ಸಾಗರ: ಪ್ರತಿಯೊಂದಕ್ಕೂ ಸರ್ಕಾರದ ಅನುದಾನಕ್ಕೆ ಕಾಯುತ್ತ ಕುಳಿತುಕೊಳ್ಳುವುದಕ್ಕಿಂತ ಕೈಯಲ್ಲಿ ಇರುವ ಹಣವನ್ನು ಸಮರ್ಥವಾಗಿ ಬಳಸಿ ಊರು ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ತಾಲೂಕಿನ ತಾಳಗುಪ್ಪ ಸಮೀಪದ ಕಡವಿನಮನೆಯ ಲಕ್ಷ್ಮೀಶ ಶರ್ಮಾ ವಿಶೇಷ ದೃಷ್ಟಾಂತವಾಗಿದ್ದಾರೆ.
ಈ ಸಾಫ್ಟ್‌ವೇರ್ ಇಂಜಿನೀಯರ್ ತಮ್ಮ ಜೇಬಿನಿಂದಲೇ 50 ಸಾವಿರ ರೂ. ಖರ್ಚು ಮಾಡಿ ಊರಿನ ರಸ್ತೆಯನ್ನು ಸಂಚಾರ ಯೋಗ ಮಾಡಿರುವುದು ಈಗ ಎಲ್ಲರ ಗಮನ ಸೆಳೆಯುತ್ತಿದೆ.
ತಾಳಗುಪ್ಪ ಹೋಬಳಿ ತಲವಾಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಜಿರೆ ಗ್ರಾಮ ಕಡವಿನಮನೆ. ಇದು ಐದು ಮನೆಗಳಿರುವ ಪುಟ್ಟ ಹಳ್ಳಿ. ಜನಸಂಖ್ಯೆ ಕಡಿಮೆ ಇರುವ ಕಾರಣ ಇಲ್ಲಿಗೆ ಸರ್ಕಾರದ ಸೌಲಭ್ಯ ಸಿಗುವುದು ದುರ್ಲಭವಾಗಿದೆ. ಮತದಾರರೇ ಇಲ್ಲ ಎಂದ ಮೇಲೆ ರಾಜಕಾರಣಿಗಳು ಈ ಊರಿನ ಮೇಲೆ ತಾತ್ಸಾರ ಮೂಡುವುದು ಸಹಜ!
ತಾಳಗುಪ್ಪ ಕಾರ್ಗಲ್ ಮುಖ್ಯ ರಸ್ತೆಯಿಂದ ಈ ಊರಿಗೆ 1.1 ಕಿಮಿ ದೂರದ ರಸ್ತೆ ಓಡಾಡಲು ತುಂಬ ಕಷ್ಟಸಾಧ್ಯವಾಗಿತ್ತು. ಗ್ರಾಪಂಗೆ ಮೌಖಿಕವಾಗಿ ಹೇಳಿದಾಗ ದುರಸ್ತಿ ಮಾಡಿಸಲು ಅಷ್ಟೊಂದು ಹಣ ಇಲ್ಲ ಎಂಬ ಉತ್ತರ ಸಿಕ್ಕಿತ್ತು. ಸೊರಬದ ಶಾಸಕ ಕುಮಾರ್ ಬಂಗಾರಪ್ಪ ಅವರ ಬಳಿ ಅಹವಾಲು ಸಲ್ಲಿಸಿದರೆ ಕ್ಷೇತ್ರದ ದೊಡ್ಡ ಊರಿನ ರಸ್ತೆಗಳೇ ಇನ್ನು ಬಾಕಿ ಇದೆ. ಮುಂದೆ ಮಾಡಿಸೋಣ ಎಂಬ ಉತ್ತರ ಸಿಕ್ಕಿತ್ತಂತೆ.
ನಿತ್ಯ ಈ ಐದು ಮನೆಗಳ ಪುಟ್ಟ ಊರಿಗೆ ಓಡಾಡುವುದು ದುಸ್ತರ. ಊರವರು ಈವರೆಗೆ ತಮ್ಮ ಪ್ರಯತ್ನಗಳನ್ನು ವಿವರಿಸಿದ ಮೇಲೆ ಲಕ್ಷ್ಮೀಶ ತಡ ಮಾಡಲಿಲ್ಲ, ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ಮಾಡಿಸುವ ತೀರ್ಮಾನಕ್ಕೆ ಬಂದು ಕಾರ್ಯರೂಪಕ್ಕೆ ಇಳಿಸಿದ್ದಾರೆ. ಸುಮಾರು 50 ಸಾವಿರ ರೂಪಾಯಿಗಳ ವೆಚ್ಚದಲ್ಲಿ ರಸ್ತೆಗೆ ಮಣ್ಣು ಹಾಕಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿರುವುದು ಹೆಮ್ಮೆಯ ಸಂಗತಿ. ಇವರ ಕೆಲಸವನ್ನು ಸಾರ್ವಜನಿಕರು ಅಭಿನಂಧಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿಯ ಗೆಲುವು ಜನಾದೇಶದ ನಿಜವಾದ ಪ್ರತಿಬಿಂಬವಲ್ಲ: ಮಮತಾ ಬ್ಯಾನರ್ಜಿ
ಎಲ್ಲವೂ ಸರ್ಕಾರವೇ ಮಾಡಬೇಕು ಅಂತ ಅಂದುಕೊಳ್ಳದೆ, ಆರ್ಥಿಕ ತಾಕತ್ತಿದ್ದವರು ಹೀಗೆ ತಮ್ಮ ಸ್ವಂತ ಊರಿನ ಕೆಲಸಕ್ಕೆ ಕೈ ಜೋಡಿಸಿದರೆ ಎಲ್ಲರಿಗೂ ಅನುಕೂಲ. ಈ ರಸ್ತೆ ಮಾಡಿಸಿದ ಕೆಲಸದಲ್ಲಿ ನನ್ನ ಊರು ಎಂಬ ಸ್ವಾರ್ಥವೂ ಇದೆ. ಸರ್ಕಾರಗಳು ಎಂದರೆ ನಾವು ನಮ್ಮದು ಎಂಬ ಅಭಿಪ್ರಾಯವಿರಬೇಕು. ಪ್ರಸಕ್ತ ವರ್ಷ ಕೊಂಚ ಟ್ಯಾಕ್ಸ್ ಹೆಚ್ಚು ಕಟ್ಟಿದ್ದೇನೆ ಅಂದುಕೊಂಡರೆ ಎಲ್ಲವೂ ಖುಷಿ ಎಂದು ಲಕ್ಷ್ಮೀಶ ಪ್ರತಿಕ್ರಿಯಿಸುತ್ತಾರೆ.
ಗ್ರಾಮ ಪಂಚಾಯ್ತಿಯಲ್ಲಿ ಆಗಬೇಕಾದ ಕೆಲಸ ಬಹಳ ಇದೆ. ರಸ್ತೆಗಳನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಕಷ್ಟು ಮಾಡಿಸಿದ್ದೇವೆ. ವಿಶಾಲ ವ್ಯಾಪ್ತಿಯ ಗ್ರಾಪಂ ಆದ್ದರಿಂದ ಕಷ್ಟವಾಗಿದೆ. ಅನುದಾನ ಕೊರತೆಯೂ ಇದೆ.
– ಕಲ್ಪನಾ ಸತೀಶ್, ಅಧ್ಯಕ್ಷರು, ಗ್ರಾಪಂ ತಲವಾಟ