Advertisement
ಕೋಲಾರ ಜಿಲ್ಲೆ, ಚಿಂತಾಮಣಿ ನಗರದ ನೀರಿನ ಮೂಲ- ಕನ್ನಂಪಳ್ಳಿ ಕೆರೆ. ದಿಬ್ಬದಲ್ಲಿ ನಿಂತು ಜಲಾನಯನ ಕ್ಷೇತ್ರ ಗಮನಿಸಬೇಕು. ಕೈಲಾಸಗಿರಿ, ಅಂಬಾಜಿದುರ್ಗ ಬೆಟ್ಟದ ನೀರು ಇಲ್ಲಿಗೆ ಬರುತ್ತದೆ. ಬೆಟ್ಟದ ಕಾಲಬುಡದಲ್ಲಿ ಕೆಲವು ಕುರುಚಲು ಸಸ್ಯ ಬಿಟ್ಟರೆ ಇಡೀ ಬೆಟ್ಟ ಏಕ ಶಿಲಾಮಯ. ಅಲ್ಲಿ ಸುರಿದ ಹನಿ ಹನಿ ಮಳೆಯೂ ಸರ್ರನೇ ಜಾರಿ ಕೆರೆಯತ್ತ ಬರುತ್ತದೆ. ಕಾಡುಗುಡ್ಡದ ಕೆರೆ ಜಲಾನಯನದಲ್ಲಿ 500 ಮಿಲಿಮೀಟರ್ ವಾರ್ಷಿಕ ಮಳೆ ಸುರಿದರೂ ಕೆಲವೊಮ್ಮೆ ಕೆರೆ ಭರ್ತಿಯಾಗುವುದಿಲ್ಲ, ಆದರೆ ಇಲ್ಲಿ 150 ಮಿಲಿಮೀಟರ್ ಸುರಿದರೂ ಒಂದೇ ಒಂದು, ಹನಿಯನ್ನೂ ಇಟ್ಟುಕೊಳ್ಳದೇ ಕಲ್ಲು ಬಂಡೆ ಕೆರೆಗೆ ಸಾಗಿಸುತ್ತದೆ. ಕಡಿಮೆ ಮಳೆ ಸುರಿಯುವ ಪ್ರದೇಶಗಳಲ್ಲಿ ಬಂಡೆ ಬೆಟ್ಟದ ತಗ್ಗಿನ ಕೆರೆಗಳಿರುವುದು ವಿಶೇಷ. ನಮ್ಮ ರಾಜ್ಯದ ಯಾವ ಪ್ರದೇಶಕ್ಕೆ ಹೋದರೂ ಕೆರೆ ಸ್ಥಳದ ಆಯ್ಕೆಯ ವಿಚಾರದಲ್ಲಿ ಸಹಸ್ರಾರು ವರ್ಷಗಳ ಪರಂಪರೆ ಕಲಿಸಿದ ವಿದ್ಯೆಯಿಂದ ಇಲ್ಲಿ ಕೆರೆಗಳು ನಿರ್ಮಾಣವಾಗಿವೆ.
ಕೊಪ್ಪಳ ತಾಲೂಕಿನ ಇಂದರಗಿ ಬೆಟ್ಟದ ಕೆರೆ ವೀಕ್ಷಣೆಗೆ ಹೋಗಿದ್ದೆ. ಕಲ್ಲುಗುಡ್ಡದ ನೀರು ಹರಿಯುವ ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆ, ಕ್ರಿ.ಶ. 2004ರಲ್ಲಿ ಕೆರೆಯೊಂದನ್ನು ಕಟ್ಟಿದೆ. ಇಳಿಜಾರಿಗೆ ಅಡ್ಡವಾಗಿ ಬದು ನಿರ್ಮಿಸಿ ಅದು ಕುಸಿಯದಂತೆ ಕಲ್ಲಿನ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಮುಕ್ಕುಂದಕ್ಕೆ ಹರಿದು ಮುಂದೆ ಗಂಗಾವತಿಯ ದುರ್ಗಮ್ಮನ ಹಳ್ಳಕ್ಕೆ ಸೇರುತ್ತಿದ್ದ ನೀರನ್ನು ಗುಡ್ಡದಲ್ಲಿ ತಡೆದು ಇಂದರಗಿಯತ್ತ ತಿರುಗಿಸಿ ಕೃಷಿಗೆ ಒದಗಿಸುವುದು ಕೆರೆ ನಿರ್ಮಾಣದ ಉದ್ದೇಶ. ಇಲ್ಲಿನ ನೈಸರ್ಗಿಕ ಕಲ್ಲುಬಂಡೆಯೊಂದು ಗಣಪತಿಯಂತೆ ಕಾಣುವುದರಿಂದ ಕೆರೆಗೆ ಹರಿದು ಬರುವ ಹಳ್ಳಕ್ಕೆ “ಹೊಟ್ಟೆ ಬೆನಕನ ನಾಲಾ’ ಎಂದು ಹೆಸರಿದೆ. ಇದೇ ಊರಿನ ತಗ್ಗಿನಲ್ಲಿ 70 ಎಕರೆಯ ಹೊಸಕೆರೆಯೊಂದನ್ನು ಇದೇ ಕಾಲಕ್ಕೆ ನೀರಾವರಿ ಇಲಾಖೆ ನಿರ್ಮಿಸಿ ಬೆಟ್ಟದ ಕೆರೆಯಿಂದ ಬಂದ ನೀರು ಹಿಡಿಯಲು ನೆರವಾಗಿದೆ. ಇಂದರಗಿ ಬೆಟ್ಟದ ಕೆರೆ ನಿರ್ಮಾಣ ಸಂದರ್ಭದಲ್ಲಿ ಒಂದು ತಾಂತ್ರಿಕ ದೋಷವಾಗಿತ್ತು. ದಂಡೆಗೆ ಮರಳು ಮಿಶ್ರಿತ ಮಣ್ಣು ಹಾಕಿದ್ದ ಪರಿಣಾಮ ಎಷ್ಟೇ ಕಲ್ಲು ಕಟ್ಟಿದರೂ ಇಷ್ಟು ವರ್ಷ ಸಂಗ್ರಹವಾದ ನೀರೆಲ್ಲ ಸರಾಗ ಸೋರಿ ಹೋಗಿ ದುರ್ಗಮ್ಮನ ಹಳ್ಳಕ್ಕೆ ಹೋಗುತ್ತಿತ್ತು. ಕೊಪ್ಪಳದ ಗವಿಮಠದ ಶ್ರೀಗಳ ಜಲಜಾಗೃತಿಯ ಪ್ರಯತ್ನದಿಂದ ಕಳೆದ ವರ್ಷ ಈ ಕೆರೆ ದಂಡೆಯ ಮರಳುಮಿಶ್ರಿತ ಮಣ್ಣು ತೆಗೆದು ಸುಮಾರು 500 ಲಾರಿಗಳಷ್ಟು ಕಪ್ಪು ಎರಿ ಮಣ್ಣು ತಂದು ದಂಡೆಯ ಮಧ್ಯೆ ಹಾಕಿ ಸರಿಯಾಗಿ ಭದ್ರಗೊಳಿಸಲಾಯ್ತು. ಈಗ ನೀರು ನಿಂತಿದೆ. ಕೆಲವು ದಿನಗಳ ಹಿಂದೆ, ಕೆರೆ ಕುರಿತ ಮಾತುಕತೆ ನಡೆಯುತ್ತಿದ್ದಾಗ, ಶ್ರೀಗಳು ಕೆರೆ ವಿಡಿಯೋ ತೋರಿಸಿದ್ದರು. ಬೆಟ್ಟದ ಸುತ್ತಲಿನ ಕೆರೆ ಪರಿಸರ ನೋಡಿದರೆ ಮಲೆನಾಡಿನ ಕಣಿವೆಯಂತೆ ಕಾಣಿಸುತ್ತಿತ್ತು. ಕಲ್ಲುಬೆಟ್ಟದ ಕೆರೆ ನೋಡಲು ಇಂದರಗಿಯ ಬೆಟ್ಟವೇರಿದಾಗ ಬೆರಗಿನ ನೋಟಗಳು ಸಿಕ್ಕಿವೆ. ನೀರು ಸೋರದಂತೆ ಎರೆಮಣ್ಣು/ಹಾಳ್‌ಮಣ್ಣನ್ನು ಬಳಸುವ ಸ್ಥಳೀಯ ಜ್ಞಾನದಿಂದ ಕೆರೆಯ ಪುನರುಜ್ಜೀವನ ಯಶಸ್ವಿಯಾಗಿದೆ. ಕೆರೆ ದಂಡೆ ಸರಿಪಡಿಸುವ ಇಡೀ ಕಾರ್ಯಾಚರಣೆಯಿಂದ ಸ್ಥಳೀಯ ಕೌಶಲ್ಯದ ಮಹತ್ವವೂ ಸಾಬೀತಾಗಿದೆ. ಕರಡಿ, ಚಿರತೆ, ಮುಳ್ಳುಹಂದಿ, ಮೊಲ, ತೋಳ, ನರಿ, ಕುರಿ, ದನಕರುಗಳಿಗೆಲ್ಲ ಅನುಕೂಲವಾಗಿದೆ. “ದುಡಕ ತಿನ್ನಕ ದಾರಿ ಆತು, ನೆಲ ನಂಬಂಗೆ ಆತು’ ಎಂಬ ಹಳ್ಳಿಗ ನಾಗಪ್ಪ ಕುಂಬಾರ (62) ಮಾತು ಕೆರೆ ಮಹತ್ವಕ್ಕೆ ಸಾಕ್ಷಿ.
