Advertisement

ಸೋಲಾರ್‌ ಪ್ಯಾನಲ್‌ಗ‌ಳ ಕ್ಲೀನ್‌ ಮಾಡಲು ಬಂದಿವೆ ರೋಬೋಟಿಕ್‌ ಉಪಕರಣ

12:34 PM Dec 01, 2018 | Team Udayavani |

ಬೆಂಗಳೂರು: ಸೋಲಾರ್‌ ಪ್ಯಾನಲ್‌ಗ‌ಳ ಸ್ವತ್ಛತೆಗೆ ಅಪಾರ ಪ್ರಮಾಣದಲ್ಲಿ ನೀರು ಬಳಸುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಫೇನ್‌ಮನ್‌ ಇನ್ನೋವೇಷನ್‌ ಸಂಸ್ಥೆ, ಒಂದು ಹನಿ ನೀರೂ ಬಳಸದೆ ಸುಲಭವಾಗಿ ಸೋಲಾರ್‌ ಪ್ಯಾನಲ್‌ಗ‌ಳನ್ನು ಸ್ವತ್ಛಗೊಳಿಸುವ ರೋಬೋಟಿಕ್‌ ಉಪಕರಣಗಳನ್ನು ಅಭಿವೃದ್ಧಿಪಡಿಸಿದೆ.

Advertisement

ರೋಬೋಟಿಕ್‌ ಉಪಕರಣದಲ್ಲಿ ಅಳವಡಿಸಿರುವ ಮೃದುವಾದ ಬ್ರೆಷ್‌ಗಳು ಪ್ಯಾನಲ್‌ಗ‌ಳ ಮೇಲಿನ ಧೂಳನ್ನು ಸ್ವತ್ಛ ಮಾಡುತ್ತವೆ. ಇದರಿಂದಾಗಿ ಪ್ಯಾನಲ್‌ಗ‌ಳ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಹೆಚ್ಚಲಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ವಿಜ್ಞಾನ ಇಲಾಖೆಯಿಂದ ನಗರದಲ್ಲಿ ನಡೆಯುತ್ತಿರುವ “ಬೆಂಗಳೂರು ಟೆಕ್‌ ಸಮ್ಮಿಟ್‌’ ಪ್ರದರ್ಶನದಲ್ಲಿ ಈ ರೋಬೋಟಿಕ್‌ ಉಪಕರಣಗಳು ವೀಕ್ಷಕರ ಗಮನ ಸೆಳೆದವು.

ದೇಶಾದ್ಯಂತ ಸದ್ಯ 21 ಗಿಗಾ ವ್ಯಾಟ್‌ ಸೋಲಾರ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದು, ಎಲ್ಲ ಸೋಲಾರ್‌ ಪ್ಯಾನಲ್‌ಗ‌ಳ ಸ್ವತ್ಛತೆಗಾಗಿ ವಾರ್ಷಿಕ 3 ಶತಕೋಟಿ ಲೀಟರ್‌ ನೀರು ಬಳಸಲಾಗುತ್ತಿದೆ. ಸ್ವತ್ಛಗೆ ನೀರು ಬಳಸಿದಾಗ ನೀರಿನಲ್ಲಿರುವ ಲವಣಾಂಶಗಳು ಪ್ಯಾನಲ್‌ ಗಾಜಿನ ಮೇಲೆ ಬಿಳಿ ಕಲೆಗಳನ್ನು ಉಂಟು ಮಾಡುತ್ತವೆ. ಇದರಿಂದಾಗಿ ಸೂರ್ಯನ ಕಿರಣಗಳು ಸಮರ್ಪಕವಾಗಿ ಪ್ಯಾನಲ್‌ ಒಳ ಪ್ರವೇಶಿಸಲು ಸಾಧ್ಯವಾಗದೆ, ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಕಡಿಮೆಯಾಗುತ್ತದೆ.

ಇದಕ್ಕೆ ಪರಿಹಾರ ಕಂಡುಕೊಳ್ಳಲು ಫೇನ್‌ಮನ್‌ ಇನ್ನೋವೇಷನ್‌ ಸಂಸ್ಥೆ ಮುಂದಾಗಿದ್ದು, ನೀರು ಬಳಸದೆ ಸುಲಭವಾಗಿ ಪ್ಯಾನಲ್‌ಗ‌ಳ ಸ್ವತ್ಛಗೊಳಿಸುವ ಸೆಮಿ ಆಟೋಮ್ಯಾಟಿಕ್‌ ರೋಬೋಟಿಕ್‌ ಉಪಕರಣಗಳನ್ನು ಸಿದ್ಧಪಡಿಸಿದೆ. ಹತ್ತಾರು ಪ್ಯಾನಲ್‌ಗ‌ಳನ್ನು ಸಾಲಾಗಿ ಜೋಡಿಸಿ, ಸಾಲಿನ ಒಂದು ಬದಿಯಲ್ಲಿ ಉಪಕರಣ ಅಳವಡಿಸಿದರೆ, ಕೆಲವೇ ನಿಮಿಷಗಳಲ್ಲಿ ಒಂದು ಸಾಲಿನಲ್ಲಿರುವ ಎಲ್ಲ ಪ್ಯಾನೆಲ್‌ಗ‌ಳನ್ನು ಸ್ವತ್ಛಗೊಳಿಸುವ ಉಪಕರಣ, ಪ್ಯಾನಲ್‌ ಮೇಲಿನ ಧೂಳನ್ನು ಒಂದು ಕಡೆ ಸಂಗ್ರಹಿಸಿಕೊಳ್ಳುತ್ತದೆ.

