Advertisement

The Rise of Zimbabwe Cricket ಅವಮಾನದ ಬೂದಿಯಿಂದ ಎದ್ದು ನಿಂತ ಜಿಂಬಾಬ್ವೆಯ ಏಳುಬೀಳಿನ ಕಥೆ

07:03 PM Jun 29, 2023 | ಕೀರ್ತನ್ ಶೆಟ್ಟಿ ಬೋಳ |

ಸಾಲು ಸಾಲು ಸೋಲುಗಳು.. ಸಂಬಳವಿಲ್ಲದೇ ಆಡುವ ಆಟಗಾರರು.. ಮ್ಯಾಚ್ ಫಿಕ್ಸಿಂಗ್ ಆರೋಪಗಳು.. ಜನಾಂಗೀಯ ತಾರತಮ್ಯಗಳು.. ಸಾಲದ ಹೊರೆ.. ರಾಜಕೀಯ ಮೇಲಾಟಗಳು. ಇದು ಜಿಂಬಾಬ್ವೆ ಎಂಬ ಆಫ್ರಿಕಾ ದೇಶದ ಕೆಲ ವರ್ಷಗಳ ಹಿಂದಿನ ಕ್ರಿಕೆಟ್ ಕಥೆ. ಹಲವು ವರ್ಷಗಳಿಂದ ಕೆಟ್ಟ ವಿಚಾರಗಳಿಂದಲೇ ಸುದ್ದಿಯಾಗುತ್ತಿದ್ದ ಜಿಂಬಾಬ್ವೆ ಕ್ರಿಕೆಟ್ ಇದೀಗ ಮತ್ತೆ ಉತ್ತುಂಗದ ಹಾದಿ ಹಿಡಿದಿದೆ. 1.6 ಕೋಟಿ ಜನಸಂಖ್ಯೆಯ ಜಿಂಬಾಬ್ವೆ ಕ್ರಿಕೆಟ್ ಇದೀಗ ಕ್ರೀಡಾಲೋಕದ ಹೊಸ ಅಚ್ಚರಿ. ಅವಮಾನದ ಬೂದಿಯಿಂದ ಎದ್ದು ಬಂದ ಆಫ್ರಿಕಾದ ಬಡದೇಶದ ಕ್ರಿಕೆಟ್ ಕಥೆಯಿದು.

Advertisement

1999ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಮೂರು ರನ್ ಅಂತರದಿಂದ ಸೋಲಿಸಿ ಕ್ರಿಕೆಟ್ ವಿಶ್ವಕ್ಕೆ ಅಚ್ಚರಿ ಮೂಡಿಸಿದ್ದ ಜಿಂಬಾಬ್ವೆ ದೇಶವು ಮುಂದಿನ ದಿನಗಳಲ್ಲಿ ದೊಡ್ಡ ತಂಡವಾಗಿ ಬೆಳೆಯಲಿದೆ ಎಂದೇ ಕ್ರಿಕೆಟ್ ಪಂಡಿತರು ಲೆಕ್ಕ ಹಾಕಿದ್ದರು. ದಕ್ಷಿಣ ಆಫ್ರಿಕಾದ ಜೊತೆಗೆ 2003ರ ಏಕದಿನ ವಿಶ್ವಕಪ್ ನ ಆತಿಥ್ಯ ಪಡೆದಿದ್ದ ಜಿಂಬಾಬ್ವೆ ನಂತರ ಸಾಗಿದ್ದು ಕೆಳಮುಖವಾಗಿಯೇ. ಒಂದೆಡೆ ವಿಶ್ವಕಪ್ ನಡೆಯುತ್ತಿದ್ದರೆ ಮತ್ತೊಂದೆಡೆ ಆಫ್ರಿಕಾದ ದೇಶದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಎದ್ದಿತ್ತು. ಜಿಂಬಾಬ್ವೆ ಪ್ರಮುಖ ಆಟಗಾರರಾದ ಅ್ಯಂಡಿ ಫ್ಲವರ್ ಮತ್ತು ಒಲೊಂಗಾ ಅವರು ದೇಶದ ‘ಪ್ರಜಾಪ್ರಭುತ್ವದ ಮರಣ’ದ ಶೋಕಾಚರಣೆಗಾಗಿ ವಿಶ್ವಕಪ್ ಪಂದ್ಯದ ವೇಳೆ ಕಪ್ಪು ಪಟ್ಟಿ ಧರಿಸಿದ್ದರು. ಇದರಿಂದಾಗಿ ಅವರನ್ನು ತಂಡದಿಂದ ತಕ್ಷಣವೇ ಹೊರಹಾಕಲಾಗಿತ್ತು.

