ಗುಂಡ್ಲುಪೇಟೆ: ಕಾಡಿನ ರಕ್ಷಣೆಯಲ್ಲಿ ಆದಿವಾಸಿಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಎಸ್‌ಪಿ ಎಚ್.ಡಿ.ಆನಂದ್ ಕುಮಾರ್ ಹೇಳಿದರು. ತಾಲೂಕಿನ ಮೇಲುಕಾಮನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆದಿವಾಸಿಗಳ ಒಕ್ಕೂಟ, ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಬೆಂಕಿಯಿಂದ ಕಾಡನ್ನು ರಕ್ಷಿಸಿ, ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಕಾಡಂಚಿನಲ್ಲಿ ಉತ್ತಮ ಮತ್ತು ಸುಖಕರ ಬದುಕು ನಡೆಸಲು ವಾತಾವರಣ ಕಾರಣ. ಬೆಂಗಳೂರಿನಲ್ಲಿ ಹೊಗೆ ಇತರೆ ಪರಿಸ್ಥಿತಿಗಳಿಗೆ ಹೋಲಿಕೆ ಮಾಡಿದಲ್ಲಿ ನೀವೇ ಅದೃಷ್ಟವಂತರು ಎಂದರು.
ಉನ್ನತ ಹುದ್ದೆಯಲ್ಲಿದ್ದರೂ ಕಾಡು ರಕ್ಷಣೆಗೆ ಸಿದ್ಧ: ಕಾಡು ರಕ್ಷಣೆಯಲ್ಲಿ ಆದಿವಾಸಿಗಳು ಬಹುಮುಖ್ಯವಾಗುತ್ತಾರೆ. ನಿಮಗೆ ಇರುವ ಅರಿವು, ರೀತಿ, ನಡವಳಿಕೆ, ಬೆಂಕಿಯಿಂದ ಕಾಡನ್ನು ರಕ್ಷಿಸುವ ರೀತಿ, ಪ್ರಾಣಿಗಳ ಸ್ಪಂದನೆ ಬಗೆಗಿನ ಜ್ಞಾನ ಬೇರೆಯವರಿಗೆ ಇಲ್ಲ. ಕಾಡೇ ದೇವರು ಎಂದು ಪೂಜಿಸುವ ಜತೆಗೆ ಉನ್ನತ ಹುದ್ದೆ ಅಥವಾ ಸರ್ಕಾರಿ ನೌಕರಿಯಲ್ಲಿದ್ದರೂ ಕಾಡಿನ ರಕ್ಷಣೆ ನಿಲ್ಲುವ ರೀತಿ ಅನನ್ಯ. ಆದಿವಾಸಿಗಳು ವಿದ್ಯಾವಂತರಾಗಿ ಮತ್ತು ಅರಣ್ಯದ ಬಗ್ಗೆ ಎಲ್ಲರಿಗೂ ತಿಳುವಳಿಕೆ ನೀಡಿ. ಕಾಡಿನ ರಕ್ಷಣೆ ಕಾರಣಕ್ಕೆ ನಿಮ್ಮ ಅಗತ್ಯ ನಮಗಿದೆ ಸಹಕರಿಸಿ ಎಂದರು.
