Advertisement

ಉಡುಪಿ: ಜಿಲ್ಲೆಯಲ್ಲಿ  ಕೋವಿಡ್ ನಡುವೆ ಸದ್ದಿಲ್ಲದೆ ಡೆಂಗ್ಯೂ ಏರಿಕೆ 

07:27 AM Aug 06, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಕಂಡು ಬರುತ್ತಿದ್ದು, ಇದರ ನಡುವೆ ಸದ್ದಿಲ್ಲದೆ ಡೆಂಗ್ಯೂ ಪ್ರಕರಣ ಕಳೆದ ವರ್ಷಕ್ಕಿಂತ ಶೇ. 89ರಷ್ಟು ಏರಿಕೆಯಾಗಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

Advertisement

ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಪ್ರಕರಣಗಳ ಸಂಖ್ಯೆ ಎರಡು ಪಟ್ಟು ಏರಿಕೆಯಾಗಿದೆ. 2020 ಜನವರಿಯಿಂದ ಜು. 30ರ ವರೆಗೆ ಒಟ್ಟು 131 ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ. ಇದೇ ಸಮಯಕ್ಕೆ 2017ರಲ್ಲಿ 67, 2018ರಲ್ಲಿ 59, 2019ರಲ್ಲಿ 68 ಪ್ರಕರಣ ಕಂಡುಬಂದಿದ್ದವು. 2021ನೇ ಸಾಲಿನ ಜನವರಿಯಿಂದ ಜುಲೈ ಅಂತ್ಯಕ್ಕೆ 281 ಪ್ರಕರಣಗಳು ವರದಿಯಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ.

ಉಡುಪಿ ತಾಲೂಕಿನಲ್ಲಿ ಅತ್ಯಧಿಕ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಸರಕಾರಿ ಆಸ್ಪತ್ರೆಯಲ್ಲಿ 105 ಹಾಗೂ ಖಾಸಗಿ 49 ಪ್ರಕರಣ ಸೇರಿದಂತೆ ಒಟ್ಟು 154 ಪ್ರಕರಣಗಳು ದಾಖಲಾಗಿವೆೆ. ಇದರಲ್ಲಿ 130 ಪ್ರಕರಣಗಳು ಗ್ರಾಮೀಣ ಭಾಗದ ಪ್ರದೇಶಗಳಿಂದ ಪತ್ತೆಯಾಗಿವೆ.

ಕುಂದಾಪುರ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ 15 ಹಾಗೂ ಖಾಸಗಿಯಲ್ಲಿ 13 ಸೇರಿದಂತೆ 28 ಪ್ರಕರಣಗಳು, ಕಾರ್ಕಳದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ 75 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 24 ಪ್ರಕರಣಗಳು ಸೇರಿ ಒಟ್ಟು 99 ಪ್ರಕರಣಗಳು ದಾಖಲಾಗಿವೆ. ನಗರದ ಬದಲು ಗ್ರಾಮೀಣ ಪ್ರದೇಶದಲ್ಲಿ ಡೆಂಗ್ಯೂ ತೀವ್ರತೆ ಹೆಚ್ಚಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ.

ಹೇಗೆ ಹರಡುತ್ತದೆ?:

Advertisement

ಈಡೀಸ್‌ ಎನ್ನುವ ಸೊಳ್ಳೆಯಿಂದ ಹರಡುವಂತಹ ವೈರಲ್‌ ಸೋಂಕು ಇದಾಗಿದೆ.  ಈ ಸೊಳ್ಳೆ ಕಚ್ಚಿದ 4-7 ದಿನಗಳಲ್ಲಿ ಪರಿಣಾಮವು ಕಂಡುಬರುವುದು.

