Advertisement

ಸರ್ಕಾರಿ ಯೋಜನೆ ಯಶಸ್ಸಿಗೆ ಎನ್‌ಜಿಒ ಪಾತ್ರ ಮುಖ್ಯ

05:07 PM Dec 17, 2021 | Team Udayavani |

ರಾಯಚೂರು: ಯಾವುದೇ ಸರ್ಕಾರದ ಮಹತ್ವದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಎನ್‌ ಜಿಒಗಳಿಗೆ ವಹಿಸಿದ ಜವಾಬ್ದಾರಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸಿದಲ್ಲಿ ಗುರಿ ತಲುಪಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ| ಅವಿನಾಶ್‌ ರಾಜೇಂದ್ರ ಮೆನನ್‌ ಹೇಳಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹತ್ವಾಕಾಂಕ್ಷಿ ಜಿಲ್ಲೆಗಳ ಒಕ್ಕೂಟ ಹಾಗೂ ಎನ್‌ಜಿಒ ಅಭಿವೃದ್ಧಿಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಎನ್‌ಜಿಒಸಂಸ್ಥೆಗಳು ಜನರ ಜೊತೆ ನಿರಂತರ ಸಂಪರ್ಕದಲ್ಲಿರುವ ಮೂಲಕ ಜನಪರಕೆಲಸಕಾರ್ಯಗಳನ್ನು ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಜನರಿಗೆ ಸರಿಯಾಗಿ ಮಾಹಿತಿ ಒದಗಿಸುವ ಮಹತ್ವದ ಹೊಣೆ ಸ್ವಯಂ ಸೇವಾ ಸಂಸ್ಥೆಗಳ ಮೇಲಿದೆ. ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ನೆರವು ಲಭಿಸುವಂತೆ ನೋಡಿಕೊಳ್ಳಬೇಕು ಎಂದು ಎನ್‌ಜಿಒ ಸಂಸ್ಥೆಗಳ ಮುಖ್ಯಸ್ಥರಿಗೆ ತಿಳಿಸಿದರು.

ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸೀಫ್‌ ಮಾತನಾಡಿ, ಆರೋಗ್ಯ, ಶಿಕ್ಷಣ, ಆರ್ಥಿಕ ಸಬಲೀಕರಣ, ಕೃಷಿ, ಮೂಲಸೌಕರ್ಯ ಸೇರಿದಂತೆ ವಿವಿಧ ಮಾನದಂಡಗಳ ಮೇಲೆ ಗುರುತಿಸಿದ ದೇಶದ ಹಿಂದುಳಿದ 112 ಜಿಲ್ಲೆಗಳಲ್ಲಿ ರಾಯಚೂರು ಹಾಗೂ ಯಾದಗಿರಿ ಆಯ್ಕೆಯಾಗಿವೆ. ಜಿಲ್ಲೆಯಲ್ಲಿರುವ ಸವಾಲುಗಳನ್ನು ಗುರುತಿಸಿ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ತಯಾರಿಸಿವೆ. ಅವುಗಳನ್ನು ಜನರಿಗೆ ತಲುಪಿಸಬೇಕಿದೆ ಎಂದರು.

ದೇಶದ ಅತಿ ಕಷ್ಟಕರವಾದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಪ್ರಸ್ತುತ ಸಾರ್ವಜನಿಕ ವ್ಯವಸ್ಥೆ ಬಲಪಡಿಸಲು ಎನ್‌ಜಿಒಗಳ ಪಾತ್ರ ದೊಡ್ಡದಾಗಿದೆ. ರಾಯಚೂರಿನಲ್ಲಿ ಪ್ರಥಮ ಬಾರಿಗೆ ಎನ್‌ ಜಿಒ ಅಭಿವೃದ್ಧಿ ಸಂಘಟನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪ್ರತಿಯೊಂದು ಎನ್‌ ಜಿಒಗಳು ಕಾರ್ಯಾಗಾರವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.

Advertisement

ಪಿರಾಮೆಲ್‌ ಸಂಸ್ಥೆಯ ದಕ್ಷಿಣ ಭಾರತೀಯ ನಿರ್ದೇಶಕ ಉಪೇಂದ್ರ ರಬಿಂದ್ರನ್‌, ಹಿರಿಯ ವ್ಯವಸ್ಥಾಪಕ ಶ್ರೀಕಾಂತೋ ಘೋಷ್‌, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ| ಸುರೇಂದ್ರ ಬಾಬು, ಯಾದಗಿರಿ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ| ಭಗವಂತ ಅನ್ವರ್‌ ಸೇರಿ ವಿವಿಧ ಎನ್‌ಜಿಒ ಸಂಸ್ಥೆಗಳ ಅಧಿಕಾರಿಗಳು ಕಾರ್ಯಾಗಾರದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next