Advertisement

ಶೈಕ್ಷಣಿಕ ಪ್ರಗತಿಯಲ್ಲಿ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಾತ್ರ ಹಿರಿದು

12:14 PM Sep 22, 2017 | Team Udayavani |

ಪುತ್ತೂರು : ಶೈಕ್ಷಣಿಕ ವಲಯದಲ್ಲಿ ಬಹಳಷ್ಟು ಸುಧಾರಣೆಗಳಾಗಿದ್ದು, ಪ್ರತಿಯೊಬ್ಬರೂ ಶಿಕ್ಷಣ ಪಡೆಯುವಂತಾಗಿದೆ. ಶೈಕ್ಷಣಿಕ ವ್ಯವಸ್ಥೆಯ ಈ ಬದಲಾವಣೆಯಲ್ಲಿ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಾತ್ರ ಹಿರಿದಾಗಿದೆ ಎಂದು ಸಚಿವ ಬಿ. ರಮಾನಾಥ ರೈ ಅಭಿಪ್ರಾಯಪಟ್ಟರು.ಸಂತ ಫಿಲೋಮಿನಾ ಕಾಲೇಜಿನ ವಜ್ರ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ದ.ಕ. ಜಿಲ್ಲೆಯಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಮಾನವ ಸಂಪನ್ಮೂಲಗಳನ್ನು ಸಂತ ಫಿಲೋಮಿನಾ ಕಾಲೇಜು ನೀಡಿದೆ ಎಂದು ಪ್ರಶಂಶಿಸಿದರು. ಇದಕ್ಕೂ ಮುನ್ನ ಸಚಿವ ರೈ ವಜ್ರಮಹೋತ್ಸವ ಲಾಂಛನ ಬಿಡುಗಡೆಗೊಳಿಸಿದರು.

ವಜ್ರಮಹೋತ್ಸವ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಕೆಥೋಲಿಕ್‌ ಧರ್ಮ ಪ್ರಾಂತದ ವಿಕಾರ್‌ ಜನರಲ್‌ ಹಾಗೂ ಕೆಥೋಲಿಕ್‌ ಶಿಕ್ಷಣ ಮಂಡಳಿಯ ಉಪಾ ಧ್ಯಕ್ಷ ಮೊ| ಡೆನ್ನಿಸ್‌ ಮೊರಾಸ್‌ ಪ್ರಭು  ಮಾತನಾಡಿ, 60 ವರ್ಷದ ಹಿಂದೆ ಪುತ್ತೂರಿನಲ್ಲಿ ಆರಂಭಗೊಂಡ ಈ ಶಿಕ್ಷಣ ಸಂಸ್ಥೆ ಜಾತಿ- ಮತಗಳ ಹಂಗಿಲ್ಲದೆ ಎಲ್ಲರಿಗೂ ವಿದ್ಯೆ ನೀಡಿದೆ. ಮುಂದೆಯೂ ಇದು ಮುಂದುವರಿಯಲಿದೆ ಎಂದರು.

ಸರಕಾರದಿಂದ ಸ್ಥಾನಮಾನ ಅಗತ್ಯ
ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಮತ್ತು ಹಂಪಿ ಕನ್ನಡ ವಿ.ವಿ.ಗಳ ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ ರೈ ಅಭಿನಂದನಾ ಭಾಷಣ ಮಾಡಿ, ಶಿಕ್ಷಣ ಸಂಸ್ಥೆಗಳು  ವಿದ್ಯಾ ದಾನದ ಮೂಲಕ ಸಮಾಜಕ್ಕೆ ಇನ್ನೂ ಹೆಚ್ಚಿನ ಕಾಣಿಕೆ ನೀಡಲು ಯತ್ನಿಸುತ್ತವೆ. ವಜ್ರಮಹೋತ್ಸವ ಆಚರಿಸಿಕೊಳ್ಳುತ್ತಿರುವ ಇಂತಹ ಅಪರೂಪದ ಶಿಕ್ಷಣ ಸಂಸ್ಥೆಗಳಿಗೆ ಸರಕಾರದ ವತಿಯಿಂದ ಸೂಕ್ತ ಸ್ಥಾನಮಾನ, ಪ್ರೋತ್ಸಾಹ ನೀಡಬೇಕಿದೆ ಎಂದರು.

