ಮೊರ್ಬಿ (ಗುಜರಾತ್): ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯನ್ನು “ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಹೀಯಾಳಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಾತಿನೇಟು ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, “ದೇಶ ಲೂಟಿ ಮಾಡಿದ ಜನರಿಗೆ ಡಕಾಯಿತರ ಹೆಸರುಗಳೇ ನೆನಪಿಗೆ ಬರುತ್ತವೆ’ ಎಂದು ಕಿಡಿಕಾರಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಪಟೇಲರ ಹಿಡಿತವಿರುವ ಮೊರ್ಬಿಯಲ್ಲಿ ಬುಧವಾರ ನಡೆದ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಜಿಎಸ್‌ಟಿ ಬಗ್ಗೆ ರಾಹುಲ್ ಅವರ ಇತ್ತೀಚಿನ ವಿಶ್ಲೇಷಣೆ, ಘೋಷಣೆಗಳ ವಿರುದ್ಧ ಹರಿಹಾಯ್ದರು. ಅಲ್ಲದೆ ರಾಹುಲ್ ಅವರ ಗಬ್ಬರ್ ಸಿಂಗ್ ಟ್ಯಾಕ್ ಎಂಬ ಹೋಲಿಕೆಯ ಬದಲಾಗಿ, ಗ್ರ್ಯಾಂಡ್ ಸ್ಟುಪಿಡ್ ಥಾಟ್ ಎಂದು ವ್ಯಂಗ್ಯವಾಡಿದರು.
“ತಾವು ಅಧಿಕಾರಕ್ಕೆ ಬಂದರೆ ಸದ್ಯಕ್ಕಿರುವ ಜಿಎಸ್‌ಟಿಯ ನಾಲ್ಕು ತೆರಿಗೆ ಹಂತಗಳನ್ನು ತೆಗೆದುಹಾಕಿ, ಶೇ. 18ರ ಒಂದೇ ತೆರಿಗೆ ಅಳ ವಡಿಸುವುದಾಗಿ ರಾಹುಲ್ ಹೇಳಿದ್ದಾರೆ. ಇದು ಜಾರಿಗೆ ಬಂದರೆ ಒಂದು ಕೆಜಿ ಉಪ್ಪಿಗೂ 5 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರಿಗೂ ಒಂದೇ ತೆರಿಗೆ ಕಟ್ಟಬೇಕಾಗುತ್ತದೆ. ಹೀಗಾದಾಗ ಅಗತ್ಯ ವಸ್ತುಗಳ ಬೆಲೆ ಏರಿ, ಸಿಗರೇಟು, ಮದ್ಯದ ಬೆಲೆ ಇಳಿಕೆಯಾಗುತ್ತದೆ. ಇದು ರಾಹುಲ್ ಗಾಂಧಿಯವರ “ಗ್ರ್ಯಾಂಡ್ ಸ್ಟುಪಿಡ್ ಥಾಟ್’ (ಜಿಎಸ್‌ಟಿ) ಎಂದು ವ್ಯಂಗ್ಯವಾಡಿದರು.
ಸರ್ದಾರರ ಹಠ: ಜವಾಹರಲಾಲ್ ನೆಹರೂ ವಿರುದ್ಧ ಹರಿಹಾಯ್ದ ಅವರು, “ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ, ಸೋಮನಾಥ ದೇಗುಲ ಕಟ್ಟಲು ಒಪ್ಪಿರಲಿಲ್ಲ. ಸರ್ದಾರ್ ಪಟೇಲ್ ಹಠದಿಂದ ಈ ದೇಗುಲ ನಿರ್ಮಾಣವಾಯಿತು’ ಎಂದರು.
ಈ ಹಿಂದೆ ಸೌರಾಷ್ಟ್ರ ಬರಗಾಲದಿಂದ ತತ್ತರಿಸಿ ದ್ದಾಗ, ಕಾಂಗ್ರೆಸ್ ಇಲ್ಲಿ ಪಂಪ್‌ಸೆಟ್ ನೀಡಿ ಸುಮ್ಮನಾಗಿತ್ತು. ಆದರೆ, ಬಿಜೆಪಿ ನರ್ಮದಾ ನದಿಯಿಂದ ದೊಡ್ಡ ಪೈಪುಗಳ ಮೂಲಕ ನೀರು ಹರಿಸಿದೆ ಎಂದು ನೆನಪಿಸಿದರು.
ಇಂದಿರಾ ಮತ್ತು ಕಚೀìಪು!
ಇಂದಿರಾ ಗಾಂಧಿಯವರನ್ನು ಟೀಕಿಸಿದ ಮೋದಿ, “”ಮೊರ್ಬಿಯಲ್ಲಿ 1979ರಲ್ಲಿ ಮಚ್ಚು ಅಣೆಕಟ್ಟು ಒಡೆದು ಸಾವಿರಾರು ಮಂದಿ ಸಾವನ್ನಪ್ಪಿದ್ದಾಗ ಅಲ್ಲಿಗೆ ಭೇಟಿ ನೀಡಿದ್ದ ಇಂದಿರಾ ಬೆನ್, ಈ ಪ್ರಾಂತ್ಯ ದಲ್ಲೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಶವಗಳ ಕೊಳೆತ ವಾಸನೆ ಸಹಿಸಿಕೊಳ್ಳದೆ ತಮ್ಮ ಮೂಗನ್ನು ಕರವಸ್ತ್ರದಿಂದ ಮುಚ್ಚಿ ಕೊಂಡಿದ್ದರು. ಮರುಕ ಹುಟ್ಟಿಸುತ್ತಿದ್ದ ಆ ಸನ್ನಿವೇಶ ಅವರ ಪಾಲಿಗೆ ನರಕವಾಗಿದ್ದರೆ, ತಿಂಗಳುಗಟ್ಟಲೆ ಅಲ್ಲಿನ ಬೀದಿಬೀದಿಗಳಲ್ಲಿ ಆರೆಸ್ಸೆಸ್, ಜನಸಂಘದ ಸ್ವಯಂ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ನಮಗೆ ಅದು ಮಾನವತೆಯ ಸುಗಂಧವಾಗಿತ್ತು” ಎಂದರು.