Advertisement

ಕ್ಯಾನ್ಸರ್‌ ನಿಯಂತ್ರಣದಲ್ಲಿ ಆಹಾರಾಭ್ಯಾಸ ಮತ್ತು ವ್ಯಾಯಾಮಗಳ ಪಾತ್ರ

12:30 AM Mar 03, 2019 | |

(ಯುನಿವರ್ಸಿಟಿ ಆಫ್ ಟೆಕ್ಸಾಸ್‌ನ ಕ್ಯಾನ್ಸರ್‌ ಸೆಂಟರ್‌ನ ಎಂಡಿ ಆ್ಯಂಡರ್ಸನ್‌ ಅವರ ಸಲಹೆಯ ಮೇರೆಗೆ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗುವಂತೆ ಪರಿಷ್ಕರಿಸಲಾದ ಲೇಖನ)

Advertisement

ಸಾಮಾಜಿಕ ಮಾಧ್ಯಮಗಳು, ಇಂಟರ್‌ನೆಟ್‌ನಲ್ಲಿ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿರುವುದು ಇದು: ಕೆಲವು ಸೂಪರ್‌ಫ‌ುಡ್‌ಗಳು ಯಾವುದೇ ಇತರ ಔಷಧಗಳಿಗಿಂತ ಪರಿಣಾಮಕಾರಿಯಾಗಿ ಕ್ಯಾನ್ಸರ್‌ ಜೀವಕೋಶಗಳನ್ನು ನಿವಾರಿಸಿಬಿಡುತ್ತವೆ. ಬರೇ ಪಥ್ಯಾಹಾರದಿಂದಲೇ ಕ್ಯಾನ್ಸರನ್ನು ಗುಣಪಡಿಸುವ ಹೇಳಿಕೆಗಳೂ ಪ್ರಚಾರದಲ್ಲಿವೆ. ಇವು ರೋಗಿಗಳ ಹಾದಿ ತಪ್ಪಿಸುತ್ತಿರುವುದು ಮಾತ್ರವಲ್ಲದೆ, ಅವರು ಅಡ್ಡ ಪರಿಣಾಮಗಳನ್ನು ದೂರವಿರಿಸುವ ನೆಪದಲ್ಲಿ ನೈಜ ಔಷಧಗಳನ್ನು ತೆಗೆದುಕೊಳ್ಳದಂತೆ ಪ್ರೇರೇಪಿಸುವ ಮೂಲಕ ಜೀವ ಮಾರಕವೂ ಆಗಬಲ್ಲವು. ಹೀಗಾಗಿ ಈ ಲೇಖನ ಕ್ಯಾನ್ಸರ್‌ ನಿಯಂತ್ರಣದಲ್ಲಿ ಪಥ್ಯಾಹಾರ ಮತ್ತು ವ್ಯಾಯಾಮಗಳು ವಹಿಸುವ ಪಾತ್ರದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವಾಗಿದೆ.


