Advertisement

ತಾರಾ ಮನದ ಮಾತು

06:00 AM Aug 17, 2018 | |

ಸಾವಿತ್ರಿಬಾಯಿ ಫ‌ುಲೆ
– ಇವರು ದೇಶದ ಮೊದಲ ಶಿಕ್ಷಕಿ. ಅಷ್ಟೇ ಅಲ್ಲ, ದಮನಿತರ ಪರ ಮೊದಲ ಧ್ವನಿಯಾದವರು.  ಮೊದಲ ಮಹಿಳಾ ಹೋರಾಟಗಾತಿಯೂ ಹೌದು. ಇವರ ಬದುಕಿನ ಮೌಲ್ಯ, ಸಾಮಾಜಿಕ ಹೋರಾಟ ಕುರಿತು ನಿರ್ದೇಶಕ ವಿಶಾಲ್‌ ರಾಜ್‌, “ಸಾವಿತ್ರಿಬಾಯಿ ಫ‌ುಲೆ’ ಹೆಸರಿನ ಚಿತ್ರ ಮಾಡಿದ್ದಾರೆ. ಇತ್ತೀಚೆಗೆ ಪ್ರದರ್ಶನ ಏರ್ಪಡಿಸಿದ್ದ ವಿಶಾಲ್‌ ರಾಜ್‌, ತಂಡದೊಂದಿಗೆ ಮಾತುಕತೆ ನಡೆಸಿದರು.

Advertisement

“ಈ ರೀತಿಯ ಚಿತ್ರ ಮಾಡುವಾಗ ದೊಡ್ಡ ಸವಾಲುಗಳು ಎದುರಾಗುತ್ತವೆ. ನನಗೆ ಎದುರಾಗಿದ್ದು, ಮೊದಲು ಈಗಿನ ಕಲರ್‌ಫ‌ುಲ್‌ ಜಗತ್ತಿನಲ್ಲಿ, ಆ ಕಾಲಘಟ್ಟದ ಚಿತ್ರವನ್ನು ಕಟ್ಟಿಕೊಡಬೇಕಾಗಿದ್ದು. ಆಗಿದ್ದ ತಾಣ, ಕಾಸ್ಟೂಮ್ಸ್‌, ಪರಿಕರ, ಪಾತ್ರ ಎಲ್ಲವನ್ನೂ ನೈಜ ಎಂಬಂತೆ ಬಿಂಬಿಸಬೇಕಿತ್ತು. ಇಂತಹ ಚಿತ್ರಕ್ಕೆ ಕೈ ಹಾಕಿದಾಗ ನಿರ್ಮಾಪಕರು ಹಿಂದೆ ಮುಂದೆ ನೋಡಲಿಲ್ಲ. ಧೈರ್ಯವಾಗಿ ಮಾಡೋಣ ಅಂತ ಒಪ್ಪಿದರು. ಡಾ.ಸರಜೂ ಕಾಟ್ಕರ್‌ ಅವರ ಕಾದಂಬರಿ ಇಟ್ಟುಕೊಂಡು ಸಿನಿಮಾ ಮಾಡಿದೆ. ಇನ್ನು, ಜ್ಯೋತಿಬಾ ಫ‌ುಲೆ ಅಂದಾಗ ಕಣ್ಣೆದುರಿಗೆ ಬಂದದ್ದು ಸುಚೇಂದ್ರ ಪ್ರಸಾದ್‌. ಆ ಪಾತ್ರಕ್ಕೆ ಅವರು ಓಕೆಯಾದರು. ಆದರೆ, ನಾನು ಮಾಡುತ್ತಿರುವುದು ಸಾವಿತ್ರಿಬಾಯಿ ಫ‌ುಲೆ ಚಿತ್ರ. ಆ ಪಾತ್ರವನ್ನು ತೂಗಿಸಿಕೊಂಡು ಹೋಗುವ ನಟಿ ಬೇಕಿತ್ತು. ಕಣ್ಣಿಗೆ ಕಂಡದ್ದೇ ತಾರಾ ಮೇಡಮ್‌. ಅವರಿಗೆ ಕಥೆ ವಿವರಿಸಿದೆ, ಕಾಟ್ಕರ್‌ ಕಥೆಯನ್ನೂ ಓದಿದರು. ಆಮೇಲೆ ಇದು ನಾರ್ಮಲ್‌ ಪಾತ್ರವಲ್ಲ. ಕಷ್ಟ ಅಂದರು. ಮರುದಿನ ಅವರೇ ಕರೆದು, ಮಾಡೋಣ ಅಂದರು. ಈಗ ಸಿನಿಮಾ ಅಂದುಕೊಂಡಿದ್ದಕ್ಕಿಂತಲೂ ಸೊಗಸಾಗಿ ಬಂದಿದೆ. ಒಳ್ಳೆಯ ಮೆಚ್ಚುಗೆ ಪಡೆದಿದೆ. ಅದಕ್ಕೆ ತನ್ನ ತಂಡ ಕಾರಣ’ ಅಂದರು ವಿಶಾಲ್‌ರಾಜ್‌.

