ಕೆ.ಆರ್.ಪುರ: ಹೈಟೆನ್ಷನ್ ತಂತಿ ಹಾದುಹೋಗಿರುವ ಸ್ಥಳದ ಆಸುಪಾಸು ಯಾವುದೇ ಕಟ್ಟಡ ನಿರ್ಮಿಸಬಾರದೆಂಬ ನಿಯಮ ಉಲ್ಲಂಘಿಸಿ ಕೆಲವರು ಕಟ್ಟಡ ನಿರ್ಮಿಸುತ್ತಿದ್ದು, ಅಂತಹ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಮೂಲಕ ಅಧಿಕಾರಿಗಳು, ಸಾವುನೋವುಗಳಿಗೆ ಕಾರಣರಾಗುತ್ತಿದ್ದಾರೆ.
ಅಧಿಕಾರಿಗಳಿಂದ ಅನುಮತಿ: ಭೂ ಮಾಲೀಕರು ಸರ್ಕಾರದ ನಿಯಮಗಳನ್ನು ಪಾಲಿಸದೆ ಕಟ್ಟಡ ನಿರ್ಮಿಸುತ್ತಾರೆ. ಇವರು ಅಪಾಯಕಾರಿ ಸ್ಥಳದಲ್ಲಿ, ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟುತ್ತಿದ್ದಾರೆ ಎಂದು ತಿಳಿದಿದ್ದರೂ ಪಾಲಿಕೆ ಅಧಿಕಾರಿಗಳು ನಕ್ಷೆ ಮಂಜೂರು ಮಾಡಿ, ಅನುಮತಿ ನೀಡುತ್ತಾರೆ. ಕೆಲವೊಮ್ಮೆ ಪ್ರಭಾವಿಗಳ ಒತ್ತಡಕ್ಕೆ ಮಣಿಯುವ ಬೆಸ್ಕಾಂ ಮತ್ತು ಬಿಬಿಎಂಪಿ ಅಧಿಕಾರಿಗಳು, ಅಪಾಯಕಾರಿ ಸ್ಥಳದಲ್ಲಿ ನಿಯಮಬಾಹಿರವಾಗಿ ಕಟ್ಟಡ ನಿರ್ಮಿಸಲು ಅನುಮತಿ ನೀಡುತ್ತಾರೆ.
ಇವರೆಲ್ಲರ ನಿರ್ಲಕ್ಷ್ಯದಿಂದ ವಿದ್ಯುತ್ ಪ್ರವಹಿಸಿ ಹಲವು ಕೂಲಿ ಕಾರ್ಮಿಕರು ಪ್ರಾಣ ಕಳೆದು ಕೊಂಡಿದ್ದಾರೆ. ಎರಡು ವರ್ಷದಲ್ಲಿ ವಿದ್ಯುತ್ ತಗುಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಆದರೂ, ಇಂತಹ ಸ್ಥಳದಲ್ಲಿ ಕಟ್ಟಡ ನಿರ್ಮಿಸಲು ಅಧಿಕಾರಿಗಳು ಅನುಮತಿ ನೀಡುತ್ತಲೇ ಇದ್ದಾರೆ.
Advertisement
ಕೆ.ಆರ್.ಪುರದ ಬಸವನಪುರ ವಾರ್ಡ್‌ನ ಮನೇಶ್ವರ ಬಡಾವಣೆ, ಅಯ್ಯಪ್ಪನಗರ, ಹೂಡಿ, ಕೃಷ್ಣನಗರ, ಭಟ್ಟರಹಳ್ಳಿ ಮೂಲಕ ಹಾದುಹೋಗುವ ಈ ಹೈಟೆನ್ಷನ್ ವೈರಗಳು, ಹೂಡಿ ಕೆಪಿಟಿಸಿಎಲ್ ಘಟಕ ಸೇರುತ್ತವೆ. ಹೀಗೆ ವಿವಿಧ ಬಡಾವಣೆಗಳ ಮೂಲಕ ಸಾಗುವ ವಿದ್ಯುತ್ ತಂತಿಗಳು, ಮುನೇಶ್ವರ ಬಡಾವಣೆ, ಅಯ್ಯಪ್ಪನಗರ, ಕೃಷ್ಣನಗರದಲ್ಲಿ ಕೈಗೆಟುಕುವ ಮಟ್ಟಕ್ಕಿವೆ. ಭೂಮಿಗೆ ಬಂಗಾರದ ಬೆಲೆ ಇರುವುದರಿಂದ ಒಂದಡಿ ಜಾಗವನ್ನೂ ಬಿಡದೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಪ್ರಾಣ ಹಾನಿಯಾಗುವ ಬಗ್ಗೆ ಯಾರೊಬ್ಬರಿಗೂ ಪರಿವೆಯಿಲ್ಲ.
