Advertisement

ಡಾಮರೇ ಕಾಣದ ಮಲ್ಲಾರ್‌-ಮುಗ್ಗೇರ್ಕಳ- ಚೌಕಿ ಸಂಪರ್ಕ ರಸ್ತೆ !

08:58 PM Sep 22, 2019 | Team Udayavani |

ಬಜಗೋಳಿ (ಪಳ್ಳಿ ): ಮಾಳ ಗ್ರಾ.ಪಂ. ವ್ಯಾಪ್ತಿಯ ಮಲ್ಲಾರ್‌ ಮುಗ್ಗೇರ್ಕಳ -ಚೌಕಿ ಸಂಪರ್ಕ ರಸ್ತೆಯು ಡಾಮರು ಕಾಣದೇ ಸಂಚಾರ ದುಸ್ತರವಾಗಿದೆ. ಸುಮಾರು 4.5 ಕಿ.ಮೀ. ಉದ್ದದ ಈ ರಸ್ತೆಯ ಪ್ರಾರಂಭದಲ್ಲಿ 100 ಮೀ. ಕಾಂಕ್ರೀಟಿಕರಣಗೊಂಡಿದ್ದರೂ ಉಳಿದದ್ದು ಕಚ್ಚಾ ರಸ್ತೆ.

Advertisement

ಮಾಳ, ಮಲ್ಲಾರ್‌ ಹಾಗೂ ಚೌಕಿ ಪ್ರದೇಶಗಳಿಗೆ ತೆರಳಲು ಸ್ಥಳೀಯರು ಈ ರಸ್ತೆಯನ್ನೇ ಅವಲಂಭಿಸಿದ್ದು, ರಸ್ತೆ ಹೊಂಡಗುಂಡಿಗಳಿಂದ ಕೂಡಿರುವ ಕಾರಣ ಸಂಚಾರ ಬಲು ಕಷ್ಟಕರ ಎಂಬುದು ಸ್ಥಳೀಯರ ಅಳಲು.

ಬಾಡಿಗೆ ವಾಹನಗಳೂ ಬರುತ್ತಿಲ್ಲ!
ಈ ಪರಿಸರದಲ್ಲಿ ಪ.ಜಾತಿ ಮತ್ತು ಪ.ಪಂಗಡಗಳ ಮನೆಗಳು ಸೇರಿ ಸುಮಾರು 100ಕ್ಕೂ ಅಧಿಕ ಮನೆಗಳಿವೆ. ಕನೆಗುಂಡಿ, ಮುಗ್ಗೇರ್ಕಲ, ಸುಂಕದಕಟ್ಟೆ ಅಸುಪಾಸಿನ ಸ್ಥಳೀಯರು ದಿನ ನಿತ್ಯದ ವ್ಯವಹಾರಕ್ಕೆ ಈ ರಸ್ತೆ ಅತ್ಯಗತ್ಯ. ಆದರೆ ರಸ್ತೆಯ ದುರಾವಸ್ಥೆಯಿಂದಾಗಿ ಬಾಡಿಗೆ ವಾಹನಗಳೂ ಬರಲು ಹಿಂದೇಟುಹಾಕುತ್ತಿವೆ. ಪಡಿತರ ಕೇಂದ್ರ, ಗ್ರಾ.ಪಂ. ಕಚೇರಿ ಹಾಗೂ ಪ್ರಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕೆಂದರೂ ಈ ರಸ್ತೆಯ ಮೂಲಕವೇ ತೆರಳಬೇಕು. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸಾಗಿಸಲು ಗ್ರಾಮಸ್ಥರು ಹರಸಾಹಸ ಪಡಬೇಕು ಎಂಬುದು ಗ್ರಾಮಸ್ಥರ ಆರೋಪ.