Related Articles
ಇಂದರಗಿಗೆ ಹೋಗುವಾಗ ಅಲ್ಲಿನ ಕಲ್ಲುಬೆಟ್ಟದ ಸಾಲು ನೋಡಿ ಇದರ ಸುತ್ತ ಹಲವು ಕೆರೆಗಳಿರಬಹುದೆಂದು ಯೋಚಿಸಿದೆ. ರಾಜ್ಯದ ಇಂಥದೇ ಪರಿಸರದ ಹತ್ತಾರು ಕಡೆಗಳಲ್ಲಿ ಸುತ್ತಾಡಿದ ಅನುಭವ ಇಲ್ಲಿಯೂ ಕೆರೆ ಇದೆಯೆಂದು ಹೇಳುತ್ತಿತ್ತು. “ನಮ್ಮೂರಾಗ ಇರೋದು ಎರಡೇ ಕೆರೆ. ಒಂದು ಹೊಸಕೆರೆ, ಇನ್ನೊಂದು ಈಗ ಬೆಟ್ಟದ ಮೇಲೆ ಬೆನಕನ ನಾಲಾಕ್ಕೆ ಕಟ್ಟಿದ ಕೆರೆ’ ಎಂದು ಹಳ್ಳಿಗರು ಉತ್ತರಿಸಿದರು. ಕೆರೆ ಪರಂಪರೆಯ ಒಂದಿಷ್ಟು ಅರಿವು ಪಡೆದಿದ್ದರಿಂದ ತಕ್ಷಣಕ್ಕೆ ಅವರ ಮಾತು ನಂಬಲಿಲ್ಲ. “ನಮ್ಮ ಊರಾಗ ಮೇ ತಿಂಗಳಿನಾಗ ಮಳಿ ಬರಲಿ ಅಂತ ದ್ಯಾವರಿಗೆ ಪೂಜೆ ಮಾಡತಿದ್ವಿ. ಕ್ಯಾದಗಿ ಬಾವಿಯ ಒರತೆ ನೀರು ತಂದು ಆಂಜನೇಯ ಹಾಗೂ ದುರ್ಗಾ ಗುಡಿಗೆ ತಂದು ಪೂಜೆ ಮಾಡಿದರೆ ಮಳೆ ಬರುತ್ತದೆಯೆಂಬ ನಂಬಿಕೆಯಿತ್ತು.’ ಎಂಬ ಹಿರಿಯರ ಮಾತು ಕೆರೆಯ ಸುಳಿವು ನೀಡಿತು. ಕ್ಯಾದಿಗೆ ಬಾವಿಯಲ್ಲಿ ಬೇಸಿಗೆಯಲ್ಲಿ ನೀರಿರುವುದು ತಿಳಿಯಿತು. ದುರ್ಗಮ್ಮನ ಕೋಡಿ, ತಾಯಮ್ಮನ ಕೋಡಿ, ಕ್ಯಾದಗಿ ಬಾವಿ ಮುಂತಾಗಿ ನೀರಿನ ಕಥೆ ನೆನಪಿಸುವ ಸ್ಥಳನಾಮ ಸಿಕ್ಕವು. ಸುಮಾರು 200 ವರ್ಷಗಳ ಹಿಂದೆ ತಾಯಮ್ಮನ ಕೆರೆ, ದುರ್ಗಮ್ಮನ ಕೆರೆ, ಹೀಗೆ… ಊರ ಗುಡ್ಡದ ತಗ್ಗಿನಲ್ಲಿ ಏಳು ಕೆರೆಗಳಿದ್ದವಂತೆ! ಊರು ಬೆಳೆಯುತ್ತ, ಕೃಷಿ ವಿಸ್ತರಿಸುತ್ತ ನೀರಿನ ನೆಲೆಗಳ ಅತಿಕ್ರಮಣದಿಂದ ಇಂದು ಅವೆಲ್ಲಾ ನಾಶವಾಗಿವೆ. ಕಲ್ಲುಬೆಟ್ಟದ ತಪ್ಪಲಿನಲ್ಲಿ ಕೆರೆಗೆ ನೆಲೆ ಒದಗಿಸುವುದು ಹಳ್ಳಿ ನಿರ್ಮಾಣದ ಪ್ರಥಮ ಆದ್ಯತೆಯಾಗಿದ್ದನ್ನು ತಲೆಮಾರು ಮರೆತಿದೆ.
