Advertisement

ರುದನೂರಗೆ ಕಾಡುತ್ತಿದೆ ರಸ್ತೆ-ನೀರಿನ ಸಮಸ್ಯೆ

05:23 PM Aug 04, 2019 | Team Udayavani |

ಭಾಲ್ಕಿ: ಸುಮಾರು 15 ದಿನಗಳಿಂದ ತಾಲೂಕು ಆಡಳಿತ ನೀರು ಪೂರೈಕೆ ಟ್ಯಾಂಕರ್‌ ಸ್ಥಗಿತಗೊಳಿಸಿರುವುದರಿಂದ ಮಳೆಗಾಲದಲ್ಲೂ ಇಲ್ಲಿ ಸಮಪರ್ಮಕ ಕುಡಿಯುವ ನೀರು ಸಿಗುತ್ತಿಲ್ಲ. ಸ್ವಲ್ಪವೇ ಮಳೆ ಬಿದ್ದರೂ ಇಲ್ಲಿಂದ ಪಕ್ಕದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಹರಸಾಹಸ ಪಡಬೇಕಾಗುತ್ತದೆ… ಇದು ತಾಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ. ಅಂತರದಲ್ಲಿರುವ ರುದನೂರ ಗ್ರಾಮದ ಕಥೆ ವ್ಯಥೆ.

Advertisement

ಕಳೆದ ಬೇಸಿಗೆಯಿಂದ ತಾಲೂಕು ಆಡಳಿತ ಈ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಲಿತ್ತು. ಆದರೆ ಸಮರ್ಪಕ ನೀರು ಸರಬರಾಜು ಇಲ್ಲದೇ ಒಂದು ಕುಟುಂಬದವರು 5 ಕೊಡ ನೀರು ತುಂಬಿಕೊಳ್ಳುತ್ತಲಿದ್ದರು. ಜೂನ್‌ ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಿ ಮಳೆ ಬಿದ್ದರೆ ನೀರಿನ ಸಮಸ್ಯೆ ನೀಗಬಹುದು ಎನ್ನುವುದು ಎಲ್ಲರ ಆಶೆಯವಾಗಿತ್ತು. ಆದರೆ ಜೂನ್‌, ಜುಲೈ ಕಳೆದು ಆಗಸ್ಟ್‌ ತಿಂಗಳು ಬಂದರೂ ಇಲ್ಲಿ ಕುಡಿಯಲು ನೀರು ಸಿಗದಂತಗಾಗಿದೆ. ಅಂತರ್ಜಲ ಕುಸಿದ ಕಾರಣ ಗ್ರಾಮದಲ್ಲಿರುವ ತೆರೆದ ಬಾವಿಗಳು ಸಂಪೂರ್ಣ ಬತ್ತಿದ್ದು, ಗ್ರಾಮದ ಎಲ್ಲಾ ಕೊಳವೆಬಾವಿಗಳೂ ಕೈಕೊಟ್ಟಿವೆ. ಕಾರಣ ಗ್ರಾಮದ ಹೊರವಲಯದ ಖಾಸಗಿ ಹೊಲಗಳಲ್ಲಿನ ನೀರು ತರುವಂತಾಗಿದೆ. ಹೀಗಾಗಿ ವೃದ್ಧರೂ ಮತ್ತು ಮಕ್ಕಳು ಪ್ರತಿನಿತ್ಯ ನೀರಿಗಾಗಿ ಅಲೆದಾಡುವಂತಾಗಿದೆ ಎನ್ನುತ್ತಾರೆ ಗ್ರಾಮದ ನಿವಾಸಿ ರವೀಂದ್ರ ಪಾಟೀಲ. ಗ್ರಾಮದಲ್ಲಿ ಮೊದಲಿನಿಂದಲೂ ನೀರಿನ ಸಮಸ್ಯೆ ಕಾಡುತ್ತಿದೆ. ಆದರೆ ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ ನೀರಿನ ಸಮಸ್ಯೆ ಈ ವರ್ಷ ಮಳೆಗಾಲದಲ್ಲೂ ಕಾಡುತ್ತಿರುವುದು ಗ್ರಾಮಸ್ಥರಿಗೆ ದೊಡ್ಡ ಸಮಸ್ಯೆಯಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರುದನೂರ ಗ್ರಾಮದ ನೀರಿನ ಸಮಸ್ಯೆ ನಿವಾರಣೆಗೆ ಮತ್ತು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆಗೆ ಮುಂದಾಗಬೇಕು ಎನ್ನುವುದು ಗ್ರಾಮದ ನಿವಾಸಿ ಬಸವರಾಜ ಕಾರಬಾರಿ ಅವರ ಅಳಲು.

ರುದನೂರ ಗ್ರಾಮಕ್ಕೆ ಪಕ್ಕದ ಖಾನಾಪೂರ ರೈಲ್ವೆ ರಸ್ತೆಯಿಂದ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿ 2 ವರ್ಷಗಳಿಂದ ಕುಂಟುತ್ತಾ ಸಾಗಿದೆ. ಹೀಗಾಗಿ ಗ್ರಾಮಸ್ಥರು ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಿಗೆ ಸಂಚರಿಸಲು ಹರಸಾಹಸ ಪಡಬೇಕಾಗುತ್ತಿದೆ. ಸ್ವಲ್ಪವೇ ಮಳೆ ಬಿದ್ದರೂ ಗ್ರಾಮಸ್ಥರಿಗೆ ನಡುಗಡ್ಡೆಯಲ್ಲಿ ವಾಸವಾಗಿರುವಂತೆ ಅನುಭವವಾಗುತ್ತಲಿದೆ. ಬೇರೆ ಊರಿಂದ ಬರುವ ನೆಂಟರಿಷ್ಟರೂ ಗ್ರಾಮಕ್ಕೆ ಬರದಂತಾಗಿದೆ. ಕಾರಣ ತಕ್ಷಣವೇ ಈ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮದ ಪ್ರಮುಖ ನಾಗಯ್ನಾ ಸ್ವಾಮಿ ಒತ್ತಾಯಿಸಿದ್ದಾರೆ.

ನೀರು ಸರಬರಾಜು ಮಾಡುವ ಟ್ಯಾಂಕರ್‌ ಬಂದ್‌ ಮಾಡಿರುವುದರಿಂದ ತೊಂದರೆಯಾಗುತ್ತಿದೆ. ಆದರೂ ಕಷ್ಟಪಟ್ಟು ಪಕ್ಕದ ಹೊಲಗಳಿಂದ ಸೈಕಲ್ಗಳ ಮೇಲೆ ನೀರು ತರಬಹುದು. ಆದರೆ ಈ ಜಿಟಿಜಿಟಿ ಮಳೆಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಕೆಸರಿನಿಂದ ಕೂಡಿದೆ. ಸುಮಾರು 2 ವರ್ಷಗಳಿಂದ ಈ ರಸ್ತೆ ದುರಸ್ತಿ ಕುಂಟುತ್ತಾ ಸಾಗಿದೆ. ಹೀಗಾಗಿ ಪಕ್ಕದ ಹೊಲಗಳಿಂದಲೂ ನೀರು ತರಲು ಸಾಧ್ಯವಿಲ್ಲದಂತಾಗಿದೆ.• ಮಲ್ಲಿಕಾರ್ಜುನ ತಾಂಬೊಳೆ,ಗ್ರಾಮದ ಯುವಕ

 

Advertisement

•ಜಯರಾಜ ದಾಬಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next