ನೀರು ಬಳಕೆ ಅಪಾಯಕಾರಿ: ಸೋಲಾರ್‌ ಪ್ಯಾನಲ್‌ಗ‌ಳನ್ನು ನೀರಿನಲ್ಲಿ ತೊಳೆಯುವುದರಿಂದ ಪ್ಯಾನಲ್‌ಗ‌ಳಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತವೆ. ಪ್ರಮುಖವಾಗಿ ಬೆಳಗ್ಗೆ ಮಾತ್ರವೇ ಅವುಗಳನ್ನು ಸ್ವತ್ಛಗೊಳಿಸಬೇಕು. ಪ್ಯಾನಲ್‌ಗ‌ಳು ಬಿಸಿಯಾಗಿದ್ದಾಗ ಅಥವಾ ತಣ್ಣಗಿರುವ ಸಂದರ್ಭದಲ್ಲಿ ನೀರಿನಿಂದ ತೊಳೆದರೆ ಬಿರುಕು ಬಿಡುವ ಸಾಧ್ಯತೆಯಿರುತ್ತದೆ. ಜತೆಗೆ ನೀರಿನಲ್ಲಿರುವ ಲವಣಾಂಶ ತೆಗೆದ ನೀರು ಹಾಗೂ ಸಿಬ್ಬಂದಿ ಬಳಸಿ ಸ್ವತ್ಛಗೊಳಿಸುವುದರಿಂದ ಹೆಚ್ಚು ಹಣ ವೆಚ್ಚವಾಗುತ್ತದೆ. ಆದರೆ, ರೋಬೋಟಿಕ್‌ ಉಪಕರಣಗಳನ್ನು ದಿನದ ಎಲ್ಲ ಸಮಯದಲ್ಲೂ ಬಳಸಬಹುದು. ಜತೆಗೆ ಹೆಚ್ಚು ಜನರೂ ಬೇಕಿಲ್ಲ.

Advertisement

ಪ್ರಾಯೋಗಿಕವಾಗಿ ಯಶಸ್ವಿ: ಧಾರವಾಡದಲ್ಲಿ 2.5 ಕಿಲೋ ವ್ಯಾಟ್‌ ಸಾಮರ್ಥ್ಯದ ಸೋಲಾರ್‌ ಪ್ಯಾನಲ್‌ಗ‌ಳ ಸ್ವತ್ಛತೆಗೆ ಈ ಉಪಕರಣಗಳನ್ನು ಬಳಸಲಾಗಿದೆ. ಅದರಂತೆ ಒಂದು ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಪ್ಯಾನಲ್‌ಗ‌ಳನ್ನು ಸ್ವತ್ಛ ಮಾಡಲು ಎರಡು ರೋಬೋಟಿಕ್‌ ಉಪಕರಣಗಳು ಬೇಕಾಗುತ್ತವೆ. ಇವುಗಳನ್ನು ಬಳಸಿ ತಾರಸಿ ಮೇಲೆ ಅಳವಡಿಸಿರುವ ಪ್ಯಾನಲ್‌ಗ‌ಳನ್ನೂ ಸ್ವತ್ಛ ಮಾಡಬಹುದು.

ಗೆರೆ ಬೀಳುವುದಿಲ್ಲ: ಅತ್ಯಾಧುನಿಕ ತಂತ್ರಜ್ಞಾನದ ಫೈಬರ್‌ ಬ್ರಶ್‌ ಅನ್ನು ಉಪಕರಣದಲ್ಲಿ ಬಳಸಿದ್ದು, ಸ್ವತ್ಛಗೊಳಿಸುವಾಗ ಪ್ಯಾನಲ್‌ ಮೇಲೆ ಯಾವುದೇ ರೀತಿಯ ಗೆರೆಗಳು ಬೀಳುವುದಿಲ್ಲ. ಮೊದಲ ಹಂತದಲ್ಲಿ ತಯಾರಿಸಿದ್ದ ಉಪಕರಣದಲ್ಲಿ ಕಂಡುಬಂದ ಲೋಪಗಳನ್ನು ಸರಿಪಡಿಸಿ ಹೊಸ ಉಪಕರಣಗಳನ್ನು ಸಿದ್ಧಪಡಿಸಲಾಗಿದ್ದು, ಹಕ್ಕುಸ್ವಾಮ್ಯ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ ಎಂದು ಸಂಸ್ಥೆಯ ಸಿಇಒ ನಿಶಾಲ್‌ ರೇವಣಕರ್‌ ತಿಳಿಸಿದರು.

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next