ಸೊಳ್ಳೆಗಳಿಂದ ರಕ್ಷಣೆ ಹೇಗೆ? :

ನೀರು ಶೇಖರಣೆ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಬೇಕು. ಮನೆಯ ಸುತ್ತಲೂ ಹಾಗೂ ತಾರಸಿಯ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಿ, ತೆಂಗಿನ ಚಿಪ್ಪು, ಟಯರ್‌ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಸೊಳ್ಳೆಗಳನ್ನು ತಡೆಯಲು ಕಿಟಿಕಿ ಬಾಗಿಲುಗಳಿಗೆ ಮೆಶ್‌ ಹಾಕಿ ಅಥವಾ ಸೊಳ್ಳೆ ನಾಶಕ ಔಷಧಗಳನ್ನು ಬಳಸಬೇಕು. ಡೆಂಗ್ಯೂನಿಂದ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಅಪಾಯ ಹೆಚ್ಚು. ಹೀಗಾಗಿ ಮಕ್ಕಳು, ಗರ್ಭಿಣಿಯರು, ವೃದ್ಧರು, ರೋಗಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ.

ಲಕ್ಷಣಗಳೇನು? :

ಮೈಕೈ ನೋವು, ತೀವ್ರ ಜ್ವರ, ವಾಂತಿ, ತೀವ್ರ ತಲೆನೋವು ಕಣ್ಣಗುಡ್ಡೆಯಲ್ಲಿ ನೋವು ಇತ್ಯಾದಿ. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಇದ್ದರೆ ಆಗ ಒಳಭಾಗದಲ್ಲಿ ರಕ್ತಸ್ರಾವ,  ಪಲ್ಸ್‌ ಮತ್ತು ರಕ್ತದ ಪ್ಲೇಟ್ಲೆಟ್‌ಗಳಲ್ಲಿ ಗಣನೀಯ ಕುಸಿತ ಉಂಟಾಗುವುದು. ಇವು ತೀವ್ರವಾಗಿ ಕಾಡಿ ದರೆ ಕೆಲವೊಂದು ಸಲ ರೋಗಿಯ ಸಾವು ಸಂಭವಿಸಬಹುದು.

ಡೆಂಗ್ಯೂ ಪ್ರಕರಣ:

ವರ್ಷ   ಪ್ರಕರಣ

2017       383

2018       228

2019       280

2020       139

2021       281

(ಜುಲೈ ಅಂತ್ಯ)

 

ಡೆಂಗ್ಯೂ ಪರೀಕ್ಷೆ  ಪ್ರಮಾಣ :

ತಿಂಗಳು                2017       2018       2019       2020       2021

ಜನವರಿ               18           14           6              23           3

ಫೆಬ್ರವರಿ             11           3              11           10           7

ಮಾರ್ಚ್‌             26           4              23           12           16

ಎಪ್ರಿಲ್‌ 15           0              3              10           17

ಮೇ        11           20           10           17           23

ಜೂನ್‌ 84           50           26           20           108

ಜೂಲೈ 67           59           20           39           107

ಒಟ್ಟು   232         146         99           131         281

2-3 ವರ್ಷಗಳಿಗೊಮ್ಮೆ ಡೆಂಗ್ಯೂ ಪ್ರಕರಣ ಹೆಚ್ಚಳವಾಗುತ್ತದೆ. ಜಿಲ್ಲಾದ್ಯಂತ ಮಳೆ ಮತ್ತು ಬಿಸಿಲಿನ ಹವಾಮಾನವಿದ್ದು, ಇದು ಡೆಂಗ್ಯೂ ಹರಡಲು ಪೂರಕವಾಗಿದೆ. ಈಗಾಗಲೇ  ಸೊಳ್ಳೆ ಪರದೆಗಳನ್ನು ವಿತರಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸಾರ್ವಜನಿಕರು ಮನೆ ಸುತ್ತಮುತ್ತ, ಟಯರ್‌, ಸೀಯಾಳ ಚಿಪ್ಪು, ರಬ್ಬರ್‌ ಗಿಡಕ್ಕೆ ಅಳವಡಿಸಿದ ಗೆರಟೆ, ತೋಟದಲ್ಲಿರುವ ಅಡಕೆ ಹಾಳೆಯಲ್ಲಿ ನೀರು ನಿಲ್ಲದಂತೆ ನಿಗಾ ವಹಿಸಬೇಕು. -ಡಾ| ಪ್ರಶಾಂತ್‌ ಭಟ್‌ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next