2004ರಲ್ಲಿ ತಂಡದ ನಾಯಕನಾಗಿದ್ದ ‘ಬಿಳಿಯ’ ಹೀತ್ ಸ್ಟ್ರೀಕ್ ಅವರನ್ನು ಕೆಳಗಿಳಿಸಲಾಯಿತು. ಇಲ್ಲಿಂದ ಜಿಂಬಾಬ್ವೆ ವಿಕೆಟ್ ಉರುಳಲಾರಂಭಿಸಿತು. ಹಲವು ಪ್ರಮುಖ ಆಟಗಾರರು ರಾಜೀನಾಮೆ ನೀಡಿದರು. ಆಗ ಕೇವಲ 20 ವರ್ಷ ಪ್ರಾಯದ ತತೆಂಬ ತೈಬು ಅವರನ್ನು ತಂಡದ ನಾಯಕನಾಗಿ ಮಾಡಲಾಯಿತು.

ಹೀತ್ ಸ್ಟ್ರೀಕ್ ಮತ್ತು 14 ಇತರ ಆಟಗಾರರನ್ನು ಹೊರದಬ್ಬಿದ ಜಿಂಬಾಬ್ವೆ ಕ್ರಿಕೆಟ್ ಲೋಕದಲ್ಲಿ ಅವಮಾನ ಎದುರಿಸಬೇಕಾಯಿತು. ಎಲ್ಲಿಯವರೆಗೆ ಎಂದರೆ ಕೆಲ ಪಾರ್ಟ್ ಟೈಮ್ ಆಟಗಾರರ, ಏನೂ ಅಲ್ಲದ ಅಮೆರಿಕ ವಿರುದ್ಧ ಹೀನಾಯ ಸೋಲು ಕಂಡಿತು. ಅದಾಗಲೇ ಜಿಂಬಾಬ್ವೆ ಕ್ರಿಕೆಟ್ ಪಾತಾಳ ಸೇರಿತ್ತು.

heath streak

Advertisement

ರಾಷ್ಟ್ರೀಯ ತಂಡದ ಆಯ್ಕೆಯಲ್ಲಿ ಜನಾಂಗೀಯ ತಾರತಮ್ಯ, ಹಿತಾಸಕ್ತಿ ಸಂಘರ್ಷ, ರಾಷ್ಟ್ರೀಯ ಗುತ್ತಿಗೆ ಆಟಗಾರರಿಗೆ ಸಿಗದ ವೇತನ, ಆಟಗಾರರ ಬೇಕು ಬೇಡಗಳಿಗೆ ಇಲ್ಲದ ಮಾನ್ಯತೆ ಹೀಗೆ ಸಮಸ್ಯೆಗಳು ತುಂಬಿ ತುಳುಕುತ್ತಿದ್ದವು.

ಜಿಂಬಾಬ್ವೆ ಕ್ರಿಕೆಟ್ ಯೂನಿಯನ್ ನ ನಿರ್ದೇಶಕರಾಗಿದ್ದ ವಿನ್ಸ್ ಹಾಗ್ ರಾಜೀನಾಮೆ ನೀಡಿದರು. 2005ರ ನವೆಂಬರ್ ನಲ್ಲಿ ತೈಬು ಕೂಡಾ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಈ ವೇಳೆ ತೈಬು ಹೇಳಿದ ಮಾತು ಆಗಿನ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತು, “ನಾವು ಏನನ್ನೂ ಮಾಡದಿದ್ದರೆ, ಜಿಂಬಾಬ್ವೆಯಲ್ಲಿ ಕ್ರಿಕೆಟ್ ಒಂದು ವರ್ಷದಲ್ಲಿ ಸಾಯುತ್ತದೆ”.

