ಕಲಬುರಗಿ: ದೇಶದ ಪ್ರಜಾಪ್ರಭುತ್ವ ಉಳಿಯಬೇಕಾದರೆ ಹಾಗೂ ಗಟ್ಟಿಗೊಳ್ಳಲು ಮಾಧ್ಯಮ ಪಾತ್ರವೇ ಬಹು ಮುಖ್ಯವಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮಂಗಳೂರು ಸಮಾಚಾರ ಪತ್ರಿಕೆ ಪ್ರಾರಂಭ ಮತ್ತು ಜನರಿಗೆ ತಲುಪಿದ್ದ ರೀತಿ ಅನನ್ಯ. ಅಂದಿನಿಂದ ಇಂದಿನವರೆಗೆ ಪತ್ರಿಕೆಗಳು ಬೃಹದಾಕಾರವಾಗಿ ಬೆಳೆದು ಬಂದಿವೆ. ಅದಕ್ಕೆ ಆಯಾ ಕಾಲಕ್ಕೆ ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಪತ್ರಿಕೆಗಳು ಮತ್ತು ಮಾಧ್ಯಮಗಳ ವರದಿಗಳು ಸರ್ಕಾರದ ಮೇಲೆ ನೇರ ಪರಿಣಾಮ ಬೀರುತ್ತವೆ. ಪತ್ರಿಕೆಗಳಿಗೆ ಒದಗಿಸಲಾಗಿರುವ ಮುಕ್ತ ಸ್ವಾತಂತ್ರ್ಯವನ್ನು ಸದ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಪಾಲಕರು ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಮೂಡಿಸಲು ಶ್ರಮಿಸಬೇಕು. ಶಿಕ್ಷಣದಲ್ಲಿ ಹಾಕಿದ ಬಂಡವಾಳ ಮರಳಿ ಬರುತ್ತದೆ. ಅಂದರೆ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಮಾಡುವ ಖರ್ಚು ಮುಂದೆ ಅಪಾರ ಪ್ರಮಾಣದಲ್ಲಿ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಮರಳಿ ಬರುತ್ತದೆ ಎಂದು ಹೇಳಿದರು.
ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ಜನರ ಹಣೆಬರಹ ಬರೆಯುವಲ್ಲಿ ಪತ್ರಕರ್ತರ ಪಾತ್ರವೇ ಬಹು ಮುಖ್ಯವಾಗಿದೆ. ಅಂತಹ ತಾಕತ್ತು ಪತ್ರಕರ್ತರ ಬರವಣಿಗೆಯಲ್ಲಿ ಅಡಗಿದೆ. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ಮಾದರಿ ಕಾರ್ಯವಾಗಿದೆ ಎಂದು ಹೇಳಿದರು.
Advertisement
ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಪತ್ರಕರ್ತ ಮಕ್ಕಳ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವು ಹಾಗೂ ಬೆಳವಣಿಗೆಗೆ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಪತ್ರಿಕಾರಂಗದ ಪ್ರಾಮುಖ್ಯತೆ ಇದೆ. ಪರ್ತಕರ್ತರು ಗಾಳಿ ಸುದ್ದಿಗೆ ಅವಕಾಶ ನೀಡದೇ ನೈಜ ಸುದ್ದಿಗಳನ್ನು ಸರಳೀಕರಣಗೊಳಿಸಿ ಜನರಿಗೆ ತಲುಪಿಸುವಲ್ಲಿ ಗಮನ ಕೊಡಬೇಕು ಎಂದು ಕವಿಮಾತು ಹೇಳಿದರು.
Related Articles
Advertisement
ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಯುನೈಟೆಡ್ ಆಸ್ಪತ್ರೆ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ| ವಿಕ್ರಮ ಸಿದ್ಧಾರೆಡ್ಡಿ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿದರು. ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಣಮಂತರಾವ ಭೈರಾಮಡಗಿ ಸೇರಿದಂತೆ ಮುಂತಾದವರು ವೇದಿಕೆ ಮೇಲಿದ್ದರು.
ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಅವಂಟಿ ಸ್ವಾಗತಿಸಿದರು. ಆರ್.ಜೆ ಮಂಜು, ನಾಗೇಶ್ವರಿ ಕದಂ ನಿರೂಪಿಸಿದರು. ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ದೇವೇಂದ್ರಪ್ಪ ಕಪನೂರ ವಂದಿಸಿದರು. ಸಂಘದ ಪದಾಧಿಕಾರಿಗಳಾದ ಸಂಗಮನಾಥ ರೇವತಗಾಂವ್, ಡಾ. ಶಿವರಾಮ ಅಸುಂಡಿ, ರಾಜಕುಮಾರ ಉದನೂರ ಮಕ್ಕಳ ಪ್ರತಿಭಾ ಪುರಸ್ಕಾರ, ಪತ್ರಕರ್ತರ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಪದಾಧಿಕಾರಿಗಳು, ಸದಸ್ಯರು, ಹಿರಿಯ ಪತ್ರಕರ್ತರು, ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪತ್ರಕರ್ತರ ಕಾಲೋನಿಗೆ ಬದ್ಧ: ಸಚಿವ ಖರ್ಗೆ
ಬಹಳ ದಿನಗಳಿಂದ ಸಾಕಾರಗೊಳ್ಳದೇ ಕನಸಾಗಿ ಉಳಿದಿರುವ ಪತ್ರಕರ್ತರ ಕಾಲೋನಿಗೆ ಬದ್ಧವಿರುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಪತ್ರಕರ್ತರಿಗೆ ನಿವೇಶನ ಒದಗಿಸಲು ನಗರದ ಹೊರವಲಯದ ಸಿಂದಗಿ (ಬಿ) ಗ್ರಾಮದ ಬಳಿ 20 ಎಕರೆ ಸ್ಥಳ ಗುರುತಿಸಿ ಪತ್ರಕರ್ತರ ಕಾಲೋನಿ( ಪ್ರಸ್ ಲೇಔಟ್) ನಿರ್ಮಿಸಲು ಉದ್ದೇಶಿಸಿಸಲಾಗಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಶೀಘ್ರವೇ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು. ಪತ್ರಕರ್ತರಿಗೆ ಹೇಗೆ ಹಾಗೂ ಯಾವ ನಿಟ್ಟಿನಲ್ಲಿ ನಿವೇಶನ ಹಂಚಬೇಕು ಎಂಬುದನ್ನು ಪತ್ರಕರ್ತ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲರಿಗೂ ಅನುಕೂಲವಾಗುವ ಹಾಗೆ ಕಾರ್ಯಸೂಚಿ ರೂಪಿಸಲಾಗುವುದು ಎಂದು ಹೇಳಿದರು. ಪ್ರತಿಕಾ ಭವನವನ್ನು ಮರಳಿ ಪತ್ರಕರ್ತರ ಸಂಘದ ಸುಪರ್ದಿಗೆ ವಹಿಸುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಬಹು ಮುಖ್ಯವಾಗಿ ಜತೆಗೆ ಧೀಮಂತ ಪತ್ರಕರ್ತ ದಿ| ವಿ.ಎನ್. ಕಾಗಲ್ಕರ್ ಅವರ ಹೆಸರಲ್ಲಿ ಸರ್ಕಾರದ ವತಿಯಿಂದ ಪ್ರಶಸ್ತಿ ನೀಡಲು ಸಂಬಂಧಪಟ್ಟವರ ಮೇಲೆ ಒತ್ತಡ ಹಾಕಲಾಗುವುದು. ಈ ಕುರಿತು ಸಂಘ ತಮಗೆ ಮನವಿ ಪತ್ರವೊಂದನ್ನು ಸಲ್ಲಿಸಬೇಕು ಎಂದು ಹೇಳಿದರು.