Advertisement

ಮೋದೂರು ಕೆರೆ ಏರಿ ದುರಸ್ತಿಗೆ ರಸ್ತೆತಡೆ

05:49 AM Jan 02, 2019 | Team Udayavani |

ಹುಣಸೂರು: ತಾಲೂಕಿನ ಮೋದೂರು ಗ್ರಾಮದ ಕೆರೆ ಏರಿಗೆ ತಡೆ ಗೋಡೆಯಿಲ್ಲದೇ ಅಪಾಯವನ್ನು ಆಹ್ವಾನಿಸುತ್ತಿದ್ದು, ತ್ವರಿತಗತಿಯಲ್ಲಿ ತಡೆಗೋಡೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಸತ್ಯ ಫೌಂಡೇಷನ್‌ ಸಹಯೋಗದಲ್ಲಿ ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರು ಬಸ್‌ ತಡೆದು ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಪ್ರಮುಖ ರಸ್ತೆಗಳಲ್ಲೊಂದಾಗಿರುವ ಹುಣಸೂರು-ಮೋದೂರು- ಮಲಗನಕೆರೆ ಸಂಪರ್ಕ ರಸ್ತೆಯ ಮೋದೂರು ಗ್ರಾಮದ ಗೌರಿಕೆರೆ ಏರಿ ರಸ್ತೆ ಮೇಲೆ ರಸ್ತೆ ತಡೆದ ಮೋದೂರು, ಸಣ್ಣೇನಹಳ್ಳಿ, ಮೋದೂರು ಎಂ.ಕೊಪ್ಪಲು ಗ್ರಾಮಗಳ ನೂರಾರು ಮಂದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದುರಂತ: ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿ ಮಾತನಾಡಿದ ಸತ್ಯ ಫೌಂಡೇಷನ್‌ ಅಧ್ಯಕ್ಷ ಸತ್ಯಪ್ಪ, ಇತ್ತೀಚೆಗೆ ಸಂಭವಿಸಿದ ಮಂಡ್ಯ ಜಿಲ್ಲೆಯಲ್ಲಿ ನಾಲೆಗೆ ಬಸ್‌ ಬಿದ್ದು, 30 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ.

ಇಂತಹ ದುರಂತಗಳು ನಿರಂತರವಾಗಿ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಹುಣಸೂರು ತಾಲೂಕಿನ ಮೋದೂರು ಗ್ರಾಮದ ಗೌರಿಕೆರೆ ಏರಿ ರಸ್ತೆ ಕೂಡ ಅಪಾಯದ ಸ್ಥಿತಿಯಲ್ಲಿದೆ. ಒಂದು ವೇಳೆ ವಾಹನಗಳು ಆಯತಪ್ಪಿ ಕೆರೆಗೆ ಬಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಕೂಡಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಮನವಿಗೆ ಸ್ಪಂದನೆಯಿಲ್ಲ: ತಿಪ್ಲಾಪುರ, ಸಣ್ಣೇನಹಳ್ಳಿ, ಮೋದೂರು, ಮೋದೂರು ಎಂ. ಕೊಪ್ಪಲು, ಮೋದೂರು ಪಿ.ಕೊಪ್ಪಲು ಗ್ರಾಮಗಳ ಮೂಲಕ ಪಿರಿಯಾಪಟ್ಟಣ ಮತ್ತು ಸಾಲಿಗ್ರಾಮಕ್ಕೆ ಹೋಗುವ ಪ್ರಮುಖ ರಸ್ತೆ ಇದಾಗಿದದ್ದು, ನಿತ್ಯ 20 ಬಸ್‌ಗಳು ಹಾಗೂ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌, ಖಾಸಗಿ ಶಾಲಾ ವಾಹನಗಳು, ಆಟೋಗಳು, ಎತ್ತಿನ ಗಾಡಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ವಾಹನಗಳು ಓಡಾಡುತ್ತಿವೆ.

Advertisement

ಮೋದೂರು ಗೌರಿಕೆರೆ ಕೆರೆ ಏರಿ ಮತ್ತು ರಸ್ತೆ ದುಸ್ಥಿತಿಗೆ ತಲುಪಿದೆ. ರಸ್ತೆಯ ಒಂದು ಬದಿ ಕೆರೆಯಾದರೆ ಮತ್ತೂಂದು ಬದಿ 50 ಅಡಿ ಆಳದಲ್ಲಿ ಕೃಷಿ ಭೂಮಿಗಳಿದ್ದು, ಏರಿರಸ್ತೆ ಸುಮಾರು 1 ಕಿ.ಮೀ. ಉದ್ದವಿದ್ದು, ಮಾರ್ಗದಲ್ಲಿ ಗುಂಡಿ ಬಿದ್ದು, ಡಾಂಬರು ಕಿತ್ತು ಹೋಗಿದ್ದು,  ಏರಿಯ ಮೇಲೆ ವಾಹನಗಳನ್ನು ಚಾಲನೆ ಮಾಡುವಾಗ ಚಾಲಕರು ಕೈಯಲ್ಲಿ ಜೀವ ಹಿಡಿದುಕೊಂಡು ಸಾಗುವ ಪರಿಸ್ಥಿತಿ ಇದೆ.

ಈ ಮಾರ್ಗವಾಗಿ ಶಾಲಾ ಮಕ್ಕಳು ಪ್ರತಿದಿನ ನಗರದ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ರಸ್ತೆ ದುರಸ್ತಿ ಸಂಬಂಧ  ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತ್ತಿದ್ದು, ಕ‌ೂಡಲೇ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೆರೆ ಏರಿ ಮತ್ತು ರಸ್ತೆಯನ್ನು ದುರಸ್ತಿಗೊಳಿಸಿ ಎರಡೂ ಕಡೆ ತಡೆಗೋಡೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಪ್ರತಿಭಟನಾನಿರತ ಗ್ರಾಮಸ್ಥರು ಒತ್ತಾಯಿಸಿದರು.

ಉಗ್ರ ಹೋರಾಟ: ಹುಣಸೂರು ತಾಲೂಕಿನಲ್ಲಿ ಇಂತಹ ಅವ್ಯವಸ್ಥೆಯಿಂದ ಕೂಡಿರುವ ರಸ್ತೆಗಳನ್ನು ಗುರುತಿಸಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಎಎಸ್ಸೆ„ ಲಿಂಗರಾಜೇ ಅರಸ್‌, ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ರಾಕೇಶ್‌ ರಾವ್‌, ಯ. ಪುಟ್ಟಣ್ಣಯ್ಯ, ಯ.ಸಣ್ಣನಿಂಗೇಗೌಡ, ಯ. ಬಸವನಾಯ್ಕ, ಆಟೋರಾಮು, ಮಲ್ಲೇಶ್‌, ದೇವರಾಜು, ಗಣೇಶ್‌, ಮೂರ್ತಿ, ಸಿದ್ದರಾಮಪ್ಪ, ಮಹದೇವಪ್ಪ, ರವಿನಾಯ್ಕ, ಗಂಗಾಧರ್‌, ಸೋಮಾಚಾರಿ, ಬಸವನಾಯ್ಕ, ಪುರುಷೋತ್ತಮ್‌ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next