Advertisement

ಸಂಚಾರ ಪೊಲೀಸರಿಂದ ರಸ್ತೆ-ಗುಂಡಿಗೆ ಮುಕ್ತಿ

12:45 AM May 01, 2019 | Lakshmi GovindaRaj |

ಬೆಂಗಳೂರು: ಸಂಚಾರಕ್ಕೆ ಸಂಚಕಾರ ತಂದೊಡ್ಡಿರುವ ನಗರದ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಹಲವು ಬಾರಿ ಮನವಿ ಮಾಡಿದರೂ ಬಿಬಿಎಂಪಿ ಸ್ಪಂದಿಸದ ಹಿನ್ನೆಲೆಯಲ್ಲಿ ಸ್ವತಃ ಸಂಚಾರ ಪೊಲೀಸರು, ಬಾಂಡ್ಲಿ-ಕರಣೆ ಹಿಡಿದು ಗುಂಡಿ ಮುಚ್ಚಲು ಮುಂದಾಗಿದ್ದಾರೆ.

Advertisement

ತಮ್ಮ ವ್ಯಾಪ್ತಿಯಲ್ಲಿ ಯಾವ್ಯಾವ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ ಎಂಬುದನ್ನು ಸಂಚಾರ ಪೊಲೀಸರು ಪತ್ತೆ ಮಾಡಿ, ಫೋಟೋ ಹಿಡಿದು ತಮ್ಮ ಮೇಲಧಿಕಾರಿಗಳಿಗೆ ಕಳುಹಿಸಬೇಕು. ಅಲ್ಲದೆ, ಅದನ್ನು ತ್ವರಿತ ಗತಿಯಲ್ಲಿ ದುರಸ್ತಿಗೊಳಿಸಬೇಕು ಎಂಬ ಆದೇಶ ಹೊರಬಿದ್ದಿದೆ.

ಹೀಗಾಗಿ ಈ ಮೊದಲು ಹೆಲ್ಮೆಟ್‌ ಧರಿಸದಿರುವುದು, ಸಿಗ್ನಲ್‌ ಜಂಪಿಂಗ್‌ನಂತಹ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮೇಲೆ ನಿಗಾ ಇಡುತ್ತಿದ್ದ ಸಂಚಾರ ಪೊಲೀಸರು, ಇನ್ಮುಂದೆ ರಸ್ತೆಗುಂಡಿಗಳ ಮೇಲೂ ಕಣ್ಗಾವಲು ಇಡಲಿದ್ದಾರೆ.

ಈ ಸಂಬಂಧ ಈಗಾಗಲೇ ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಂಚಾರ) ಹರಿಶೇಖರನ್‌ ಆದೇಶ ಹೊರಡಿಸಿ, ನಗರದ ಮೂವರು ಸಂಚಾರ ಡಿಸಿಪಿಗಳಿಗೆ ಸೂಚಿಸಿದ್ದಾರೆ. ಅದರಂತೆ 44 ಸಂಚಾರ ಪೊಲೀಸ್‌ ಠಾಣಾ ಸಿಬ್ಬಂದಿ ಟ್ರಾಫಿಕ್‌ ನಿರ್ವಹಣೆ ಜತೆಗೆ ರಸ್ತೆ ಗುಂಡಿಗಳನ್ನು ಪತ್ತೆಹಚ್ಚಿ, ಅವುಗಳ ಫೋಟೋ ಅಥವಾ ವಿಡಿಯೋ ಹಾಗೂ ನಿಗದಿತ ಸ್ಥಳವನ್ನು ಉಲ್ಲೇಖೀಸಿ “ಸಂಚಾರ ನಿರ್ವಹಣಾ ಕೇಂದ್ರ'(ಟಿಎಂಸಿ)ಕ್ಕೆ ಕಳುಹಿಸಿಕೊಡಬೇಕು.

ಅಂತಿಮವಾಗಿ ಈ ಪಟ್ಟಿಯನ್ನು ಸಿದ್ಧಪಡಿಸಿ ಸಂಬಂಧಿಸಿದ ಬಿಬಿಎಂಪಿ ಅಧಿಕಾರಿಗಳಿಗೆ ಕಳುಹಿಸಿಕೊಟ್ಟು, ಕೂಡಲೇ ಗುಂಡಿ ಮುಚ್ಚುಲು ಕ್ರಮ ವಹಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸರು ತಿಳಿಸಿದ್ದಾರೆ.

Advertisement

ತಾತ್ಕಾಲಿಕವಾಗಿ ಗುಂಡಿ ಮುಚ್ಚಿ: 44 ಸಂಚಾರ ಠಾಣಾಧಿಕಾರಿಗಳು ತಮ್ಮ ವ್ಯಾಪ್ತಿಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆಯೂ ಹರಿಶೇಖರನ್‌ ಸೂಚಿಸಿದ್ದಾರೆ. ಇತ್ತೀಚೆಗೆ ನಗರದಲ್ಲಿ ರಸ್ತೆ ಗುಂಡಿಗಳಿಂದ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಥವಾ ಸ್ಥಳೀಯ ಸಂಸ್ಥೆಗಳು ಕಾಮಗಾರಿ ಕೈಗೊಳ್ಳುವವರೆಗೂ ಕಾಯುವ ಅಗತ್ಯವಿಲ್ಲ ತಾತ್ಕಾಲಿಕವಾಗಿ ತಾವುಗಳೇ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಿ ಎಂದು ಆದೇಶಿಸಿದ್ದಾರೆ.

