Advertisement

“ಜ್ಞಾನದಾಹ ನೀಗಿಸುವಲ್ಲಿ ವಿದ್ಯಾಲಯದ ಪಾತ್ರ ಮುಖ್ಯ’

11:22 PM Jun 22, 2019 | Team Udayavani |

ಕುಂಬಳೆ: ಜನ ಸಾಮಾನ್ಯರ ಜ್ಞಾನದಾಹವನ್ನು ಪೂರೈಸುವಲ್ಲಿ ವಿದ್ಯಾಲಯಗಳ ಪಾತ್ರ ಮಹತ್ತರವಾದುದು. ಸಂಸ್ಕಾರ ಕಲಿಸುವ, ಜೀವನ ಪಥದ ಮಾರ್ಗ ತೋರಿಸುವ ಶಿಕ್ಷಣ ವ್ಯವಸ್ಥೆ ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತವಾಗದೆ ಪುಟಾಣಿಗಳ ಸರ್ವಾಂಗೀಣ ಅಭಿವೃದ್ದಿಗೆ ದಾರಿದೀಪವಾಗಬೇಕು ಎಂದು ಜಾದೂಗಾರ ಜೂ.ಶಂಕರ್‌ ಅವರು ಹೇಳಿದರು.ನಾರಾಯಣಮಂಗಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಎಂಟನೇ ವರ್ಷದ ಉಚಿತ ಪುಸ್ತಕ ವಿತರಣಾ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

Advertisement

ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಬೆಳೆಯುವಲ್ಲಿ ಸ್ಥಳೀಯರ ನೆರವು ಮಹತ್ವಪೂರ್ಣವಾಗಿದೆ. ವಿದ್ಯಾರ್ಥಿಗಳ ಶಾಲಾ ಶಿಕ್ಷಣದ ಜೊತೆಗೆ ಬಹುಮುಖೀ ಚಟುವಟಿಕೆಗಳನ್ನು ಅಭ್ಯಸಿಸುವ ನಿಟ್ಟಿನಲ್ಲಿ ಶಿಕ್ಷಕರು, ಪೋಷಕರು ಗಮನ ನೀಡಬೇಕೆಂದರು.

ಶಾಲಾ ವ್ಯವಸ್ಥಾಪಕ ಡಾ.ಕೆ.ವಿ.ತೇಜಸ್ವಿ ಅವರು ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತ್‌ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್‌ ಅವರು ಪುಟಾಣಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ಗಡಿನಾಡು ಕಾಸರಗೋಡಿನ ಹಿರಿಯ ತಲೆಮಾರಿನ ಪ್ರಜ್ಞಾವಂತ ಹಿರಿಯ ನಾಗರಿಕರ ದೂರದೃಷ್ಟಿಯ ಫಲವಾಗಿ ವಿವಿಧಡೆಗಳಲ್ಲಿ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಆದರೆ ಇಂದು ಶಿಕ್ಷಣ ವ್ಯವಸ್ಥೆ ವ್ಯಾಪಾರಿ ಸರಕಾಗಿ ಶಿಕ್ಷಣಕ್ಕೆ ಸವಾಲಾಗಿದೆ. ವಿದ್ಯಾದಾನವು ಇತರ ಎಲ್ಲಾ ದಾನಗಳಿಗಿಂತ ಶ್ರೇಷ್ಠವೆಂದು ಸಾರಿದ ಭಾರತೀಯ ಸಂಸ್ಕೃತಿಯ ಶಿಕ್ಷಣ ದೃಷ್ಟಿ ಅಪೂರ್ವವಾದುದು.

ಸಾಂಸ್ಕೃತಿಕ, ಸಾಹಿತ್ಯಕ ಶ್ರೀಮಂತಿಕೆಯ ಸಮಾಜವಾಗಿ ಬೆಳೆದುಬಂದಿರುವ ನಮಗೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಮೂಲಕ ಉದ್ದೇಶಿತ ಗುರಿ ತಲಪಲು ಸಾಧ್ಯವಿದೆ ಎಂದರು. ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿಯೊಂದಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಬೇಕೆಂದರು.ಕೇರಳ ತುಳು ಅಕಾಡೆಮಿ ಸದಸ್ಯ ರಾಜು ಸ್ಟೀಪನ್‌ ಡಿಸೋಜ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಉಪಸ್ಥಿತರಿದ್ದರು.ಮುಖ್ಯೋಪಾಧ್ಯಾಯಿನಿ ಮೇಬಲ್‌ ಮರೀಟ ಡಿಸೋಜ ಸ್ವಾಗತಿಸಿದರು, ಶಿಕ್ಷಕ ಸುಕೇಶರಾಮ್‌ ಡಿ. ವಂದಿಸಿದರು. ಶಾಲಾಡಳಿತ ಮಂಡಳಿ ಸದಸ್ಯ ಗೋಪಾಲಕೃಷ್ಣ ಭಟ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next