ನಮ್ಮ ಆಹಾರಾಭ್ಯಾಸವನ್ನು ಆರೋಗ್ಯಪೂರ್ಣಗೊಳಿಸಲು ಕೆಲವು ಮಾರ್ಗದರ್ಶಿ ಸೂತ್ರಗಳು ಇಲ್ಲಿವೆ:
– ಸಸ್ಯಜನ್ಯ ಆಹಾರವಸ್ತುಗಳನ್ನು ಸೇವಿಸಿ. ಊಟ – ಉಪಾಹಾರದ ಬಟ್ಟಲಿನ ಮೂರನೇ ಎರಡು ಭಾಗ ತರಕಾರಿಗಳು, ಇಡೀ ಧಾನ್ಯಗಳು ಮತ್ತು ಹಣ್ಣುಗಳು ಇರಲಿ. ಇನ್ನುಳಿದ ಒಂದು ಭಾಗದಲ್ಲಿ ಮೀನು ಮತ್ತು ಕೋಳಿಮಾಂಸದಂತಹ ಕೊಬ್ಬು ಕಡಿಮೆ ಇರುವ ಆಹಾರವಸ್ತು ಇರಲಿ.
–  ಕೆಂಪು ಮಾಂಸದ ಪ್ರಮಾಣವನ್ನು ನಿಯಂತ್ರಿಸಿ. ಕೆಂಪು ಮಾಂಸದಲ್ಲಿ ಕೊಲೊರೆಕ್ಟಲ್‌ ಕ್ಯಾನ್ಸರ್‌ಗೆ ಸಂಬಂಧ ಹೊಂದಿರುವ ಅಂಶಗಳಿರುತ್ತವೆ. ಪೋರ್ಕ್‌, ಬೀಫ್, ಮಟನ್‌ ಇತ್ಯಾದಿಗಳೆಲ್ಲ ಕೆಂಪು ಮಾಂಸಗಳಾಗಿವೆ.
–  ಸಂಸ್ಕರಿಸಿದ ಧಾನ್ಯಗಳ ಬದಲಾಗಿ ಇಡೀ ಧಾನ್ಯಗಳನ್ನು ಆಯ್ದುಕೊಳ್ಳಿ. ಇಡೀ ಧಾನ್ಯಗಳಲ್ಲಿ ನಾರಿನಂಶ ಸಮೃದ್ಧವಾಗಿರುತ್ತದೆ, ಇದು ನಾವು ಕಡಿಮೆ ದೇಹತೂಕ ಹೊಂದಿರಲು ಸಹಕರಿಸಿ ಕ್ಯಾನ್ಸರ್‌ ಅಪಾಯವನ್ನು ಕಡಿಮೆಗೊಳಿಸುತ್ತದೆ. 
–  ಸಂಸ್ಕರಿಸಿದ ಮಾಂಸ ಸೇವನೆಯನ್ನು ವರ್ಜಿಸಿ. ಸಂಸ್ಕರಿಸಿದ ಮಾಂಸದಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿದ್ದು, ಇಂತಹ ಮಾಂಸ ಸೇವನೆಯು ನಮ್ಮ ಡಿಎನ್‌ಎಗೆ ಹಾನಿ ಉಂಟು ಮಾಡುವ ಮೂಲಕ ಕೊಲೊನ್‌ ಕ್ಯಾನ್ಸರ್‌ ಅಪಾಯವನ್ನು ಹೆಚ್ಚಿಸುತ್ತದೆ. 
–  ಸಸ್ಯಜನ್ಯ ಪ್ರೊಟೀನ್‌ಗಳನ್ನು ಆರಿಸಿಕೊಳ್ಳಿ. ದ್ವಿದಳ ಧಾನ್ಯಗಳು, ಬೇಳೆಕಾಳುಗಳು, ನೆಲಗಡಲೆ ಇತ್ಯಾದಿಗಳಿಂದ ಸಿಗುವ ಪ್ರೊಟೀನ್‌ ಪ್ರಾಣಿಜನ್ಯ ಅಥವಾ ಕೃತಕ ಪ್ರೊಟೀನ್‌ ಪೂರಕ ಆಹಾರಗಳಿಂದ ಸಿಗುವ ಪ್ರೊಟೀನ್‌ಗಿಂತ ಆರೋಗ್ಯಪೂರ್ಣವಾಗಿರುತ್ತದೆ.
–  ಮದ್ಯಪಾನವನ್ನು ದೂರ ಇರಿಸಿ. ಅಲ್ಪ ಪ್ರಮಾಣದಲ್ಲಿ ಮದ್ಯ ಸೇವನೆಯೂ ಕೂಡ ಬಾಯಿ, ಸ್ತನ ಮತ್ತು ಪಿತ್ತಕೋಶ 
ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಮದ್ಯಪಾನದ ಜತೆಗೆ ಧೂಮಪಾನದಂತಹ ಹವ್ಯಾಸಗಳೂ ಜತೆಗೂಡಿದರೆ ಕ್ಯಾನ್ಸರ್‌ ಅಪಾಯ ಹಲವು ಪಟ್ಟು ಹೆಚ್ಚಳವಾಗುತ್ತದೆ.