ಪರಿಸರ ಉಳಿಸುವುದು ಅನಿವಾರ್ಯ: ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ ಮಾತನಾಡಿ, ಕಾಡಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಕಾಡಿನಿಂದ ನಾಡು ಎಂಬುದನ್ನು ಅರಿತು ಅರಣ್ಯ ಹಾಗೂ ಪರಿಸರವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಕಳೆದ ವರ್ಷ ಕಿಡಿಗೇಡಿಗಳ ಬೆಂಕಿಗೆ ಕಾಡು ನಾಶವಾಯಿತು. ಈ ಬಾರಿ ಕಾಡನ್ನು ಬೆಂಕಿಯಿಂದ ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಇದನ್ನು ಅರಿತು ಕಾಡಂಚಿನ ಜನತೆ ಅರಣ್ಯ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇಲಾಖೆ ನಮಗೆ ದಾರಿದೀಪ: ಆದಿವಾಸಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪುಟ್ಟಮ್ಮ ಮಾತನಾಡಿ, ಹೊಸ ವರ್ಷದಂದು ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾಡಿನ ಮಕ್ಕಳಾದ ನಾವು ಅರಣ್ಯ ರಕ್ಷಣೆಗೆ ಪ್ರತಿಜ್ಞೆ ಮಾಡಿದೆವು. ಸರ್ಕಾರದ 48 ಇಲಾಖೆಗಳಲ್ಲಿ ಅರಣ್ಯ ಇಲಾಖೆ ಮಾತ್ರ ನಮ್ಮವರಿಗೆ ಉದ್ಯೋಗ ಕೊಟ್ಟಿದೆ. ಮಹಿಳೆಯರು ಇಲಾಖೆಯಲ್ಲಿ ದುಡಿಯುತ್ತಾರೆ. ಇಲಾಖೆ ನಮಗೆ ದಾರಿದೀಪವಾಗಿದೆ. ಇನ್ನೂ ಹಲವು ಕಾರಣಗಳಿಗೆ ಕಾಡು ಮತ್ತು ನಮ್ಮ ನಡುವೆ ಅವಿನಾಭಾವ ಸಂಬಂಧವಿದೆ. ಈಗಾಗಿ ಕಾಡು ರಕ್ಷಣೆಗೆ ನಾವು ಸದಾ ಸಿದ್ಧ ಎಂದರು.
ಪ್ರತಿಜ್ಞಾವಿಧಿ ಬೋಧನೆ: ನಾವು ಕಾಡಿಗೆ ಬೆಂಕಿ ಹಾಕುವುದಿಲ್ಲ, ಹಾಕಲು ಇತರರನ್ನು ಬಿಡುವುದಿಲ್ಲ. ಅಲ್ಲದೆ, ಈ ಬಗ್ಗೆ ಸುತ್ತಲಿನ ಗ್ರಾಮಗಳ ಜನರಲ್ಲಿ ಅರಿವು ಮೂಡಿಸಿ, ಅರಣ್ಯವನ್ನು ಬೆಂಕಿಯಿಂದ ರಕ್ಷಿಸುತ್ತೇವೆ ಎಂದು ಪ್ರತಿಜ್ಞಾ ವಿಧಿಯನ್ನು ಭೋಧಿಸುವುದರೊಂದಿಗೆ ಆದಿವಾಸಿಗಳಲ್ಲಿ ಕಾಡಿನ ಬಗ್ಗೆ ಮಮತೆಯನ್ನು ಮೂಡಿಸಿ ಅವರಿಂದ ಪ್ರತಿಜ್ಞೆ ಮಾಡಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯೆ ನಾಗಮ್ಮ, ಗಿರಿಜನ ಮುಖಂಡರಾದ ಕುನ್ನಮರೀಗೌಡ, ಮಾಧು, ಚೆಲುವರಾಜು, ನಕ್ಸಲ್ ನಿಗ್ರಹದಳದ ಡಿವೈಎಸ್‌ಪಿ ಪ್ರಸನ್ನ ಕುಮಾರ್, ಎಸಿಎಫ್ ರವಿಕುಮಾರ್, ಆರ್‌ಎಫ್ಒ ನವೀನ್ ಕುಮಾರ್, ಪಿಎಸ್‌ಐ ಡಿ.ಕೆ.ಲತೇಶ್ ಕುಮಾರ್, ನಕ್ಸಲ್ ನಿಗ್ರಹದಳದ ವಿಶೇಷ ಪೇದೆ ನಾಗರಾಜು(ಸಿಂಗಂ), ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲ ವಿಲಾಸ್, ವಿಜಯಕುಮಾರ್, ವಾರ್ಡನ್ ಸಿದ್ದರಾಜು, ಜೀವಿಕ ಸಂಘಟನೆಯ ಜಿ.ಕೆ.ಕುನ್ನಹೊಳಿಯಯ್ಯ, ಗಿರಿಜನ ಮುಖಂಡರಾದ ಸುರೇಶ್, ಜಯಮ್ಮ, ಬಸಮ್ಮ ಹಾಜರಿದ್ದರು.