Advertisement

ಇನ್ನೂ ಮೈದುಂಬಿಕೊಂಡಿಲ್ಲ ನದಿ, ತೊರೆಗಳು

11:58 PM Jul 22, 2019 | Team Udayavani |

ಕಡಬ: ಅರ್ಧ ಮಳೆಗಾಲ ಸಂದು ಹೋದರೂ ಎಲ್ಲೆಡೆಯಂತೆ ಕಡಬ ಭಾಗದ ಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾ ಗದೆ ನದಿ, ತೊರೆಗಳು ಇನ್ನೂ ಮೈದುಂಬಿ ಕೊಂಡಿಲ್ಲ. ಕುಮಾರಧಾರಾ ಹಾಗೂ ಗುಂಡ್ಯ ಹೊಳೆಯಲ್ಲಿ ಮಳೆಗಾಲದ ನೀರಿನ ಹರಿವು ಇನ್ನಷ್ಟೇ ಕಾಣಿಸಿಕೊಳ್ಳಬೇಕಿದೆ.

Advertisement

ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯಲಿದೆ ಎನ್ನುವ ಕಾರಣಕ್ಕಾಗಿ ಶನಿವಾರ ಶಾಲೆಗಳಿಗೆ ರಜೆ ಸಾರಲಾಗಿದ್ದರೂ ನಿರೀಕ್ಷೆ ಯಷ್ಟು ಮಳೆ ಸುರಿದಿಲ್ಲ. ಮಂಗಳೂರು, ಮಡಿಕೇರಿ ಯಂತಹ ಪ್ರದೇಶಗಳಲ್ಲಿ ಮಳೆ ಬಿರುಸುಗೊಡ‌ರೂ ಕಡಬ, ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗಗಳಲ್ಲಿ ಭಾರೀ ಮಳೆಯ ಆರ್ಭಟ ಕೇಳಿ ಬರುತ್ತಿಲ್ಲ.

ರವಿವಾರ ಸಾಧಾರಣವಾಗಿ, ಸೋಮವಾರ ಕೊಂಚ ಬಿರುಸಾಗಿ ಮಳೆ ಸುರಿದದ್ದು ಬಿಟ್ಟರೆ ಹೆಚ್ಚೇನೂ ಮಳೆಯಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಈ ಹೊತ್ತಿಗೆ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದೆ. ಸಾಮಾನ್ಯವಾಗಿ ಜೂನ್‌ನಲ್ಲಿ ಮಳೆ ಶುರುವಿಟ್ಟರೆ, ಜುಲೈ 15ರ ಹೊತ್ತಿಗೆ ಕುಂಭದ್ರೋಣ ಮಳೆಯಾಗಿ ಗುಡ್ಡದ ತುದಿಯಲ್ಲೂ ನೀರಿನ ಒರತೆ ಕಂಡು ಬಂದು ಹರಿಯಲಾರಂಭಿಸುತ್ತದೆ. ಆದರೆ ಈ ವರ್ಷ ಮಳೆ ಎಷ್ಟರ ಮಟ್ಟಿಗೆ ಕಡಿಮೆಯಾಗಿದೆ ಎಂದರೆ ಕಡಬ ಭಾಗದ ಗ್ರಾಮೀಣ ಪ್ರದೇಶಗಳಲ್ಲಿನ ತೋಡು, ಹೊಳೆಗಳಲ್ಲಿ ಇನ್ನೂ ಕಸಕಡ್ಡಿಗಳು ತೊಳೆದು ಹೋಗಲೇ ಇಲ್ಲ.