ಸುಚೇಂದ್ರ ಪ್ರಸಾದ್‌ಗೆ ಈ ಚಿತ್ರ ಮಾಡುವಾಗ, ಆ ಶತಮಾನದ ದಶಕಗಳ ಕಲ್ಪನೆ ಕಣ್ಮುಂದೆ ಬಂತಂತೆ. “ಈ ಚಿತ್ರ ಅನೇಕ ಪ್ರಶ್ನೆಗಳಿಗೆ ಉತ್ತರವಾಗುತ್ತೆ. ಇಲ್ಲಿ ಎಲ್ಲರ ಶ್ರಮ ಎದ್ದು ಕಾಣುತ್ತದೆ. ಚಿತ್ರ ನೋಡಿದ ಪ್ರತಿಯೊಬ್ಬರೂ ಪ್ರೀತಿಗೆ ಬೀಳುತ್ತಾರೆ. ಅಂತಹ ಅಂಶಗಳು ತುಂಬಿವೆ. ಸಮಾಜಕ್ಕೊಂದು ಸಂದೇಶ ಸಾರುವ ಸಿನಿಮಾ ಇದಾಗಿರುವುದರಿಂದ ಎಲ್ಲರಿಗೂ ತಲುಪುವ ಕೆಲಸವಾಗಬೇಕು’ ಎಂದರು ಸುಚೇಂದ್ರ ಪ್ರಸಾದ್‌.

ತಾರಾ ಅವರಿಗೆ ಈ ಚಿತ್ರ ಸಿಕ್ಕಿದ್ದು, ಸುಚೇಂದ್ರ ಪ್ರಸಾದ್‌ ಅವರಿಂದವಂತೆ. “ನಾವಿಬ್ಬರು “ಭರ್ಜರಿ’ ಚಿತ್ರದಲ್ಲಿ ಒಟ್ಟಿಗೆ ನಟಿಸುವಾಗ, ಈ ಕಥೆ ಕುರಿತು ಚರ್ಚೆ ಮಾಡಿದ್ದೆವು. ಅದನ್ನು ಸಾಕಾರಗೊಳಿಸಿದ್ದು ವಿಶಾಲ್‌ ರಾಜ್‌. ಅದಕ್ಕೆ ಬೆಂಬಲವಾಗಿದ್ದು ನಿರ್ಮಾಪಕರು. ನಿಜ ಹೇಳುವುದಾದರೆ ನಾನು ಈ ಪಾತ್ರ ಮಾಡಲು ಪುಣ್ಯ ಮಾಡಿದ್ದೆ. ನಾವು ನೋಡದೇ ಇರುವ ಪಾತ್ರ ನಿರ್ವಹಿಸುವುದು ಕಷ್ಟ. ಡಾ.ಸರಜೂ ಕಾಟ್ಕರ್‌ ಕಾದಂಬರಿ ಓದಿದಾಗ, ಎಲ್ಲವೂ ಅರ್ಥವಾಯ್ತು. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಸಿನಿಮಾ ಬಂದಿದೆ. ಚಿತ್ರದ ಪಾತ್ರಕ್ಕಾಗಿ ಪುಣೆವರೆಗೂ ಹೋಗಿ ಬಂದಿದ್ದೇನೆ. ಇದು ಕಾಂಟ್ರವರ್ಷಿಯಲ್‌ ಸಬ್ಜೆಕ್ಟ್. ಜಾತಿ, ಧರ್ಮದ ನಡುವಿನ ಹೋರಾಟವಿದೆ. ಅದರಲ್ಲೂ ಒಂದು ಸತ್ವ ಇದೆ ಎಂಬುದೇ ಹೈಲೆಟ್‌’ ಅಂದರು ತಾರಾ. ನಿರ್ಮಾಪಕ ಬಸವರಾಜ್‌ ಭೂತಾಳಿ ಅವರು ಮೂಲ ರೈತ ಕುಟುಂಬದವರು. ನಾಟಕ ಆಸಕ್ತಿ ಇಟ್ಟುಕೊಂಡಿದ್ದ ಅವರು, ಕಾಟ್ಕರ್‌ ಕಥೆ ಓದಿ, ಸಿನಿಮಾ ಮಾಡುವ ಮನಸ್ಸು ಮಾಡಿದ್ದಾಗಿ ಹೇಳಿಕೊಂಡರು. ಚಿತ್ರಕ್ಕೆ ನಾಗರಾಜ್‌ ಆದವಾನಿ ಛಾಯಾಗ್ರಹಣವಿದೆ. ಸಂಗೀತ ಕಟ್ಟಿ ಕುಲಕರ್ಣಿ ಸಂಗೀತ ನೀಡಿದ್ದಾರೆ. ಕೆಂಪರಾಜು ಸಂಕಲನ ಮಾಡಿದ್ದಾರೆ. ಶಿರೀಷ್‌ ಜೋಶಿ ಸಂಭಾಷಣೆ ಬರೆದಿದ್ದಾರೆ.

ವಿಜಯ್‌ ಭರಮಸಾಗರ

Advertisement
Advertisement

Udayavani is now on Telegram. Click here to join our channel and stay updated with the latest news.

Next