ಇನೋಳಿ: ಮಾನವನ ಆರೋಗ್ಯವನ್ನು ಕಾಪಾಡುವಲ್ಲಿ ಆಹಾರದ ಪಾತ್ರ ಮುಖ್ಯವಾಗಿದೆ. ಸುಸ್ಥಿರ ಕೃಷಿಯಿಂದ ಮಣ್ಣಿನ ಫಲವತ್ತತೆ ಹಾಗೂ ಆಹಾರದಲ್ಲಿ ಪೌಷ್ಠಿಕಾಂಶ ಹೆಚ್ಚಳವಾಗುತ್ತದೆ ಎಂದು ಮೈಸೂರಿನ ಸಿಎಫ್‌ಟಿಆರ್‌ಐನ ಮುಖ್ಯ ವಿಜ್ಞಾನಿ ಹಾಗೂ ನಿರ್ದೇಶಕ ಡಾ. ಅಲೋಕ್ ಕುಮಾರ್ ಶ್ರೀವಾತ್ಸವ ಹೇಳಿದರು.
ಬ್ಯಾರೀಸ್ ಗ್ರೂಪ್ ಸಂಸ್ಥಾಪಿತ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಆಶ್ರಯದಲ್ಲಿ ಇನೋಳಿಯ ಬ್ಯಾರೀಸ್ ನಾಲೇಜ್ ಕ್ಯಾಂಪಸ್‌ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ “ಸುಸ್ಥಿರ ನಗರಾಭಿವೃದ್ಧಿ, ಸಂಪನ್ಮೂಲ ಸಂರಕ್ಷಣೆ ಮತ್ತು ಆಹಾರ ಭದ್ರತೆ ಬಗ್ಗೆ ಸರ್ಫ್’ 2019 ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ, ಅವರು ಆಹಾರ ಭದ್ರತೆಯ ಬಗ್ಗೆ ಮಾತನಾಡಿದರು.
ಪ್ರಪಂಚದ ಒಟ್ಟು ಜನಸಂಖ್ಯೆಯ ಶೇ. 18.7 ಹೊಂದಿರುವ ಭಾರತ ಒಟ್ಟು ಭೂ ಭಾಗದಲ್ಲಿ ಶೇ. 2.7 ಮಾತ್ರ ಹೊಂದಿದೆ. ಸ್ವಾತಂತ್ರ್ಯ ನಂತರ ದೇಶದಲ್ಲಿ ಹಸಿರು(ಕೃಷಿ), ನೀಲಿ (ಮೀನು ಉತ್ಪಾದನೆ), ಬಿಳಿ (ಹಾಲು) ಕ್ರಾಂತಿಗಳ ಮೂಲಕ ಆಹಾರ ಉತ್ಪಾದನೆಯಲ್ಲಿ ಭಾರೀ ಪ್ರಗತಿ ಸಾಧಿಸಲಾಯಿತು. ಆದರೆ ಸಾಕಷ್ಟು ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆಗೆ ಹಾನಿಯಾಯಿತು. ಅದು ನಮ್ಮಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೂ ಕಾರಣ ವಾಗಿದೆ. ಆ ಹಿನ್ನೆಲೆಯಲ್ಲಿ ಸುಸ್ಥಿರ ಕೃಷಿಗೆ ಹೆಚ್ಚಿನ ಗಮನಹರಿಬೇಕಾಗಿದೆ ಎಂದರು.
ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಯ್ಯದ್ ಮಹಮ್ಮದ್ ಬ್ಯಾರಿ ಮಾತನಾಡಿ ದೇವರು ಜಗತ್ತನ್ನು ಸೃಷ್ಟಿಸುವಾಗಲೇ ಎಲ್ಲವನ್ನು ಕರುಣಿಸಿದ್ದರೂ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರ ಹಾಳುಮಾಡುತ್ತಿದ್ದು ಅದಕ್ಕೆ ಕಡಿವಾಣ ಹಾಕದೆ ಹಾಗೆಯೇ ಮುಂದುವರಿದರೆ ಹವಾನಿಯಂತ್ರಿತ ನಗರ ಖ್ಯಾತಿಯ ಬೆಂಗಳೂರು ಸಹಿತ ಪ್ರಮುಖ ನಗರಗಳ ಜನರು ಬೇಸಗೆಯಲ್ಲಿ ಇತರ ಕಡೆ ವಲಸೆ ಹೋಗುವ ಅನಿವಾರ್ಯತೆ ಸದ್ಯದಲ್ಲಿಯೇ ಎದುರಾಗುವ ಆತಂಕ ಇದೆ ಎಂದರು.
ಮಲೇಷ್ಯಾ ಐಐಯುಎಂನ ಪ್ರಾಧ್ಯಾಪಕ ಡಾಣ ಎಸ್.ಎ. ಖಾನ್, ಮುಂಬಯಿಯ ಪರಿಸರ ಪ್ರೇಮಿ, ಲೇಖಕ ಭರತ್ ಮನ್ಸಟ, ಹಾರ್ವರ್ಡ್ ವಿಶ್ವವಿದ್ಯಾಲಯದ ಎಕೋಲಾಜಿಕಲ್ ಆರ್ಕಿಟೆಕ್ಟ್ ದೀಪಾ ವೇದವ್ಯಾಸ, ಮಧುರೈಯ ಕೃಷಿ ಉದ್ಯಮಿ ಅಮರ್‌ನಾದ್ ಅಡುಸುಮಾಲಿ, ಬೀಡ್ಸ್ ಪ್ರಾಂಶುಪಾಲ ಅಶೋಕ್ ಎಲ್.ಪಿ. ಮೆಂಡೋನ್ಸ, ಬಿಐಟಿ ಪಾಲಿಟೆಕ್ನಿಕ್ ನಿರ್ದೇಶಕ ಡಾಣ ಅಝೀಝ್ ಮುಸ್ತಫಾ, ಟ್ರಸ್ಟಿ ಮಝರ್ ಬ್ಯಾರಿ ಹಾಗೂ ಉದ್ಯಮಿ ಅಕ್ರಂ ಸೈಯದ್ ಉಪಸ್ಥಿತರಿದ್ದರು.
ಬಿಐಟಿ ಪ್ರಾಂಶುಪಾಲ ಡಾ. ಪಿ. ಮಹಾಬಲೇಶ್ವರಪ್ಪ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಡಾಣ ಮುಸ್ತಫಾ ಬಸ್ತಿಕೋಡಿ ವಂದಿಸಿದರು.