Advertisement

ಪರಿಸರ ನಾಶದಿಂದ ಅಪಾಯ ನಿಶ್ಚಿತ

05:30 AM Feb 08, 2019 | |

ದಾವಣಗೆರೆ: ಪರಿಸರ ನಾಶ ನಿರಂತರವಾಗಿ ಮುಂದುವರೆದಿದ್ದೇ ಆದಲ್ಲಿ ನಾವು ಉಸಿರಾಡಲು ಆಕ್ಸಿಜನ್‌ ಸಿಲಿಂಡರ್‌ಗಳನ್ನು ಖರೀದಿಸಬೇಕಾಗುವ ಪರಿಸ್ಥಿತಿ ಎದುರಾಗಬಹುದು ಎಂದು ಬೆಂಗಳೂರಿನ ಇಂಡಿಯನ್‌ ಇನ್‌ ಸ್ಟಿಟ್ಯೂಟ್‌ನ ಸೆಂಟರ್‌ ಫಾರ್‌ ಎಕಲಾಜಿಕಲ್‌ ಸೈನ್ಸಸ್‌ ವಿಭಾಗದ ಡಾ|ಟಿ.ವಿ ರಾಮಚಂದ್ರ ಎಚ್ಚರಿಸಿದ್ದಾರೆ.

Advertisement

ಗುರುವಾರ, ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮೈಕ್ರೋ ಬಯೋಲಜಿ ವಿಭಾಗದ ಬೆಳ್ಳಿ ಹಬ್ಬ ವರ್ಷದ ಪ್ರಯುಕ್ತ ಏರ್ಪಡಿಸಲಾಗಿದ್ದ ಸಸ್ಟೈನೆಬಲ್‌ ಎನ್ವಿರಾನ್ಮೆಂಟಲ್‌ ಥ್ರೂ ಬಯಾಲಜಿಕಲ್‌ ಸೈನ್ಸಸ್‌ ಆ್ಯಂಡ್‌ ಟೆಕ್ನಾಲಜಿ ವಿಷಯ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕರು ಪರಿಸರಕ್ಕೆ ಹಾನಿಯಾಗದಂತೆ ಜೀವನ ಶೈಲಿ ಬದಲಾಯಿಸಿಕೊಂಡು, ಪರಿಸರ ಸಂರಕ್ಷಿಸಲು ಮುಂದಾಗಬೇಕು. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಪ್ರಯೋಜನವಾಗಲಿದೆ ಎಂದರು.

ಪರಿಸರ ನಾಶದಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ವರ್ಷದ ಹನ್ನೆರಡು ತಿಂಗಳುಗಳ ಕಾಲ ತುಂಬಿ ಹರಿಯತ್ತಿದ್ದಂತಹ ನದಿಗಳು ಕೇವಲ ಮೂರು ನಾಲ್ಕು ತಿಂಗಳಿಗೆ ಬತ್ತಿಹೊಗುತ್ತಿವೆ. ನೀರು ಮತ್ತು ಹಸಿರು ಇದ್ದರೆ ಪ್ರತಿಯೊಬ್ಬರೂ ಖುಷಿಯಿಂದ ಜೀವಿಸಬಹುದು. ಆದ್ದರಿಂದ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯತ್ತ ಗಮನ ಹರಿಸಬೇಕಿದೆ ಎಂದು ಸಲಹೆ ನೀಡಿದರು.

ತಾಯ್ನಾಡಿಗೆ ಏನಾದರು ಕೊಡುಗೆ ನೀಡುವುದಿದ್ದರೆ ಪರಿಸರಕ್ಕೆ ನೀಡಿ. ಪ್ಲಾಸ್ಟಿಕ್‌ ಬದಲು ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ಬಳಸಿ ಎಂದ ಅವರು, ತಂತ್ರಜ್ಞಾನವು ಸಹ ಪರಿಸರಕ್ಕೆ ಪೂರಕವಾಗಿರುವಂತೆ ನಿರ್ಮಾಣವಾಗಬೇಕಿದೆ ಎಂದು ಹೇಳಿದರು.
 
ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ, ಉನ್ನತ ಹುದ್ದೆ ಸಂಪಾದಿಸಿ, ದುಬಾರಿ ಬೆಲೆಯ ಮೊಬೈಲ್‌ ಖರೀದಿಸಿದರೆ ಜೀವನ ಯಶಸ್ವಿ ಯಾಗುವುದಿಲ್ಲ. ಬದಲಿಗೆ ಪರಿಸರಕ್ಕೆ ವಿದ್ಯಾರ್ಥಿಗಳು ಉತ್ತಮ ಕೊಡುಗೆ ನೀಡಿದರೆ ಮಾತ್ರ ಅವರ ಜೀವನ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಸ್‌.ವಿ. ಹಲಸೆ ಮಾತನಾಡಿ, ಇಂದು ತಂತ್ರಜ್ಞಾನವು ಪರಿಸರಕ್ಕೆ ವ್ಯತಿರಿಕ್ತವಾಗಿ ಬಳಕೆಯಾಗುತ್ತಿದ್ದು, ಅದು ಬದಲಾಗಬೇಕು. ಈ ಕಾರ್ಯಾಗಾರ ಎರಡು ದಿನಗಳ ಕಾಲ ನಡೆಯಲಿದ್ದು ಯುವಜನತೆಗೆ ಉಪಯುಕ್ತವಾಗಲಿದೆ ಎಂದರು.

Advertisement

ಕುಲಸಚಿವರಾದ ಪ್ರೊ| ಪಿ.ಕಣ್ಣನ್‌, ಪ್ರೊ| ಬಸವರಾಜ ಬಣಕಾರ, ಹಣಕಾಸು ಅಧಿಕಾರಿ ಪ್ರೊ| ಜೆ.ಕೆ. ರಾಜು, ಪ್ರೊ| ಗಾಯತ್ರಿ ದೇವರಾಜ್‌, ಪ್ರೊ| ಶಿಶುಪಾಲ, ವಿವಿಧ ವಿಭಾಗಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next