ಸುರಪುರ: ತಂದೆ, ತಾಯಿ ಎರಡು ಕಣ್ಣು ಇದ್ದಂತೆ. ಇವರಿಗೆ ಸಮಾನವಾದ ವ್ಯಕ್ತಿ ವಿಶ್ವದಲ್ಲಿಯೇ ಇಲ್ಲಾ. ಯಾರು ಎಷ್ಟೆ ಎತ್ತರಕ್ಕೆ ಬೆಳೆಯಲಿ ಸಾಧನೆಯ ಉತ್ತುಂಗದ ಶಿಖರವೇರಲಿ. ಅದರ ಹಿಂದೆ ತಂದೆ, ತಾಯಿ ಪಾತ್ರ ದೊಡ್ಡದಾಗಿರುತ್ತದೆ ಎಂದು ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ನಾಟಕಕಾರ ಎಲ್‌ಬಿಕೆ ಆಲ್ದಾಳ ಅಭಿಪ್ರಾಯಪಟ್ಟರು ತಾಲೂಕಿನ ರುಕ್ಮಾಪುರ ಗ್ರಾಮದಲ್ಲಿ ಗಂಗಮ್ಮ ಬಣಗಾರ ಟ್ರಸ್ಟ್ ವತಿಯಿಂದ ನಿವೃತ್ತ ಎಸ್ಪಿ ಚಂದ್ರಕಾಂತ ಭಂಡಾರೆಯವರಿಗೆ ಏರ್ಪಡಿಸಿದ್ದ ಮಾತೋಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ತಂದೆ, ತಾಯಿ ಹೆಸರಲ್ಲಿ ಬಹುತೇಕರು ಪ್ರಶಸ್ತಿಗಳನ್ನು ವಿತರಿಸುತ್ತಾರೆ.
ಇದರಿಂದ ಯಾವುದೇ ಲಾಭವಿಲ್ಲ. ಸತ್ತ ಎಮ್ಮೆಗೆ ಸೇರು ತುಪ್ಪ ಎನ್ನುವಂತೆ ಸತ್ತ ಮೇಲೆ ನಾವೇನು ಕೊಟ್ಟರು ಪ್ರಯೋಜನವಿಲ್ಲ. ಏನಾದರು ಮಾಡುವುದಿದ್ದರೆ, ಕೊಡುವುದಾಗಿದ್ದರೆ ಅದು ಜೀವಂತ ಇರುವಾಗಲೇ ಮಾಡಬೇಕು ತಂದೆ. ತಾಯಿ ಕಣ್ತುಂಬ ನೋಡಿ ಸಂತೋಷ ಪಡುತ್ತಾರೆ. ತಾಯಿ ಜೀವಂತ ಇರುವಾಗಲೇ ಬಣಗಾರ ಕುಟುಂಬದವರು ತಾಯಿ ಹೆಸರಲ್ಲಿ ಟ್ರಸ್ಟ್ ಮೂಲಕ ಪ್ರಶಸ್ತಿ ಕೊಡುತ್ತಿರುವ ಸಂಪ್ರದಾಯ ಪ್ರಶಂಸನಾರ್ಹ ಎಂದು ಹರ್ಷ ವ್ಯಕ್ತಪಡಿಸಿದರು.
ಹಾಸ್ಯ ಕಲಾವಿದ ಬಸವರಾಜ ಮಾಮನಿ ಮಾತನಾಡಿ, ಅಪ್ಪ ಅಂದರೆ ಆಕಾಶ, ಅವ್ವ ಅಂದ್ರೆ ಭೂಮಿ. ಇವರಿಬ್ಬರಿಗೂ ಮಿಗಿಲಾದವರು ಇಲ್ಲವೇ ಇಲ್ಲಾ. ಕರುಳು ಬಳ್ಳಿಯ ಸಂಬಂಧಗಳು ಸೃಷ್ಟಿಯಾಗುವುದೇ ಇವರಿಬ್ಬರಿಂದ ಅಪ್ಪ, ಅವ್ವಾ ಎರಡಕ್ಷರಗಳಲ್ಲಿ ಇರುವ ಆನಂದ ಮಮ್ಮಿ, ಡ್ಯಾಡಿ ಶಬ್ದಗಳಲ್ಲಿ ಇಲ್ಲ. ಆದ್ದರಿಂದ ಪಾಲಕ, ಪೋಷಕರು ಮಕ್ಕಳಿಗೆ ಅಪ್ಪ, ಅವ್ವ ಸಂಸ್ಕೃತಿ ಕಲಿಸಿಕೊಡಬೇಕು. ಇಂಗ್ಲಿಷ್ ವ್ಯಾಮೋದಲ್ಲಿ ಬಿದ್ದು ನಮ್ಮ ಮಕ್ಕಳು ಮಕ್ಕಳಾಗಿ ಉಳಿಯುವುದಿಲ್ಲ. ಆದ್ದರಿಂದ ದಯವಿಟ್ಟು ಮಕ್ಕಳಿಗೆ ಬಾಲ್ಯದಿಂದಲೇ ಸಾಹಿತ್ಯ, ಸಂಸ್ಕೃತಿ ಕಲಿಸಿಕೊಡಿ ಎಂದು ಮನವಿ ಮಾಡಿದರು.
ಪ್ರಶಸ್ತಿ ಸ್ವೀಕರಿಸಿದ ನಿವೃತ್ತ ಎಸ್ಪಿ ಚಂದ್ರಕಾಥ ಭಂಡಾರೆ ಮಾತನಾಡಿ, ಹೆತ್ತವರ, ನೆರಹೊರೆಯವರ, ಸಮಾಜ, ಗ್ರಾಮ ಮತ್ತು ವಿದ್ಯೆ ನೀಡಿದ ಗುರು. ಈ ಐದು ಋಣಗಳು ಪ್ರತಿಯೊಬ್ಬರ ಮೇಲೆ ಇದ್ದೆ ಇರುತ್ತವೆ. ನಾನು ಸಾಧ್ಯವಾದಷ್ಟು ಇವುಗಳನು ತೀರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಬಣಗಾರ ಕುಟುಂಬದವರು ನನ್ನ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಇದರಿಂದ ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ. ಕಷ್ಟ ತೊಂದರೆಯಲ್ಲಿದ್ದವರು ಯಾರೇ ಬರಲಿ ಕೈಲಾದ ನೆರವು ನೀಡುತ್ತೇನೆ. ತಾವು ಕೂಡಾ ಅಗತ್ಯ ಬಿದ್ದಲ್ಲಿ ನನ್ನ ನೆರವು ಪಡೆದುಕೊಳ್ಳ ಬಹುದು ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ.ಎನ್. ಅಕ್ಕಿ, ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ, ಜಾನಪದ ಅಕಾಡೆಮಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ, ಪ್ರಕಾಶ ಅಂಗಡಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಗುರುಶಾಂತಮೂರ್ತಿ ಶಿವಾಚಾರ್ಯ ಆಶೀರ್ವಚನ ನೀಡಿದರು. ಟ್ರಸ್ಟ್ ಅಧ್ಯಕ್ಷ ಅಶೋಕ ಬಣಗಾರ ಅಧ್ಯಕ್ಷತೆ ವಹಿಸಿದ್ದರು.