2009ರಲ್ಲಿ ಜಿಂಬಾಬ್ವೆ ಕ್ರಿಕೆಟ್ ಮೆಟ್‌ ಬ್ಯಾಂಕ್‌ ನಿಂದ ಯುಎಸ್ ಡಾಲರ್ ಸಾಲವನ್ನು 20% ಕ್ಕಿಂತ ಹೆಚ್ಚಿನ ಬಡ್ಡಿದರದಲ್ಲಿ ತೆಗೆದುಕೊಂಡಿತು. ಮೆಟ್‌ ಬ್ಯಾಂಕ್ ನೀಡುತ್ತಿರುವ ಅಂತಾರರಾಷ್ಟ್ರೀಯ ಬಡ್ಡಿದರಕ್ಕಿಂತ ಕಡಿಮೆ ದರದಲ್ಲಿ ಐಸಿಸಿ ಸಾಲಗಳನ್ನು ವ್ಯವಸ್ಥೆ ಮಾಡಬಹುದು ಎಂದು ತಿಳಿದಿದ್ದರೂ ಜಿಂಬಾಬ್ವೆ ಈ ಅಪಾಯಕಾರಿ ನಡೆ ಕೈಗೊಂಡಿತ್ತು. ಆಗಿನ ಜಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷ ಪೀಟರ್ ಚಿಂಗೊಕಾ, ಉಪಾಧ್ಯಕ್ಷ ವಿಲ್ಸನ್ ಮನಸೆ ಮತ್ತು ಮಾಜಿ ವ್ಯವಸ್ಥಾಪಕ ನಿರ್ದೇಶಕ ಓಜಿಯಾಸ್ ಬ್ವುಟೆ ಎಲ್ಲರೂ ಮೆಟ್‌ ಬ್ಯಾಂಕ್‌ ನ ಆಡಳಿತ ಮಂಡಳಿಯ ಸದ್ಯಸರಾಗಿದ್ದರು. ಹೀಗಾಗಿ ಇಲ್ಲಿ ಕ್ರೀಡಾ ಪ್ರೀತಿಗಿಂತ ಸ್ವಾರ್ಥವೇ ಮೇಲುಗೈ ಸಾಧಿಸಿತ್ತು.

2004 ರಲ್ಲಿ ವಿನ್ಸ್ ಹಾಗ್ ಅವರ ರಾಜೀನಾಮೆಯ ನಂತರ ಸಂಸ್ಥೆಯ ಆಡಳಿತ ವಹಿಸಿಕೊಂಡ ಒಜಿಯಾಸ್ ಬ್ವುಟೆ ಜಿಂಬಾಬ್ವೆ ಕ್ರಿಕೆಟ್ ನ 10 ಮಿಲಿಯನ್ ಡಾಲರ್ ಬೆಲೆ ಬಾಳುತ್ತಿತ್ತು. ಆದರೆ 2012 ಆಡಿಟ್ ನಡೆದಾಗ ಕ್ರಿಕೆಟ್ ಮಂಡಳಿಯು ಒಟ್ಟು 19,081,421 ಡಾಲರ್ ನಷ್ಟು ಸಾಲದಲ್ಲಿತ್ತು. ಆಟಗಾರರಿಗೆ ವೇತನ ನೀಡಲು ಮಂಡಳಿ ಬಳಿ ಹಣವಿರಲಿಲ್ಲ. 2013 ರಲ್ಲಿ ಆಟಗಾರರು ವೇತನಕ್ಕಾಗಿ ಮುಷ್ಕರ ನಡೆಸಿದರು. ಎಲ್ಲಿಯವರೆಗೆ ಎಂದರೆ 2014 ರ ಟಿ 20 ವಿಶ್ವಕಪ್ ಗೆ ಜಿಂಬಾಬ್ವೆ ತಂಡವನ್ನು ಕಳುಹಿಸಲೂ ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು. ಆದರೆ ಜಿಂಬಾಬ್ವೆ ಕ್ರಿಕೆಟ್ ಮಂಡಳಿಗೆ ಐಸಿಸಿ 3 ಮಿಲಿಯನ್ ಡಾಲರ್ ಸಾಲವನ್ನು ನೀಡಿ ಈ ಸಂಕಷ್ಟದಿಂದ ದೂರ ಮಾಡಿತು.

