Advertisement

ಮಲಿನಗೊಳ್ಳುತ್ತಿದೆ ನೇತ್ರಾವತಿ ನದಿ

05:23 AM May 14, 2019 | mahesh |

ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿ. ಕುಕ್ಕೆಯಿಂದ ಹರಿದುಬರುವ ಕುಮಾರಧಾರಾ, ಧರ್ಮಸ್ಥಳದಿಂದ ಹರಿದು ಬರುವ ನೇತ್ರಾವತಿ ಇವೆರಡೂ ನದಿಗಳು ಸಂಗಮವಾಗುವ ಸ್ಥಳ ಉಪ್ಪಿನಂಗಡಿ.

Advertisement

ಇಲ್ಲಿನ ಸಹಸ್ರಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲೇ ಹರಿದು ಹೋಗುವ ನೇತ್ರಾವತಿ ನದಿಯಲ್ಲಿ ಮಿಂದೆದ್ದರೆ ಕಾಶಿಯಲ್ಲಿ ಮಿಂದ ಫ‌ಲವಿದೆ ಮತ್ತು ಗಯಾಪದ ಕ್ಷೇತ್ರ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪಿಂಡಪ್ರದಾನ ಮಾಡಿದರೆ ಪಿತೃಗಳಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಬಲವಾದ ಭಾವನಾತ್ಮಕ ನಂಬಿಕೆಯಿದೆ.

ಆದರೆ ಇದೀಗ ಕೂಟೇಲು ಸೇತುವೆ ಬಳಿಯಿಂದ ಉಪ್ಪಿನಂಗಡಿ ದೇಗುಲ ತನಕ ನೇತ್ರಾವತಿ ನದಿಯ ದಡವು ಕಸ, ಕಡ್ಡಿ, ಪ್ಲಾಸ್ಟಿಕ್‌, ಕೋಳಿ ತ್ಯಾಜ್ಯ, ಕಲುಷಿತ ನೀರಿನಿಂದ ಸಂಪೂರ್ಣ ಮಲಿನಗೊಳ್ಳುತ್ತಿದೆ. ಉಪ್ಪಿನಂಗಡಿ ಪಟ್ಟಣದ ಹೃದಯ ಭಾಗದಲ್ಲೇ ಹರಿದು ಹೋಗುವ ನದಿಯ ತಟಕ್ಕೆ ದಿನ ನಿತ್ಯ ರಾಶಿ ರಾಶಿ ತ್ಯಾಜ್ಯಗಳು ಬೀಳುತ್ತಿವೆ. ದೇಶವ್ಯಾಪಿ ಸ್ವಚ್ಛತೆಗಾಗಿ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿದ್ದು, ಈ ಪರಿಕಲ್ಪನೆ ಸಾಕಾರಗೊಳ್ಳಬೇಕಾದರೆ ಇಂತಹ ಪವಿತ್ರ ನದಿಗಳ ಸ್ವಚ್ಛತೆಯ ಅಗತ್ಯವಿದೆ. ನದಿಯಲ್ಲಿ ಕಸ ಚೆಲ್ಲುತ್ತಿರುವ ಬೆಳವಣಿಗೆ ಉಪ್ಪಿನಂಗಡಿ ನಗರಕ್ಕೆ ಕಪ್ಪು ಚುಕ್ಕೆಯೂ ಹೌದು. ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆಗಳು ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

– ಆದರ್ಶ್‌ ಶೆಟ್ಟಿ ಉಪ್ಪಿನಂಗಡಿ

ಬೋರುಗುಡ್ಡೆ: ವಿದ್ಯುತ್‌ ಕಂಬ ಗಟ್ಟಿಗೊಳಿಸಿ
ಇದು ಸುಳ್ಯ ನಾವೂರು ಬೋರುಗುಡ್ಡೆ ಎಂಬಲ್ಲಿಯ ದೃಶ್ಯ. ಎರಡು ತಿಂಗಳ ಹಿಂದೆ ಮೆಸ್ಕಾಂ ವತಿಯಿಂದ ಹಳೆ ವಿದ್ಯುತ್‌ ಕಂಬಗಳನ್ನು ಬದಲಿಸಿ, ಹೊಸ ಕಂಬಗಳನ್ನು ಅಳವಡಿಸುವ ಕಾರ್ಯವನ್ನು ಮೆಸ್ಕಾಂ ಗುತ್ತಿಗೆದಾರರು ಮಾಡಿದ್ದರು.

