ಮರಿಯಮ್ಮನಹಳ್ಳಿ: ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಸಂಪೂರ್ಣವಾಗಿ ನಿದ್ದೆ ಮಂಪರಿಗೆ ಜಾರಿಹೋಗಿದೆ. ಮೀಸಲಾತಿ ಬದಲಾವಣೆಗೆ ಸಂಬಂಧಿಸಿದಂತೆ ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಪಪಂ ಸದಸ್ಯರ ಯಾವ ಸಭೆಗಳೂ ನಡೆಯದೇ ಇಲ್ಲಿನ ಅಧಿಕಾರಿಗಳು ಕುಂಭಕರ್ಣ ನಿದ್ರೆಗೆ ಜಾರಿದ್ದಾರೆ.
ಪಟ್ಟಣದ ಆರನೇ ವಾರ್ಡಿನಲ್ಲಿರುವ ಗುಂಡಾ ರಸ್ತೆಯಲ್ಲಿ ಚರಂಡಿನೀರು ನಿಂತು ಗುಂಡಿಯಂತಾಗಿದೆ. ಈ ಚರಂಡಿಯನೀರಿನಿಂದಾಗಿ ವಾರ್ಡಿನ ನಾಗರಿಕರು ಸಾಕಷ್ಟು ಸಮಸ್ಯೆಗಳಿಗೆ ಒಳಗಾಗಿದ್ದರೂ ಅಧಿಕಾರಿಗಳು ಯಾವ ಕ್ರಮಗಳನ್ನೂ ಕೈಗೊಳ್ಳದೇ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕರಾಗಲಿ, ಮುಖ್ಯ ಅಧಿಕಾರಿಗಳಾಗಲಿ ಇಂಥ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆನ್ನುತ್ತಾರೆ ಈ ವಾರ್ಡಿನ ನಾಗರಿಕರು.
ಸಾರ್ವಜನಿಕರು, ದನಕರುಗಳೂ ಇದೇ ಗುಂಡಿಯಲ್ಲಿಯೇ ಇಳಿದು ನಡೆದುಕೊಂಡು ಹೋಗಬೇಕಾದ ದುಸ್ಥಿತಿ ಬಂದೊದಗಿದೆ. ಎಷ್ಟೋ ಬಾರಿ ಜನರು ಈ ಗುಂಡಿಯಲ್ಲಿ ಬಿದ್ದು ಗಾಯಗೊಂಡ ಘಟನೆಗಳೂ ಜರುಗಿವೆ. ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರೂ ಸೂಕ್ತ ಕ್ರಮ ಕೈಗೊಳ್ಳಬೇಕಾದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ ಎಂದು ಈ ವಾರ್ಡಿನ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಕಷ್ಟುಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವ ಕ್ರಮವನ್ನು ಕೈಗೊಳ್ಳದೇ ಹಾಗೇ ಇದ್ದಾರೆ. ಸದಸ್ಯರ ಮಾತಿಗೂ ಅಧಿಕಾರಿಗಳು ಬೆಲೆನೀಡುತ್ತಿಲ್ಲವೆಂದರೆ ಇನ್ನು ಜನಸಾಮಾನ್ಯರ ಪಾಡೇನು ಹೇಳಿ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಈ ವಾರ್ಡಿನ ಮಹಿಳಾ ಕೌನ್ಸಿಲರ್ ಹುಲಿಗೀಬಾಯಿ ರುದ್ರೇಶ್ ನಾಯ್ಕ.
-ಎಂ. ಸೋಮೇಶ್ ಉಪ್ಪಾರ್