ಮಹಾನಗರ: ಬಂದರು, ವಿಮಾನ ನಿಲ್ದಾಣ, ರೈಲ್ವೇ, ರಸ್ತೆ ಸಾರಿಗೆ ಈ ನಾಲ್ಕೂ ವ್ಯವಸ್ಥೆಗಳನ್ನು ಹೊಂದಿರುವ ಕೆಲವೇ ನಗರಗಳ ಪೈಕಿ ಮಂಗಳೂರು ಗುರುತಿಸಿಕೊಂಡಿದೆ. ಶುಚಿತ್ವ, ನೈರ್ಮಲ್ಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ನಗರಕ್ಕೆ ಸಾಮರಸ್ಯದ ಇತಿಹಾಸವೂ ಇದೆ. ಇಲ್ಲಿಯ ಬ್ರ್ಯಾಂಡ್ ಹೆಸರು ಉಳಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ತರವಾದುದು ಎಂಬ ಅಭಿಪ್ರಾಯ ದ.ಕ. ಜಿಲ್ಲಾ ಪತ್ರಕರ್ತರ ಸಮ್ಮೇಳನದಲ್ಲಿ ಕೇಳಿಬಂತು.
ನಗರದ ಪುರಭವನದಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡ ದ.ಕ. ಜಿಲ್ಲಾ ಪತ್ರಕರ್ತರ ಸಮ್ಮೇಳನದಲ್ಲಿ ‘ಬ್ರ್ಯಾಂಡ್ ಮಂಗಳೂರು’ ಕುರಿತಾಗಿ ವಿವಿಧ ಮಾಧ್ಯಮಗಳ ಮುಖ್ಯ ಸ್ಥರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮೂರು ದಶಕಗಳಲ್ಲಿ ನಗರ ಸಾಕಷ್ಟು ಬದಲಾವಣೆ ಕಂಡಿದ್ದು, ಔದ್ಯೋಗಿಕ, ಶಿಕ್ಷಣ, ವಾಣಿಜ್ಯ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಆದರೆ ಕೆಲವು ಘಟನೆಗಳ ವೈಭವೀಕರಣದಿಂದ ಹೊರ ಜಗತ್ತಿನಲ್ಲಿ ಮಂಗಳೂರಿನ ಹೆಸರಿಗೆ ಧಕ್ಕೆಯಾಗುತ್ತಿದೆ. ಸಾಮರಸ್ಯದ ಇತಿಹಾಸ ಇರುವ ನಗರದ ಹೆಸರು ಕೆಡಿಸದೆ, ಬ್ರ್ಯಾಂಡ್ ಮಂಗಳೂರನ್ನು ಉಳಿಸಲು ಮಾಧ್ಯಮಗಳ ಮುಖ್ಯಸ್ಥರು ಪ್ರಮುಖ ಪಾತ್ರ ವಹಿಸಬೇಕು ಎಂಬ ಅಭಿಪ್ರಾಯ ಬ್ರ್ಯಾಂಡ್ ಮಂಗಳೂರು ಸಂವಾದದಲ್ಲಿ ವ್ಯಕ್ತವಾಯಿತು.
ಸಮ್ಮೇಳನಾಧ್ಯಕ್ಷ ಹಿರಿಯ ಪತ್ರಕರ್ತ ಈಶ್ವರ ದೈತೋಟ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ವಿವಿಧ ಮಾಧ್ಯಮಗಳ ಪ್ರಮುಖರು, ಹಿರಿಯ ಪತ್ರಕರ್ತರಾದ ಡಾ| ಯು. ಪಿ. ಶಿವಾನಂದ, ಅಬ್ದುಸ್ಸಲಾಂ ಪುತ್ತಿಗೆ, ಯು.ಕೆ. ಕುಮಾರ್‌ನಾಥ್, ಸುರೇಶ್ ಪುದುವೆಟ್ಟು ವಿಚಾರ ಮಂಡಿಸಿದರು.
ಹಿರಿಯ ಪತ್ರಕರ್ತರಾದ ರಾಮಕೃಷ್ಣ ಆರ್., ಹರ್ಷ, ಜಿತೇಂದ್ರ ಕುಂದೇಶ್ವರ, ಕೆ.ಯು. ಜಾರ್ಜ್, ಲೀಲಾಕ್ಷ ಕರ್ಕೇರ, ಲಕ್ಷ್ಮ ಣ್ ಕುಂದರ್ ಉಪಸ್ಥಿತರಿದ್ದರು. ಗೋಷ್ಠಿ ಬಳಿಕ ಪ್ರಶ್ನೋತ್ತರ ನಡೆಯಿತು. ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಿಜಯ್ ಕೋಟ್ಯಾನ್ ಸ್ವಾಗತಿಸಿದರು. ಪುಷ್ಪರಾಜ್ ವಿಚಾರ ಮಂಡಿಸಿದರು. ಹಿಲರಿ ಕ್ರಾಸ್ತಾ ವಂದಿಸಿದರು. ಮಾಜಿ ಅಧ್ಯಕ್ಷ ಬಿ. ರವೀಂದ್ರ ಶೆಟ್ಟಿ ನಿರೂಪಿಸಿದರು.
ಸಮ್ಮೇಳನಕ್ಕೆ ಜಿಲ್ಲೆಯ ವಿವಿಧ ಕಾಲೇಜು ಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪಾಲ್ಗೊಂಡರು. ಸುಮಾರು 500ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಭಾಗವಹಿಸಿರುವುದು ವಿಶೇಷವಾಗಿತ್ತು.
ಪತ್ರಿಕಾ ರಂಗದಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಉದಯವಾಣಿ ಮಂಗಳೂರು ಸುದ್ದಿ ವಿಭಾಗ ಮುಖ್ಯಸ್ಥ ಮನೋಹರಪ್ರಸಾದ್, ಉಪ ಮುಖ್ಯ ವರದಿಗಾರ ಹಿಲರಿ ಕ್ರಾಸ್ತಾ, ಹಿರಿಯ ವರದಿಗಾರ ಕೇಶವ ಕುಂದರ್, ಹಿರಿಯ ಪತ್ರಕರ್ತರಾದ ಗಂಗಾಧರ ಮಟ್ಟಿ, ಚಿದಂಬರ ಬೈಕಂಪಾಡಿ, ಮಲಾರ್ ಜಯರಾಂ ರೈ ಸಹಿತ ಮೂವತ್ತು ಮಂದಿಯನ್ನು ಸಮ್ಮಾನಿಸಲಾಯಿತು.