ಮನುಷ್ಯರಲ್ಲಿ ಕ್ಯಾನ್ಸರ್‌ ಅಪಾಯವನ್ನು ನೂರಕ್ಕೆ ನೂರು ನಿರ್ಮೂಲನೆಗೊಳಿಸುತ್ತವೆ ಎಂಬುದು ಶ್ರುತಪಟ್ಟಿರುವ ಯಾವುದೇ ಪಥ್ಯಾಹಾರ ಅಥವಾ ವ್ಯಾಯಾಮ ಸದ್ಯಕ್ಕಿಲ್ಲ. ಆರೋಗ್ಯಯುತ ಜೀವನ ಶೈಲಿ, ಆರೋಗ್ಯಪೂರ್ಣ ಆಹಾರ ಶೈಲಿ ಮತ್ತು ನಿಯಮಿತವಾಗಿ ವ್ಯಾಯಾಮ ನಡೆಸುವುದರ ಜತೆಗೆ, ಧೂಮಪಾನದಂತಹ ಅಪಾಯಕಾರಿ ಹವ್ಯಾಸಗಳನ್ನು ಸಂಪೂರ್ಣವಾಗಿ ದೂರ ಇರಿಸುವುದರಿಂದ ಜೀವಮಾನ ಪರ್ಯಂತ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ಜೀವಮಾನ ಪರ್ಯಂತ ದೂರ ಇರಿಸಬಹುದು. ಜತೆಗೆ, ಅಕಸ್ಮಾತ್‌ ಕ್ಯಾನ್ಸರ್‌ ಉಂಟಾದರೂ ಅದನ್ನು ಎದುರಿಸುವುದು ಮತ್ತು ಚಿಕಿತ್ಸೆಗೂ ಇವು ಸಹಾಯ ಮಾಡುತ್ತವೆ.

ಆಹಾರ ಸೇವನೆಯಲ್ಲಿ ಆರೋಗ್ಯಪೂರ್ಣ ಆಯ್ಕೆಗಳನ್ನು ಮಾಡಿಕೊಳ್ಳುವುದರಿಂದ ಕ್ಯಾನ್ಸರ್‌ ಮತ್ತು ಇನ್ನಿತರ ಅನೇಕ ದೀರ್ಘ‌ಕಾಲಿಕ ಅನಾರೋಗ್ಯಗಳಿಗೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಸಸ್ಯಜನ್ಯ ವಸ್ತುಗಳು, ಇಡೀ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು ಸಮೃದ್ಧವಾಗಿರುವ ಆಹಾರವು ನಮ್ಮ ದೇಹಕ್ಕೆ ವಿವಿಧ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಆ್ಯಂಟಿಓಕ್ಸಿಡೆಂಟ್‌ಗಳನ್ನು ಒದಗಿಸಿಕೊಟ್ಟು ನಾವು ಆರೋಗ್ಯಯುತವಾಗಿರುವಂತೆ ಸಹಾಯ ಮಾಡುತ್ತದೆ. 

ಜತೆಗೆ, ವೈವಿಧ್ಯಮಯವಾದ ಆರೋಗ್ಯಯುತ ಆಹಾರ ವಸ್ತುಗಳ ಸೇವನೆಯಿಂದ ದೇಹ ಅತಿ ತೂಕ ಗಳಿಸುವ ಅಪಾಯ ನಿವಾರಣೆಯಾಗುತ್ತದೆ, ದೇಹದಲ್ಲಿ ಕೊಬ್ಬು ಇಳಿಕೆಯಾಗುತ್ತದೆ. ಆರೋಗ್ಯಯುತ ದೇಹತೂಕವನ್ನು ಕಾಪಾಡಿಕೊಳ್ಳುವುದು ಕ್ಯಾನ್ಸರ್‌ ಅಪಾಯವನ್ನು ದೂರ ಇರಿಸಲು ಬಹಳ ಪ್ರಾಮುಖ್ಯವಾಗಿದೆ.