Advertisement
ಹೂಳು ಬೀಳದ ಕೆರೆಮಳೆ ನೀರು ನಿಶ್ಚಿತವಾಗಿ ಪ್ರತಿ ವರ್ಷ ಹರಿದು ಬರುವುದು ಕಲ್ಲುಬೆಟ್ಟದ ಕೆಳಗಡೆಯಲ್ಲಿ ಕೆರೆ ಕಟ್ಟಲು ಮುಖ್ಯ ಕಾರಣ. ನೀರು ಅಲ್ಲಿ ಇಂಗದೇ ಹೆಚ್ಚಿನ ಭಾಗ ಕೆಳಗಿಳಿಯುವುದರಿಂದ ಇಂಥ ಸ್ಥಳದ ಆಯ್ಕೆ ಮಾಡಲಾಗುತ್ತದೆ. ಸಣ್ಣ ಮಳೆ ಸುರಿದರೂ ಕೆರೆ ತುಂಬುವುದರಿಂದ ಕೆರೆ, ಊರಿಗೆ ನೆರವಾಗುತ್ತದೆ. ದಟ್ಟ ಕಾಡಿನ ತಗ್ಗಿನ ಒಂದು ಕೆರೆಯ ಆಯುಷ್ಯ 50 ವರ್ಷಗಳೆಂದು ಅಂದಾಜಿಸಿದರೆ ಕಲ್ಲುಬಂಡೆ ಬೆಟ್ಟದ ತಗ್ಗಿನ ಕೆರೆ 200 ವರ್ಷವಾದರೂ ಹೂಳಿನಿಂದ ಭರ್ತಿಯಾಗುವುದಿಲ್ಲ. ಕೆರೆಯ ತಳದಲ್ಲಿಯೂ ಬಂಡೆಗಲ್ಲಿನ ಹಾಸುಗಳಿರುವುದರಿಂದ ಕಲ್ಲಿನ ತೊಟ್ಟಿಯಂತೆ ಇವು ಕಾರ್ಯನಿರ್ವಹಿಸುತ್ತವೆ. ಒಂದು ಕಾಲದಲ್ಲಿ ಗುಡ್ಡದ ಗುಹೆಯಲ್ಲಿ ಬದುಕಿದ ಮಾನವ ಬೇಸಾಯಕ್ಕೆ ಇಳಿದಾಗ ಅಲ್ಲೇ ತಗ್ಗಿನ ಮಣ್ಣಿನಲ್ಲಿ ದಾರಿ ಹುಡುಕಿದ್ದು ಸಹಜವೇ! ಎತ್ತರದ ಬಂಡೆಬೆಟ್ಟಗಳನ್ನು ದೇವರೆಂದು ಆರಾಧಿಸುತ್ತ ಹಿರಿಯರು ನಿಸರ್ಗ ಸಂರಕ್ಷಣೆಯ ನೀತಿ ಸಾರಿದವರು. ದರೋಡೆ, ಸುಲಿಗೆಗಳ ಶತಮಾನಗಳ ಹಿಂದೆ ನೈಸರ್ಗಿಕ ಕೋಟೆಗಳಂತೆ ಮನುಕುಲ ರಕ್ಷಿಸಿದ ಬೆಟ್ಟಗಳು ಝರಿ ನೀರು ನೀಡಿ ನೆರವಾಗಿವೆ. ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ಸ್ಥಳ ಯೋಗ್ಯ ಮಾದರಿಯ ಬಗ್ಗೆ ಇಂದು ಬಹಳ ಮಾತಾಡುತ್ತೇವೆ. ಕಲ್ಲುಬೆಟ್ಟದ ಮಗ್ಗುಲಿನ ಕೆರೆಗಳು ಸ್ಥಳೀಯ ಮಳೆ, ಬೆಳೆ ಅವಲಂಬಿಸಿ ನೀರು ನಿರ್ವಹಣೆಯ ಅತ್ಯುತ್ತಮ ಮಾದರಿಗಳನ್ನು ರೂಪಿಸಿದ ಸ್ಥಳಗಳಾಗಿದ್ದನ್ನು ಮರೆತಿದ್ದೇವೆ. ಕರುನಾಡ ಕೆರೆ ಯಾತ್ರೆ- 9. ಒರತೆ ಕೆರೆಗಳ ಒಳಗುಟ್ಟು -ಶಿವಾನಂದ ಕಳವೆ