ಮಳೆಗಾಲದಲ್ಲಿ ಕೆಸರುಮಯ
ಈ ಭಾಗದಲ್ಲಿ ಮುಗ್ಗೇರ್ಕಳ ದೈವಸ್ಥಾನವೂ ಇದ್ದು ನಿರಂತರ ಮಳೆ ಸುರಿದಲ್ಲಿ ರಸ್ತೆ ಕೆಸರಿನಿಂದ ಆವೃತವಾಗುವ ಕಾರಣ ಸಂಚಾರದ ವೇಳೆ ಹಲವು ವಾಹನಗಳು ಹೂತುಹೋದ ಉದಾಹರಣೆಗಳೂ ಇವೆ. ಸಮಸ್ಯೆ ಕುರಿತು ಜನಪ್ರತಿನಿಧಿಗಳ ಗಮನ ಸೆಳೆದ ಪರಿಣಾಮ ಕಳೆದ ಬಾರಿ 50, 000 ರೂ. ವೆಚ್ಚದಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಿ ದುರಸ್ತಿಗೊಳಿಸಲಾಗಿತ್ತಾದರೂ ಈ ಬಾರಿಯ ಮಳೆಗೆ ರಸ್ತೆ ಮತ್ತೆ ಕೆಸರಿನಿಂದ ಆವೃತ್ತವಾಗಿದೆ ಎನ್ನುತ್ತಾರೆ ಸ್ಥಳೀಯರು.

ರಸ್ತೆ ದುರಸ್ತಿ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಈ ವರೆಗೆ ಬೇಡಿಕೆ ಈಡೇರಿಲ್ಲ. ಇನ್ನಾದರೂ ರಸ್ತೆ ಡಾಮರೀಕರಣಗೊಳಿಸಿ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

ಸರ್ವೇ ಕಾರ್ಯ ಮುಗಿದಿದೆ
ಈ ರಸ್ತೆಯ ಸರ್ವೇಕಾರ್ಯ ಇತ್ತೀಚೆಗೆ ಮುಗಿದಿದ್ದು, ಮುಂದಿನ ದಿನಗಳಲ್ಲಿ ಟೆಂಡರ್‌ ಪ್ರಕ್ರಿಯೆ ನಡೆದ ಬಳಿಕ ರಸ್ತೆಕಾಮಾಗಾರಿ ಕೈಗೊಳ್ಳಲಾಗುವುದು.
-ಉದಯ ಎಸ್‌. ಕೋಟ್ಯಾನ್‌,ಜಿ.ಪಂ. ಸದಸ್ಯರು

ಪ್ರಸ್ತಾವನೆ ಸಲ್ಲಿಕೆ
ಮಲ್ಲಾರ್‌-ಮುಗ್ಗೇರ್ಕಳ- ಚೌಕಿ ಸಂಪರ್ಕ ರಸ್ತೆ ಡಾಮರೀಕರಣಕ್ಕೆ ಪಂಚಾಯತ್‌ನಿಂದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಡಾಮರೀಕರಣ ಕಾಮಗಾರಿ ನಡೆಸಲಾಗುವುದು.
-ಅಜಿತ್‌ ಹೆಗ್ಡೆ,ಮಾಳ ಗ್ರಾ.ಪಂ.ಅಧ್ಯಕ್ಷರು

ಶಾಲಾ ವಾಹನವೂ ಬರುತ್ತಿಲ್ಲ
ರಸ್ತೆ ದುರ‌ವಸ್ಥೆಯಿಂದಾಗಿ ಶಾಲಾ ಮಕ್ಕಳ ವಾಹನ ಬರದೆ ಮಕ್ಕಳು ನಡೆದುಕೊಂಡೆ ಬರುವಂತಾಗಿದೆ. ಈ ನಿಟ್ಟಿನಲ್ಲಿ ಶೀಘ್ರವಾಗಿ ಡಾಮರೀಕರಣಗೊಂಡಲ್ಲಿ ಜನರ ಬಹುಕಾಲದ ಬೇಡಿಕೆ ಇಡೇರಿದಂತಾಗುತ್ತದೆ.
– ಶಂಕರ್‌,ಸ್ಥಳೀಯರು

- ಸಂದೇಶ್‌ಕುಮಾರ್‌ ನಿಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next