ಬದಲಾವಣೆ ಆರಂಭ

2015ರ ಆಗಸ್ಟ್ ನಲ್ಲಿ ತಾವೆಂಗ್ವಾ ಮುಕುಹ್ಲಾನಿ ಅವರನ್ನು ಜಿಂಬಾಬ್ವೆ ಕ್ರಿಕೆಟ್ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ಮಂಡಳಿಯ ಸಾಲದ ಹೊರೆಯನ್ನು ಕಡಿಮೆ ಮಾಡಲು ಹೊರಟ ಮುಕುಹ್ಲಾನಿ ಅವರು ತಕ್ಷಣವೇ 27 ಮಿಲಿಯನ್ ಡಾಲರ್ ಸಾಲವನ್ನು ಇತ್ಯರ್ಥಪಡಿಸುವ ಮಾರ್ಗಗಳನ್ನು ಹುಡುಕಲು ಪ್ರಯತ್ನಿಸಿದರು. ಜಿಂಬಾಬ್ವೆ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ (ZAMCO) ಸಂಪರ್ಕಿಸಿದ ಅವರು ಜಿಂಬಾಬ್ವೆ ಕ್ರಿಕೆಟ್ ಮಂಡಳಿಯ ಸಾಲಗಳನ್ನು 10 ಮಿಲಿಯನ್ ಗೆ ಇಳಿಸಲು ಪ್ರಯತ್ನಿಸಿದರು.

ಜಿಂಬಾಬ್ವೆ ಕ್ರಿಕೆಟ್ ಮಂಡಳಿಯು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿರುವ ತಮ್ಮ ಪ್ರಧಾನ ಕಛೇರಿಯಿಂದ ಹೊರ ನಡೆಯಬೇಕಾಯಿತು. ಸಿಬ್ಬಂದಿಯ ಹಿಂಬಡ್ತಿ ಮತ್ತು ಸಂಬಳದಲ್ಲಿ 30% ರಷ್ಟು ಕಡಿತವನ್ನು ಒಳಗೊಂಡಿರುವ ಕಠಿಣ ಕ್ರಮಗಳನ್ನು ಈ ಅವಧಿಯಲ್ಲಿ ಮಾಡಲಾಯಿತು.

ಅಮಾನತು ಶಿಕ್ಷೆ

ಕ್ರಿಕೆಟ್ ವಿಷಯಗಳಲ್ಲಿ ರಾಜಕೀಯ ಹಸ್ತಕ್ಷೇಪದಿಂದಾಗಿ 2019 ಜುಲೈನಲ್ಲಿ ಜಿಂಬಾಬ್ವೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದ ಹೊರ ಹಾಕಬೇಕಾದ ಪರಿಸ್ಥಿತಿ ಎದುರಾಗಿತ್ತು.

