Advertisement

ದೇಶದ ಅಭಿವೃದ್ಧಿಯಲ್ಲಿ ಮಹಿಳೆ ಪಾತ್ರ ಅಪಾರ

03:06 PM Mar 16, 2022 | Team Udayavani |

ಗದಗ: ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲಿ ಮುನ್ನುಗ್ಗುತ್ತಿದ್ದು, ದೇಶದ ಅಭಿವೃದ್ಧಿಯಲ್ಲೂ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯೆ ಹಾಗೂ ನಟಿ ತಾರಾ ಅನುರಾಧಾ ಹೇಳಿದರು.

Advertisement

ಜಿಲ್ಲಾ ಮಹಿಳಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ನಗರದ ವಿಠ್ಠಲಾರೂಢ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತವಾಗಿ ಎರಡನೇ ಬಾರಿಗೆ ದೇಶದ ಅಭಿವೃದ್ಧಿ ಪರವಾದ ಆಯವ್ಯಯವನ್ನು ಸಮರ್ಥವಾಗಿ ಮಂಡಿಸಿದ್ದಾರೆ. ಕೋವಿಡ್‌ ಪರಿಸ್ಥಿತಿಯಲ್ಲಿ ಹಲವಾರು ವಲಯಗಳಿಗೆ ಪ್ಯಾಕೇಜ್‌ ಘೋಷಿಸಿ ಆರ್ಥಿಕ ಉತ್ತೇಜನ ನೀಡಿದ್ದಾರೆ. ಆ ಮೂಲಕ ಮಹಿಳೆಯರು ಕೇವಲ ಕುಟುಂಬದ ಲೆಕ್ಕವನ್ನಷ್ಟೇ ಅಲ್ಲ ದೇಶದ ಹಣಕಾಸಿನ ಲೆಕ್ಕವನ್ನೂ ಸಮರ್ಥವಾಗಿ ನಿಭಾಯಿಸಬಲ್ಲರು ಎಂಬುದನ್ನು ತೋರಿಸಿಕೊಟ್ಟಿದ್ದಾರೆಂದು ಮೆಚ್ಚುಗೆ ಸೂಚಿಸಿದರು.

ಮಹಿಳೆಯರು ಮನೆಯ ನಾಲ್ಕು ಕೋಣೆಗೆ ಸೀಮಿತರಾಗದೇ, ಶಿಕ್ಷಣ ಮತ್ತು ಸಮಾಜಮುಖೀ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕಲ್ಪಿಸಿ, ಉಜ್ವಲ ಭವಿಷ್ಯ ರೂಪಿಸಬೇಕು. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಹೆಣ್ಣು ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸಬಾರದು. ವಿಶ್ವದಲ್ಲಿಯೇ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಮತ್ತು ಆಚರಣೆ ಹೊಂದಿರುವ ಭಾರತೀಯ ಸಾಂಸ್ಕೃತಿಕ ವೈಭವವನ್ನು ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡಬೇಕು. ಅವರಲ್ಲಿ ದೇಸಿ ಸಂಸ್ಕೃತಿ, ಸಂಸ್ಕಾರಗಳನ್ನು ಬಿತ್ತಿ, ಸುಸಂಸ್ಕೃತರನ್ನಾಗಿ ಬೆಳೆಸಬೇಕು. ಹೆಣ್ಣು ಮಕ್ಕಳನ್ನು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು.

ಇದೇ ವೇಳೆ ನಟಿ ತಾರಾ ಅನುರಾಧಾ ಅವರೊಂದಿಗೆ ವಿವಿಧ ಕ್ಷೇತ್ರಗಳ ಸಾಧಕಿಯರನ್ನೂ ಸನ್ಮಾನಿಸಲಾಯಿತು. ವೇದಿಕೆ ಮೇಲೆ ಜಿಲ್ಲಾ ಮಹಿಳಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷೆ ಕಸ್ತೂರಿ ಹಿರೇಗೌಡರ, ನಗರಸಭೆ ಮಾಜಿ ಅಧ್ಯಕ್ಷೆ ಶಿವಲೀಲಾ ಅಕ್ಕಿ, ಬಿಜೆಪಿ ಶಹರ ಅಧ್ಯಕ್ಷೆ ವಿಜಯಲಕ್ಷ್ಮೀ ಮಾನ್ವಿ, ವಿನುತಾ ಸಂದೀಪ್‌, ಡಾ|ರಾಜೇಶ್ವರಿ ಕುರುಡಗಿ, ರಶ್ಮಿ ಅಂಗಡಿ, ಸರಕಾರಿ ಅಭಿಯೋಜಕಿ ಸವಿತಾ ಶಿಗ್ಲಿ, ಆರ್‌.ಆರ್‌ ಮುಂಡೇವಾಡಿ, ಸಹನಾ ಪಾಟೀಲ್‌, ಸಂಧ್ಯಾ ಕೋಟಿ, ವಿಜಯ ಪಾಟೀಲ್‌, ಉದ್ಯಮಿ ಜಯಶ್ರೀ ಹಿರೇಮಠ, ಪ್ರೇಮಾ ಮೇಟಿ, ಅನ್ನಪೂರ್ಣಾ ವರವಿ, ಸುಮಂಗಲಾ ಹದ್ಲಿ, ಸುವರ್ಣಾ ವಸ್ತದ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next