Advertisement

ಪ್ರತಿಭಟನೆ ಹೆಸರಲ್ಲಿ ದೀರ್ಘಾವಧಿವರೆಗೆ ರಸ್ತೆ ತಡೆ ಸಲ್ಲದು

12:17 AM Oct 23, 2021 | Team Udayavani |

ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಎರಡು ವರ್ಷಗಳಿಂದ ದಿಲ್ಲಿ ಗಡಿಯಲ್ಲಿ ಪಂಜಾಬ್‌, ಹರಿಯಾಣ ಮತ್ತು ಉತ್ತರ ಪ್ರದೇಶ ರೈತರಿಂದ ಪ್ರತಿಭಟನೆ, ರಸ್ತೆ ತಡೆ ನಡೆಯುತ್ತಲೇ ಇದೆ. ಇದರಿಂದಾಗಿ ಈ ಭಾಗದಲ್ಲಿ ಜನರ ಓಡಾಟಕ್ಕೆ ಅಡ್ಡಿಯುಂಟಾಗಿದ್ದು, ಟ್ರಾಫಿಕ್‌ ದಟ್ಟಣೆಯಲ್ಲೇ ಜೀವನ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಕೆಲವೊಂದು ಅರ್ಜಿಗಳು ಸಲ್ಲಿಕೆಯಾಗಿದ್ದು, ದೀರ್ಘಾವಧಿವರೆಗೆ ರಸ್ತೆ ತಡೆ ನಡೆಸುವುದು ಸಾಧುವೇ ಎಂಬ ಪ್ರಶ್ನೆಯೂ ಉದ್ಭವವಾಗಿದೆ.

Advertisement

ಈ ಪ್ರಶ್ನೆಗಳಿಗೆ ಸುಪ್ರೀಂ ಕೋರ್ಟ್‌ ಗುರುವಾರ ಸುದೀರ್ಘ‌ ಉತ್ತರ ನೀಡಿದೆ. ಪ್ರತಿಭಟನೆ ರೈತರ ಹಕ್ಕು, ಇದನ್ನು ನಾವು ಬೇಡ ಎಂದು ಹೇಳಲಾಗುವುದಿಲ್ಲ. ಆದರೆ ಪ್ರತಿಭಟನೆ ಹೆಸರಲ್ಲಿ ಸುದೀರ್ಘ‌ ಅವಧಿವರೆಗೆ ರಸ್ತೆ ತಡೆ ನಡೆಸುವುದು ಸರಿಯಾದ ಕ್ರಮವಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಷ್ಟೇ ಅಲ್ಲ, ಈ ವಿಚಾರದಲ್ಲಿ ಅಂತಿಮವಾದ ಉತ್ತರವೊಂದನ್ನು ಕಂಡುಕೊಳ್ಳಬೇಕಿದೆ. ನಾವು ಪ್ರತಿಭಟನೆಯ ವಿರೋಧಿಗಳಲ್ಲ. ಆದರೆ ಎಷ್ಟು ದಿನಗಳ ವರೆಗೆ ಈ ರೀತಿ ರಸ್ತೆ ತಡೆ ನಡೆಸುತ್ತೀರಿ ಎಂಬ ಪ್ರಶ್ನೆಯನ್ನೂ ಹಾಕಿದೆ.

ಸುಪ್ರೀಂ ಕೋರ್ಟ್‌ನ ವಿಚಾರಣೆ ವೇಳೆ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ. ಈ ಪ್ರತಿಭಟನೆಯಿಂದಾಗಿ ದಿನನಿತ್ಯವೂ ಜನರು ಎದುರಿಸುತ್ತಿರುವ ಅಡ್ಡಿಗಳ ಬಗ್ಗೆ ಪೀಠದ ಮುಂದೆ ವಿಷದಪಡಿಸಲಾಗಿದೆ.

