ಮಿ, ರೇಣುಕಾ ಮಾತನಾಡಿದರು. ಸಿಡಿಪಿಒ ಮಹಾಂತೇಶ್‌ ಪೂಜಾರ್‌, ಹಿಂದುಳಿದ ವರ್ಗಗಳ ಇಲಾಖೆ ಅ ಧಿಕಾರಿ ಮೃತ್ಯುಂಜಯಸ್ವಾಮಿ, ಬಿಇಒ ರಾಜೀವ್‌, ಪುರಸಭೆ ಮುಖ್ಯಾಧಿಕಾರಿ ಎಸ್‌. ಆರ್‌. ವೀರಭದ್ರಯ್ಯ ಸೇರಿದಂತೆ ವಿವಿಧ ಇಲಾಖೆ ಅ ಧಿಕಾರಿಗಳು ಉಪಸ್ಥಿತರಿದ್ದರು. ತಾಪಂ ಇಒ ರಾಮಾ ಭೋವಿ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಕೆ.ಎಸ್‌. ವಿಜಯಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ ವರ್ಣೇಶಪ್ಪ ನಿರೂಪಿಸಿದರು.

Advertisement

ಹೊನ್ನಾಳಿ ಜನ ಪಳಗಿಸಿದ ಆನೆ ನಾನು
ಕೆಲ ರಾಜಕೀಯ ಮುಖಂಡರು ಚುನಾವಣೆ ಬಂದಾಗ ಕಣ್ಣೀರು ಸುರಿಸುವ, ಕಪಟ ನಾಟಕವಾಡುವ ಪ್ರಹಸನ ಪ್ರಾರಂಭ ಮಾಡುತ್ತಾರೆ. ನಾನು ಯಾವುದೇ ಕಪಟ ನಾಟಕಗಳನ್ನು ಪ್ರದರ್ಶಿಸದೆ ನನ್ನ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇನೆ. ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಗುರುತಿಸಿರುವ ಜನತೆ ಮೂರು ಬಾರಿ ಶಾಸಕನ್ನಾಗಿ ಆಯ್ಕೆ ಮಾಡಿದ್ದಾರೆ. ಇದಕ್ಕಿಂತ ನನಗಿನ್ನೇನು ಬೇಕು ಎಂದ ರೇಣುಕಾಚಾರ್ಯ, ನನಗೆ ರಾಜ್ಯದ ವಿವಿಧ ಭಾಗದಲ್ಲಿ ಹೋದಾಗ “ಹೊನ್ನಾಳಿ ಹುಲಿ’ ಎಂದು ಉದ್ಘೋಷ ಮಾಡುತ್ತಾರೆ. ನಾನು ಹುಲಿ, ಸಿಂಹ ಯಾವುದೂ ಅಲ್ಲ. ಹೊನ್ನಾಳಿ ಜನ ಪಳಗಿಸಿದ ಆನೆ ಎಂದರು.

ಸ್ತ್ರೀಶಕ್ತಿ ಸಹಾಯ ಸಂಘಗಳ ಮಹಿಳೆಯರು ತಾಲೂಕು ಕೇಂದ್ರಕ್ಕೆ ಬಂದಾಗ ಅವರಿಗೆ ಕುಳಿತುಕೊಂಡು ವಿಶ್ರಾಂತಿ ಪಡೆಯಲು ಸ್ಥಳವಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರದಲ್ಲಿ ಸ್ತ್ರೀಶಕ್ತಿ ಭವನ ನಿರ್ಮಾಣ ಮಾಡಲು ನಿವೇಶನ ಪಡೆದು ಸುಸಜ್ಜಿತ ಸ್ತ್ರೀಶಕ್ತಿ ಭವನ ನಿರ್ಮಾಣ ಮಾಡಲಾಗುವುದು.
ಎಂ.ಪಿ. ರೇಣುಕಾಚಾರ್ಯ,
ಸಿಎಂ ರಾಜಕೀಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next