Advertisement

ಆದರೆ ಅವರು ಅನುಸರಿಸಿದ ಕ್ರಮ ತೀರಾ ಅವೈಜ್ಞಾನಿಕವಾಗಿದೆ. ಕಂಬಗಳ ಬುಡವನ್ನು ಗಟ್ಟಿಗೊಳಿಸದೆ ನಿರ್ಲಕ್ಷ್ಯ ತಾಳಿದ್ದಾರೆ. ಈ ಕಂಬ ಇಂತಹ ಬೇಜವಾಬ್ದಾರಿಗೆ ಒಂದು ಉದಾಹರಣೆ. ಇದು ಜಿ.ಎಂ. ಅಹಮದ್‌ ಮನೆಯ ದಾರಿ ಬದಿಯಲ್ಲಿದೆ. ಕಂಬ ಊರಲು ಒಂದುವರೆ ಅಡಿಯ ಗುಂಡಿ ತೋಡಿದ್ದಾರೆ. ಕಂಬ ನೆಟ್ಟಿದ್ದಾರೆ. ತಂತಿಗಳನ್ನು ಅಳವಡಿಸಿದ್ದು, ಅದರಲ್ಲಿ ವಿದ್ಯುತ್‌ ಹರಿಯುತ್ತಿದೆ. ಆದರೆ, ಕಲ್ಲು ಅಥವಾ ಮಣ್ಣು ಹಾಕಿ ಕಂಬದ ಬುಡವನ್ನು ಗಟ್ಟಿಗೊಳಿಸಿಲ್ಲ. ಇತ್ತೀಚೆಗೆ ಬಂದ ಮಳೆಯಿಂದ ಕಂಬದ ಬುಡದ ಮಣ್ಣು ಜಾರುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇದರಿಂದ ಭೀತಿಗೊಂಡಿರುವ ಸ್ಥಳೀಯರು ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ, ಅವರು ಗುತ್ತಿಗೆದಾರರ ಸಂಖ್ಯೆಯನ್ನು ಕೊಟ್ಟಿದ್ದಾರೆ. ಗುತ್ತಿಗೆದಾರರಿಗೆ ಕರೆ ಮಾಡಿದರೆ ‘ನೀವೇ ಸ್ವಲ್ಪ ಕಲ್ಲು, ಮಣ್ಣು ಹಾಕಿಬಿಡಿ’ ಎಂಬ ಉಡಾಫೆಯ ಉಚಿತ ಸಲಹೆ ಬಂತು. ಕಂಬ ಹಾಗೆಯೇ ಇದೆ. ಇನ್ನು ಬರುವುದು ಮಳೆಗಾಲ. ಎತ್ತರದ ಪ್ರದೇಶ, ನೀರಿನ ಹರಿವು ಜೋರಾಗಿರುತ್ತದೆ. ಗಾಳಿಯ ರಭಸ ಕೂಡಾ ಕಡಿಮೆಯೇನಲ್ಲ…ಬುಡದಿಂದ ಮಣ್ಣು ಜಾರಿ ನೀರಿನ ಸೆಳೆತಕ್ಕೆ ಗಾಳಿಯ ರಭಸಕ್ಕೆ ವಿದ್ಯುತ್‌ ಕಂಬ ಜಾರಿ ಅಡ್ಡಬಿದ್ದರೆ ಅನಾಹುತಗಳು ಸಂಭವಿಸುವುದು ಖಂಡಿತ. ಮೆಸ್ಕಾಂ ಅಧಿಕಾರಿಗಳು ಅನಾಹುತಕ್ಕಾಗಿ ಕಾಯುತಿದ್ದಾರೆಯೇ?

– ಎನ್‌.ಎ. ಅಬ್ದುಲ್ಲ, ನಾವೂರು- ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next