ಸರ್ವಾನುಮತದಿಂದ ಪೂರ್ಣ ಸದಸ್ಯರು ಮುಕ್ತ ಮತ್ತು ಪ್ರಜಾಪ್ರಭುತ್ವ ಚುನಾವಣೆ ಪ್ರಕ್ರಿಯೆಯನ್ನು ಒದಗಿಸಲು ಮತ್ತು ಕ್ರಿಕೆಟ್‌ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಖಚಿತಪಡಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದು ಐಸಿಸಿ ಮಂಡಳಿಯು ನಿರ್ಧರಿಸಿತು. ಐಸಿಸಿ ಧನಸಹಾಯ ನಿಂತಿತು. ಐಸಿಸಿ ಕೂಟಗಳಲ್ಲಿ ಭಾಗವಹಿಸದಂತೆ ತಂಡಕ್ಕೆ ನಿರ್ಬಂಧಿಸಲಾಯಿತು. ಸದಸ್ಯರನ್ನು ಅಮಾನತುಗೊಳಿಸುವ ನಿರ್ಧಾರವನ್ನು ನಾವು ಲಘುವಾಗಿ ತೆಗೆದುಕೊಳ್ಳುವುದಿಲ್ಲ, ಆದರೆ ನಮ್ಮ ಕ್ರೀಡೆಯನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸಬೇಕು ಎಂದು ಆಗಿನ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಹೇಳಿದ್ದರು.

“ಜಿಂಬಾಬ್ವೆಯಲ್ಲಿ ನಡೆದಿರುವುದು ಐಸಿಸಿ ಸಂವಿಧಾನದ ಗಂಭೀರ ಉಲ್ಲಂಘನೆಯಾಗಿದೆ ಮತ್ತು ಅದನ್ನು ಪರಿಶೀಲಿಸದೆ ಮುಂದುವರಿಸಲು ನಾವು ಅನುಮತಿಸುವುದಿಲ್ಲ. ಐಸಿಸಿ ಸಂವಿಧಾನದ ಪ್ರಕಾರ ಜಿಂಬಾಬ್ವೆಯಲ್ಲಿ ಕ್ರಿಕೆಟ್ ಮುಂದುವರಿಯಬೇಕೆಂದು ಐಸಿಸಿ ಬಯಸುತ್ತದೆ” ಎಂದು ಹೇಳಿದ್ದರು.

ಅಮಾನತಿನ ಕಾರಣದಿಂದ ಜಿಂಬಾಬ್ವೆ ಆಟಗಾರರು ಜೀವನ ಸಾಗಿಸಲು ಕಷ್ಟವಾಗಿತ್ತು. ಹೀಗಾಗಿ ಆಟಗಾರರು ವಿದೇಶಿ ಟಿ20 ಲೀಗ್ ಗಳಲ್ಲಿ ಆಡಲು ಆರಂಭಿಸಿದರು. ಇದೇ ವೇಳೆ ಮಾಜಿ ನಾಯಕ ಬ್ರೆಂಡನ್ ಟೇಲರ್ ಅವರು ಭಾರತದ ಬುಕ್ಕಿಯಿಂದ ಮ್ಯಾಚ್ ಫಿಕ್ಸಿಂಗ್ ಗಾಗಿ ಹಣ ಸ್ವೀಕರಿಸಿದ ಆರೋಪ ಎದುರಿಸಬೇಕಾಯಿತು. 2019ರಲ್ಲಿ ಭಾರತದ ಪ್ರವಾಸಕ್ಕೆ ಬಂದ ಜಿಂಬಾಬ್ವೆ ಆಟಗಾರರಿಗೆ ಆರು ತಿಂಗಳ ವೇತನ ನೀಡಿರಲಿಲ್ಲ. ಹೀಗಾಗಿ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿದ್ದೆವು ಎಂದು ಟೇಲರ್ ಹೇಳಿಕೊಂಡರು. ಅವರನ್ನು ಮೂರು ವರ್ಷಗಳ ಕಾಲ ಬ್ಯಾನ್ ಮಾಡಲಾಯಿತು.