ಪ್ರಾಣ ಬಲಿ ಪಡೆದ ಪ್ರಮುಖ ಘಟನೆಗಳು
ಅಕ್ಟೋಬರ್ 19, 2017
ನವೆಂಬರ್ 11, 2018
ಏಪ್ರಿಲ್ 6, 2019
ಕೃಷ್ಣನಗರದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕ ವಿ.ನಾಗಭೂಷಣ್ (33), ಕೈಯಲ್ಲಿ ಹಿಡಿದಿದ್ದ ಕಬ್ಬಿಣದ ಕಂಬಿ ಹೈಟೆನ್ಷನ್ ತಂತಿಗೆ ತಗುಲಿ, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದ. ದೇವಸಂದ್ರದಲ್ಲಿ ಗಾಳಿಪಟ ಹಾರಿಸುವಾಗ ತಂತಿಗೆ ಗಾಳಿಪಟ ಸಿಲುಕಿ 7ನೇ ತರಗತಿ ವಿದ್ಯಾರ್ಥಿ ಜಸ್ವಂತ್ (12) ಸಾವನ್ನಪ್ಪಿದ್ದ. ಘಟನೆಯಿಂದಾಗಿ ಸುತ್ತಲ ಪ್ರದೇಶದ ಕೆಲ ಮನೆಗಳಲ್ಲಿ ಶಾರ್ಟ್ ಸರ್ಕಿಟ್ ಸಂಭವಿಸಿ ಟಿ.ವಿ ಸೇರಿ ಹಲವು ಎಲೆಕ್ಟ್ರಾನಿಕ್ ವಸ್ತುಗಳು ಹಾನಿಗೀಡಾಗಿದ್ದವು. ಇದೇ ಏಪ್ರಿಲ್ 6ರಂದು ಕೊಡಿಗೆಹಳ್ಳಿ ಮುಖ್ಯ ರಸ್ತೆಯ ಮುನೇಶ್ವರ ಬಡಾವಣೆಯಲ್ಲಿ ಆಂಧ್ರ ಪ್ರದೇಶ ಮೂಲದ ವಿಜಯಕುಮರ್ ಎಂಬ ವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡಕ್ಕೆ ಬಣ್ಣ ಹಚ್ಚುವ ವೇಳೆ ಹೈಟೆನ್ಷನ್ ತಂತಿ ತಗುಲಿ ಕಾರ್ಮಿಕ ಶೈಲೇಶ್ ಕುಮಾರ್ ಮೃತಪಟ್ಟಿದ್ದ.
ನಿಯಮ ಏನಿದೆ?
66 ಸಾವಿರ ಕೆ.ವಿ ಸಾಮರ್ಥ್ಯದ ಹೈಟೆನ್ಷನ್ ತಂತಿಗಳು ಹಾದುಹೋಗಿರುವ ಸ್ಥಳದಿಂದ 2.3 ಮೀ. ಹಾಗೂ 2.20 ಲಕ್ಷ ಕೆ.ವಿ ತಂತಿ ಇರುವ ಸ್ಥಳದಿಂದ 3.9 ಮೀ. ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸುವಂತಿಲ್ಲ ಎಂಬ ನಿಯಮವಿದೆ. ಆದರೆ ಇದನ್ನು ಕಟ್ಟಡ ಮಾಲೀಕರು ಪಾಲಿಸುತ್ತಿಲ್ಲ.