ರೈತರ ಪ್ರತಿಭಟನೆ ಸಂಬಂಧ ಸುಪ್ರೀಂ ಕೋರ್ಟ್‌ ಇದೇ ಮೊದಲ ಬಾರಿ ಇಂಥ ಅಭಿಪ್ರಾಯ ಹೇಳುತ್ತಿಲ್ಲ. ಈ ಹಿಂದೆ ಅಂದರೆ ಅ.4ರಂದು, ಕೃಷಿ ಕಾಯ್ದೆಗಳಿಗೆ ನಾವೇ ತಡೆ ನೀಡಿದ ಮೇಲೆ ಯಾವ ಕಾರಣಕ್ಕಾಗಿ ನೀವು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪ್ರಶ್ನೆ ಮಾಡಿತ್ತು. ಆದರೆ  ಈ ಬಗ್ಗೆ ಬೇರೊಂದು ಪೀಠ ವಿಚಾರಣೆ ನಡೆಸಿದ್ದು, ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಯ ಹಾನಿ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿತ್ತು. ಆಗ, ರೈತ ಸಂಘಟನೆಗಳ ಪರ ವಕಾಲತ್ತು ವಹಿಸಿದ್ದ ವಕೀಲರು ಬೇರೊಂದು ಕಾರಣವನ್ನು ಹೇಳಿ, ಪ್ರತಿಭಟನೆ ಮುಂದುವರಿಸುತ್ತಿರುವ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದರು.

ಇದನ್ನೂ ಓದಿ:ಟಿ20 ವಿಶ್ವಕಪ್‌: ಸೂಪರ್‌-12 ಹಂತಕ್ಕೆ ನಮೀಬಿಯಾ

Advertisement

ಆದರೆ, ಗುರುವಾರದ ವಿಚಾರಣೆಯನ್ನು ಮಗದೊಂದು ಪೀಠ ನಡೆಸಿದೆ. ಈ ಪೀಠ, ರೈತರ ವಾದಕ್ಕೆ ಪೂರಕವಾಗಿಯೇ ಕೆಲವೊಂದು ಅಂಶಗಳನ್ನು ಹೊರಹಾಕಿದೆ. ಅಂದರೆ, ಕೋರ್ಟ್‌ ಮುಂದೆ ಕಾಯ್ದೆಗಳ ವಿಷಯವಿದ್ದರೂ ಪ್ರತಿಭಟನೆ ನಡೆಸಲು ಯಾವುದೇ ಅಡ್ಡಿ ಇಲ್ಲ. ಆದರೆ ಪ್ರತಿಭಟನೆ ಬೇರೆಯವರಿಗೆ ಅಡ್ಡಿಯುಂಟು ಮಾಡಬಾರದಷ್ಟೇ ಎಂದಿದೆ.

ಈ ಎಲ್ಲ ಅಂಶಗಳನ್ನು ಗಮನಿಸಿದ ಮೇಲೆ ಒಂದು ವಿಷಯವಂತೂ ಸ್ಪಷ್ಟವಾಗುತ್ತಿದೆ. ಅಂದರೆ, ಸಂವಿಧಾನವೇ ಹೇಳಿದ ಹಾಗೆ, ಪ್ರತಿಭಟನೆ ಎಲ್ಲರ ಹಕ್ಕು ಹೌದು. ಆದರೆ ಈ ಹಕ್ಕುಗಳಿವೆ ಎಂಬ ಕಾರಣಕ್ಕೆ ಬೇರೊಬ್ಬರ ಹಕ್ಕುಗಳನ್ನು ಕಸಿದುಕೊಳ್ಳುವುದು ಸರಿಯಾದ ಕ್ರಮವಲ್ಲ. ಹೀಗಾಗಿ ಸುಪ್ರೀಂ ಕೋರ್ಟ್‌ನ ಅಭಿಪ್ರಾಯಕ್ಕೆ ಬೆಲೆ ಕೊಟ್ಟು ರೈತ ಸಂಘಟನೆಗಳು ರಸ್ತೆ ತಡೆ ಮಾಡುವುದನ್ನು ಬಿಟ್ಟು ಬೇರೊಂದು ಕಡೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಬೇಕು. ಹಾಗೆಯೇ ಕೇಂದ್ರ ಸರಕಾರವೂ ರೈತರ ಪ್ರತಿಭಟನೆಗೆ ಸೂಕ್ತವಾದ ಮತ್ತು ಅವರು ಕೇಳಿದ ಮೈದಾನಗಳನ್ನು ನೀಡುವ ವ್ಯವಸ್ಥೆ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next