brendan taylor

ಸಂಕಷ್ಟಗಳ ಸರಮಾಲೆಯ ನಡುವೆ ಅಧ್ಯಕ್ಷ ಮುಕುಹ್ಲಾನಿ ಮತ್ತು ಬೋರ್ಡ್ ಹೋರಾಟ ನಡೆಸಿ ಕೇವಲ ಮೂರೇ ತಿಂಗಳಲ್ಲಿ ಐಸಿಸಿ ಅಮಾನತು ಹಿಂಪಡೆಯುವಂತೆ ಮಾಡಿದರು. 27 ಮಿಲಿಯನ್ ಡಾಲರ್ ಸಾಲದಲ್ಲಿದ್ದ ಜಿಂಬಾಬ್ವೆ ಕ್ರಿಕೆಟ್ ಮಂಡಳಿಯು 2019-20ರ ಹಣಕಾಸು ವರ್ಷ ಮುಗಿಯುತ್ತಿದ್ದಂತೆ ಕೇವಲ 1 ಮಿಲಿಯನ್ ಡಾಲರ್ ಗೆ ಬಂದಿತ್ತು. 2019ರ ಅಕ್ಟೋಬರ್ ನಲ್ಲಿ ಮಾಜಿ ನಾಯಕ ಹ್ಯಾಮಿಲ್ಟನ್ ಮಝಕಝಾ ಅವರನ್ನು ಕ್ರಿಕೆಟ್ ಮಂಡಳಿಯ ನಿರ್ದೇಶಕರನ್ನಾಗಿ ಮಾಡಲಾಯಿತು. ಹೊಸ ನೀತಿಗಳು, ತಂಡಕ್ಕೆ ನುರಿತ ಸಹಾಯಕ ಸಿಬ್ಬಂದಿಗಳನ್ನು ನೇಮಿಸಲಾಯಿತು.

ಇಲ್ಲಿಗೆ ಜಿಂಬಾಬ್ವೆಯ ಪರಿಸ್ಥಿತಿಯು ಒಂದು ಹಂತಕ್ಕೆ ಸುಸ್ಥಿತಿಗೆ ಬಂದಿತ್ತು. ಹೆಚ್ಚಿಲ್ಲದ ಸಾಲದ ಪ್ರಮಾಣ, ನಿಯಮಿತವಾಗಿ ಬಂದ ಆದಾಯವು ಆಟಗಾರರ ಪ್ರದರ್ಶನದ ಮೇಲೂ ಪರಿಣಾಮ ಬೀರಿತು. ಪಾಕಿಸ್ಥಾನದಲ್ಲಿ ಪಾಕ್ ತಂಡವನ್ನೇ ಸೋಲಿಸಿದ ಜಿಂಬಾಬ್ವೆ ಟಿ20 ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ತೋರಿತು. ಕ್ರೇಗ್ ಇರ್ವಿನ್, ಸೀನ್ ವಿಲಿಯಮ್ಸ್, ಬ್ಲೆಸ್ಸಿಂಗ್ ಮುಜುರ್ಬಾನಿ ಮತ್ತು ಸಿಕಂದರ್ ರಝಾ ಮುಂತಾದ ಹಿರಿಯ ಆಟಗಾರರು ಮತ್ತೆ ವಿಶ್ವ ಮಟ್ಟದಲ್ಲಿ ಮಿಂಚಲು ಆರಂಭಿಸಿದರು.

ಸಾಲದ ಹೊರೆ, ರಾಜಕೀಯ ಹಸ್ತಕ್ಷೇಪ, ಸ್ವಹಿತಾಸಕ್ತಿಯ ಕಾರಣದಿಂದ ಹಳ್ಳಹಿಡಿದಿದ್ದ ಜಿಂಬಾಬ್ವೆ ಕ್ರಿಕೆಟ್ ಇದೀಗ ಚೇತರಿಕೆಯ ಹಾದಿಯಲ್ಲಿದೆ. ಸದ್ಯದ ರೀತಿಯಲ್ಲೇ ಆಫ್ರಿಕನ್ ದೇಶದ ಆಟ ಮುಂದುವರಿದರೆ ಕ್ರಿಕೆಟ್ ಭೂಪಟದಲ್ಲಿ ಜಿಂಬಾಬ್ವೆ ಬಾವುಟ ಬಾನೆತ್ತರಕ್ಕೆ ಹಾರುವುದು ನಿಶ್ಚಿತ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next