ದಿಬ್ಬಗಳು ಮುಳುಗಡೆಯಾಗಿಲ್ಲ
ಗುಂಡ್ಯ ಹೊಳೆ ಹಾಗೂ ಕುಮಾರಧಾರಾ ನದಿಯ ಒಳಹರಿವು ಹೆಚ್ಚಲೇ ಇಲ್ಲ. ಕೆಂಪಗಿನ ಗಡಸು ನೀರು ನದಿಯನ್ನು ಆವರಿಸಿ ಹರಿಯಬೇಕಾದ ಈ ಸಮಯದಲ್ಲಿ ನದಿ ಪಾತ್ರ ಇನ್ನೂ ಬರಿದಾಗಿಯೇ ಕಾಣುತ್ತಿದೆ. ನದಿಯ ನಡುವೆ ಇರುವ ಮಣ್ಣ ದಿಬ್ಬಗಳೂ ನೀರಿನಿಂದ ಮುಳುಗಿಲ್ಲ. ಈ ಸಮಯದಲ್ಲಿ ತುಂಬಿ ತುಳುಕಬೇಕಾದ ಬಾವಿಗಳಯೂ ನೀರಿನ ಮಟ್ಟ ಅಷ್ಟಕ್ಕಷ್ಟೇ ಇದೆ. ಇಂದಿನ ದಿನಗಳಲ್ಲಿ ಇಂದು ಭತ್ತದ ಬೆಸಾಯ ಕಡಿಮೆಯಾಗಿದ್ದರೂ ಅಲ್ಲೊಂದು ಇಲ್ಲೊಂದು ಬೇಸಾಯದ ಗದ್ದೆಗಳು ಕಾಣಸಿಗುತ್ತವೆ. ವಿಶೇಷವೆಂದರೆ ಈ ಗದ್ದೆಗಳಿಗೆ ಉಳುಮೆ ಮಾಡಿ ನೇಜಿ ನಾಟಿ ಮಾಡಲು ಪೂರಕವಾದ ನೀರಿನ ಪ್ರಮಾಣ ಸಿಕ್ಕಿಲ್ಲ. ಕೆಲವೆಡೆ ಬೇರೆಡೆಯಿಂದ ಪಂಪಿನಲ್ಲಿ ನೀರು ಹಾಯಿಸಿ ನೇಜಿ ನಾಟಿ ಮಾಡಲಾಗುತ್ತಿದೆ.

ಅಡಿಕೆ ಕೃಷಿಕರು ಸಾಮಾನ್ಯವಾಗಿ ಈ ಹಂಗಾಮಿನಲ್ಲಿ ಎರಡು ಬಾರಿ ಬೋರ್ಡೋ ದ್ರಾವಣ ಸಿಂಪಡಣೆ ಮಾಡುತ್ತಾರೆ. ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಕೆಲವು ರೈತರು ಇನ್ನೂ ಒಂದು ಬಾರಿಯೂ ಬೋರ್ಡೋ ದ್ರಾವಣ ಸಿಂಪಡಣೆ ಮಾಡಿಲ್ಲ. ಮಳೆಯ ಕೊರತೆಯಿಂದಾಗಿ ಕೊಳೆ ರೋಗದ ಬಾಧೆ ಆರಂಭವಾಗಿಲ್ಲ.

Advertisement

ಪ್ರಾಕೃತಿಕ ವೈಪರೀತ್ಯ
ಕಳೆದ ವರ್ಷ ಈ ಹೊತ್ತಿಗೆ ಹಳೆಯ ಹೊಸಮಠ ಮುಳುಗು ಸೇತುವೆ ಹಲವು ಬಾರಿ ನೆರೆನೀರಿನಿಂದ ಮುಳುಗಡೆ ಯಾಗಿತ್ತು. ಆದರೆ ಈ ಬಾರಿ ಹೊಸಮಠ ಸೇತುವೆ ಮೇಲೆ ನಿಂತು ನೋಡಿದರೆ ಗುಂಡ್ಯ ಹೊಳೆಯಲ್ಲಿನ ನಡುವೆ ಇರುವ ಮಣ್ಣ ದಿಬ್ಬಗಳು ಇನ್ನೂ ನೀರಿನಲ್ಲಿ ಮುಳು ಗಿಲ್ಲ ಎನ್ನುವುದು ಪ್ರಾಕೃತಿಕ ವೈಪರೀತ್ಯವನ್ನು ನಮಗೆ ಅರ್ಥ ಮಾಡಿಸುವಂತಿವೆ.
– ವಿದ್ಯಾ ಕಿರಣ್‌ ಗೋಗಟೆ, ಕುಟ್ರಾಪ್ಪಾಡಿ ಗ್ರಾ.ಪಂ. ಅಧ್ಯಕ್ಷರು

ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next