ವಜ್ರಮಹೋತ್ಸವ ನೆನಪಿಗೆ ಅಂಚೆ ಇಲಾಖೆ ಹೊರತಂದ ಮೈ ಸ್ಟಾಂಪ್‌ ಅನ್ನು ಶಾಸಕಿ ಶಕುಂತಳಾ ಟಿ. ಶೆಟ್ಟಿ ಬಿಡುಗಡೆ ಮಾಡಿದರು. ದಕ್ಷಿಣ ಕರ್ನಾಟಕ ಪ್ರಾಂತ್ಯದ ಪೋಸ್ಟ್‌ ಮಾಸ್ಟರ್‌ ಜನರಲ್‌ ರಾಜೇಂದ್ರ ಕುಮಾರ್‌ ಅವರು ವಿಶೇಷ ಅಂಚೆ ಕವರು ಬಿಡುಗಡೆ ಮಾಡಿದರು. ಕೆಥೋಲಿಕ್‌ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ| ಜೆರಾಲ್ಡ್‌ ಡಿ’ಸೋಜಾ ಫೈನಾನ್ಯಿಯಲ್‌ ಅಕೌಂಟಿಂಗ್‌  ಬಿಕಾಂ ತರಗತಿಯ ಪಠ್ಯ ಪುಸ್ತಕ ಬಿಡುಗಡೆಗೊಳಿಸಿದರು.

Advertisement

ಮುಖ್ಯ ಅತಿಥಿಗಳಾಗಿದ್ದ ಮಂಗಳೂರು ವಿ.ವಿ. ಕುಲಪತಿ ಪ್ರೊ| ಕೆ. ಬೈರಪ್ಪ, ಕರ್ನಾಟಕ ಸರಕಾರದ ಮುಖ್ಯ ಸಚೇತಕ ಹಾಗೂ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ವಿಪಕ್ಷ ಮುಖ್ಯ ಸಚೇತಕ ಹಾಗೂ ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಶುಭ ಹಾರೈಸಿದರು.

ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾಂತ್ಯದ ಉಪನಿರ್ದೇಶಕ ಪ್ರೊ| ಉದಯಶಂಕರ್‌ ಎಚ್‌., ಪ.ಪೂ. ಶಿಕ್ಷಣ ಇಲಾಖೆಯ ಮಂಗಳೂರು ಪ್ರಾಂತ್ಯದ ಉಪನಿರ್ದೇಶಕ ಕೆ.ಆರ್‌. ತಿಮ್ಮಯ್ಯ, ಕಾಲೇಜು ಕ್ಯಾಂಪಸ್‌ ನಿರ್ದೇಶಕ ವಂ| ಡಾ| ಆಂಟನಿ ಪ್ರಕಾಶ್‌ ಮೊಂತೆರೊ, ಮಾಯಿದೆ ದೇವುಸ್‌ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆ.ಪಿ. ರೋಡ್ರಿಗಸ್‌, ಪದವಿ ಕಾಲೇಜಿನ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಲಾರೆನ್ಸ್‌ ಲೋಬೊ, ಪ.ಪೂ. ಕಾಲೇಜಿನ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್‌ ರೈ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯರಾಜ್‌ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಚಾಲಕ ವಂ| ಆಲ್ಫ್ರೆಡ್  ಜೆ. ಪಿಂಟೊ ಸ್ವಾಗತಿಸಿ, ಪ್ರಾಂಶುಪಾಲ ಪ್ರೊ| ಲಿಯೊ ನೊರೊನ್ಹ 60 ವರ್ಷಗಳಲ್ಲಿ ಕಾಲೇಜು ಮಾಡಿದ ಸಾಧನೆಯ ಚಿತ್ರಣ ನೀಡಿದರು. ಪ.ಪೂ. ಕಾಲೇಜಿನ ಪ್ರಾಂಶುಪಾಲ ವಂ| ವಿಜಯ್‌ ಲೋಬೊ ವಂದಿಸಿದರು. ಉಪನ್ಯಾಸಕಿ ಭಾರತಿ ಎಸ್‌. ರೈ ಮತ್ತು ರಾಹುಲ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next