Advertisement

ಆಹಾರಾಭ್ಯಾಸಗಳು ಮತ್ತು ಕ್ಯಾನ್ಸರ್‌ ಬೆಳವಣಿಗೆಗೆ ಸಂಬಂಧಿಸಿ ಅದೆಷ್ಟೋ ಊಹಾಪೋಹಗಳು, ವದಂತಿಗಳು ಪ್ರಚಲಿತದಲ್ಲಿವೆ. ಅವುಗಳಲ್ಲಿ ಕೆಲವನ್ನು ವಿಶ್ಲೇಷಿಸೋಣ. 

ಆಹಾರ ವದಂತಿ 1: ಕೊಬ್ಬು ಸೇವಿಸಿದರೆ ದಪ್ಪಗಾಗುತ್ತೇವೆ.
ನಿಜಾಂಶ: ಕೊಬ್ಬಿನಲ್ಲಿ ಕಾಬೊìಹೈಡ್ರೇಟ್‌ಗಳು ಅಥವಾ ಪ್ರೊಟೀನ್‌ಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಕ್ಯಾಲೊರಿಗಳಿರುತ್ತವೆ ಎಂಬುದು ನಿಜವಾದರೂ ಅದು ನಮ್ಮ ಹೊಟ್ಟೆ ದೀರ್ಘ‌ಕಾಲ ತುಂಬಿರುವಂತಹ ಭಾವನೆ ಮೂಡಿಸುವ ಮೂಲಕ ಅನವಶ್ಯಕವಾಗಿ ಪದೇ ಪದೆ ಉಪಾಹಾರ ಸೇವಿಸುವುದನ್ನು ತಡೆಯುತ್ತದೆ. ಕೊಬ್ಬಿನಲ್ಲಿ ಮಾತ್ರ ಕರಗಬಲ್ಲ ಎ, ಡಿ, ಇ ಮತ್ತು ಕೆಯಂತಹ ವಿಟಮಿನ್‌ಗಳು ನಮ್ಮ ದೇಹಕ್ಕೆ ಸೇರ್ಪಡೆಯಾಗಲು ಕೊಬ್ಬು ಅತ್ಯವಶ್ಯಕ. ಸಸ್ಯಜನ್ಯ ಆಹಾರಗಳಾದ ಬೆಣ್ಣೆಹಣ್ಣು, ಆಲಿವ್‌ ಎಣ್ಣೆ, ಬೇಳೆಕಾಳುಗಳು ಪ್ರಾಣಿಜನ್ಯ ಕೊಬ್ಬಿಗಿಂತ ಉತ್ತಮ. ಕಾಬೊìಹೈಡ್ರೇಟ್‌ಗಳಿಂದಾಗಲಿ, ಪ್ರೊಟೀನ್‌ ಅಥವಾ ಕೊಬ್ಬಿನಿಂದಾಗಲಿ ಪಡೆದು ಬಳಕೆಯಾಗದೆ ಉಳಿದ ಕ್ಯಾಲೊರಿಗಳು ದೈಹಿಕ ಕೊಬ್ಟಾಗಿ ಶೇಖರವಾಗುತ್ತವೆ.

– ಮುಂದುವರಿಯುವುದು

– ಡಾ| ಪ್ರಶಾಂತ್‌ ಬಿ.
ಕನ್ಸಲ್ಟಂಟ್‌ ಹೆಮಟಾಲಜಿಸ್ಟ್‌
ಕೆಎಂಸಿ ಆಸ್ಪತ್ರೆ, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next