ಮಣ್ಣು ಅಥವಾ ಕಾಂಕ್ರೀಟ್‌: ಸಂಚಾರ ಪೊಲೀಸರು, ತಮ್ಮ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ಗುತ್ತಿಗೆದಾರರಿಗೆ ಮನವಿ ಮಾಡಿದ್ದು, ಕಟ್ಟಡದ ಪಾಯ ಅಥವಾ ನೆಲಸಮಗೊಳಿಸಿದ ಕಟ್ಟಡದ ಅವಶೇಷಗಳನ್ನು ನಿರ್ಜನ ಪ್ರದೇಶಕ್ಕೆ ಹಾಕುವ ಬದಲು ಗುಂಡಿಗಳಿಗೆ ಹಾಕಿ ತಾತ್ಕಾಲಿಕವಾಗಿ ಮುಚ್ಚಲು ನೆರವಾಗುವಂತೆ ಕೋರಿಕೊಂಡಿದ್ದಾರೆ. ಸಿಮೆಂಟ್‌ ಮಿಕ್ಸರ್‌ ಲಾರಿಗಳಲ್ಲಿ ಕೊನೆಯಲ್ಲಿ ಉಳಿಯುವ ಕಾಂಕ್ರೀಟ್‌ಗಳನ್ನು ಸಹ ಗುಂಡಿಗಳಿಗೆ ಹಾಕಿ ಮುಚ್ಚುತ್ತಿದ್ದಾರೆ.

350ಕ್ಕೂ ಹೆಚ್ಚು ಗುಂಡಿಗಳು ಪತ್ತೆ: ಗುಂಡಿಗಳ ಪತ್ತೆ ಕಾರ್ಯದಲ್ಲಿ ತೊಡಗಿರುವ ಸಂಚಾರ ಪೊಲೀಸರು ಇದುವರೆಗೂ ಸುಮಾರು 350ಕ್ಕೂ ಹೆಚ್ಚು ಗುಂಡಿಗಳನ್ನು ಪತ್ತೆ ಹಚ್ಚಿದ್ದಾರೆ. ಈ ಅಂಕಿ ಅಂಶಗಳಲ್ಲಿ ಪ್ರತಿನಿತ್ಯ ಏರಿಕೆ ಕೂಡ ಆಗುತ್ತಿದ್ದು, ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಸಂಚಾರ ವಿಭಾಗದ ಮೂಲಗಳು ತಿಳಿಸಿವೆ.

ಠಾಣಾ ವ್ಯಾಪ್ತಿಯ ಗುಂಡಿಗಳ ವಿವರ: ಕಬ್ಬನ್‌ಪಾರ್ಕ್‌ 15, ಕೆ.ಜಿ.ಹಳ್ಳಿ 10, ಎಲೆಕ್ಟ್ರಾನಿಕ್‌ ಸಿಟಿ 25, ಎಚ್‌ಎಸ್‌ಆರ್‌ ಲೇಔಟ್‌ 14, ಹುಳಿಮಾವು 23, ಏರ್‌ಪೋರ್ಟ್‌ 18, ಹೆಬ್ಟಾಳ 10, ಆರ್‌.ಟಿ.ನಗರ 28, ಮಲ್ಲೇಶ್ವರಂ 15, ರಾಜಾಜಿನಗರ 28, ಯಶವಂತಪುರ 13, ಪೀಣ್ಯ 10, ಜಾಲಹಳ್ಳಿ 15, ಚಿಕ್ಕಪೇಟೆ 13, ವಿಜಯನಗರ 10, ಮಾಗಡಿ ರಸ್ತೆ 10, ಬಸವನಗುಡಿ 11, ಕೆ.ಎಸ್‌.ಲೇಔಟ್‌ 30 ಗುಂಡಿಗಳು ಬಿದ್ದಿವೆ ಎಂಬ ಮಾಹಿತಿ ಲಭ್ಯವಾಗಿದೆ. ಇವುಗಳಲ್ಲಿ ಏರಿಕೆ ಕೂಡ ಆಗಬಹುದು. ಇತರೆ ಠಾಣೆಗಳಲ್ಲಿಯೂ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸರು ತಿಳಿಸಿದರು.

ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಪತ್ತೆ ಹಚ್ಚಿ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಕಳುಹಿಸುತ್ತಿದ್ದೇವೆ. ಎರಡು ತಿಂಗಳಿಂದ ಈ ಪ್ರಕ್ರಿಯೆ ನಡೆಯುತ್ತಿದೆ. ಸಣ್ಣ ಪ್ರಮಾಣದ ಗುಂಡಿಗಳನ್ನು ಸಂಚಾರ ಪೊಲೀಸರೇ ಮುಚ್ಚುತ್ತಿದ್ದು, ದೊಡ್ಡ ಗುಂಡಿಗಳನ್ನು ಸ್ಥಳೀಯ ಬಿಬಿಎಂಪಿ ಎಂಜಿನಿಯರ್‌ಗಳ ಜತೆ ಸಹಕಾರದೊಂದಿಗೆ ಮುಚ್ಚಲಾಗುತ್ತಿದೆ.
-ಎಸ್‌.ಕೆ.ಸೌಮ್ಯಲತಾ, ಡಿಸಿಪಿ, ಪಶ್ಚಿಮ ಸಂಚಾರ ವಿಭಾಗ

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next