Advertisement

ಗ್ರಾಮೀಣ ಬದುಕಿಗೆ ದೇಶಪಾಂಡೆ ಪ್ರತಿಷ್ಠಾನದ ಬಲ

08:28 AM Jul 19, 2019 | Suhan S |

ಹುಬ್ಬಳ್ಳಿ: ಕೃಷಿ ಹಾಗೂ ಗ್ರಾಮೀಣ ಜನರ ಬದುಕು ಸುಧಾರಣೆ, ಆದಾಯ ವೃದ್ಧಿಯಲ್ಲಿ ತನ್ನದೇ ಯತ್ನ ಕೈಗೊಂಡಿರುವ ದೇಶಪಾಂಡೆ ಪ್ರತಿಷ್ಠಾನ, ಇದುವರೆಗೆ ಒಟ್ಟು 3,500 ಕೃಷಿ ಹೊಂಡ ನಿರ್ಮಿಸಿದ್ದು, 7,000 ಜನರಿಗೆ ಸೂಕ್ಷ್ಮ ಉದ್ಯಮ ತರಬೇತಿ, 1,100 ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಸೇರಿದಂತೆ ಕೌಶಲ ಹೆಚ್ಚಳ ಸಾಧನೆ ತೋರಿದೆ.

Advertisement

ದಶಮಾನೋತ್ಸವ ಸಂಭ್ರಮದಲ್ಲಿರುವ ದೇಶಪಾಂಡೆ ಪ್ರತಿಷ್ಠಾನ 2009ರಲ್ಲಿ ಹುಬ್ಬಳ್ಳಿಯಲ್ಲಿ ಆರಂಭವಾದಾಗ ಇದು ಉದ್ಯಮಕ್ಕೆ ಪೂರಕವಾಗುವ, ನಗರ ಬದುಕಿಗೆ ಹೆಚ್ಚು ಇಂಬು ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಕಾರ್ಪೊರೇಟ್ ಜಗತ್ತಿನ ಪ್ರತೀಕವಾಗಲಿದೆ ಎಂದು ಭಾವಿಸಿದವರೇ ಅಧಿಕ. ಆದರೆ, ಕಳೆದ ಹತ್ತು ವರ್ಷಗಳಲ್ಲಿ ದೇಶಪಾಂಡೆ ಪ್ರತಿಷ್ಠಾನ ಸುಸ್ಥಿರ ಕೃಷಿ ನಿಟ್ಟಿನಲ್ಲಿ ಕಾಳಜಿ ಹಾಗೂ ನೀರಾವರಿ ಸೌಲಭ್ಯ, ಗ್ರಾಮೀಣದಲ್ಲಿ ಅನೇಕ ವೃತ್ತಿಪರರ ನೈಪುಣ್ಯತೆಗೆ ತಾಂತ್ರಿಕತೆ ಸ್ಪರ್ಶ ನೀಡಿ ಮಾರುಕಟ್ಟೆಗೆ ಪರಿಚಯಿಸಿದೆ. ಇಂಗ್ಲಿಷ್‌ ಎಂದರೇನೆ ಕಬ್ಬಿಣದ ಕಡಲೆ ಎಂದು ಕೀಳರಿಮೆಗೆ ಒಳಗಾಗುತ್ತಿದ್ದ ಗ್ರಾಮೀಣ ಮಕ್ಕಳ ಬಾಯಲ್ಲಿಯೇ ಹರಳು ಹುರಿದಂತೆ ಇಂಗ್ಲಿಷ್‌ನಲ್ಲಿ ಮಾತನಾಡುವ ಕೌಶಲ ಮೂಡಿಸುವ ಕಾರ್ಯ ಮಾಡಿದೆ.

3,500 ಕೃಷಿ ಹೊಂಡ: ಉದ್ಯಮಿ ಡಾ| ಗುರುರಾಜ ದೇಶಪಾಂಡೆ ಅವರು ತಮ್ಮ ತಂದೆ ಶ್ರೀನಿವಾಸ ದೇಶಪಾಂಡೆಯವರ ಪ್ರೇರಣೆಯಂತೆ ದೇಶಪಾಂಡೆ ಪ್ರತಿಷ್ಠಾನದ ಮೂಲಕ ರೈತರ ಬದುಕು ಸುಧಾರಣೆ ಯತ್ನ ಕೈಗೊಂಡಿದ್ದಾರೆ.

ಬರಪೀಡಿತ ಉತ್ತರ ಕರ್ನಾಟಕದ ರೈತರ ಕೃಷಿ ಕಾಯಕಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಹೊಂಡಗಳ ನಿರ್ಮಾಣದ ಅಭಿಯಾನವನ್ನು ರತನ್‌ ಟಾಟಾ ಟ್ರಸ್ಟ್‌ನೊಂದಿಗೆ ಪ್ರತಿಷ್ಠಾನ ಕೈಗೊಂಡಿತ್ತು. ಸರಕಾರಗಳ ಸಹಕಾರವೂ ಇತ್ತು. 2014ರಲ್ಲಿ ಆರಂಭವಾದ ಈ ಅಭಿಯಾನದಲ್ಲಿ ಇದುವರೆಗೆ ಧಾರವಾಡ, ಹಾವೇರಿ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಸುಮಾರು 3,500 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ನೀರಿನ ಸೌಲಭ್ಯವೇ ಇಲ್ಲದ ಅನೇಕ ರೈತರು ಇದೀಗ ಕೃಷಿ ಹೊಂಡಗಳ ನೀರನ್ನು ಹನಿ ಇಲ್ಲವೆ ತುಂತುರು ನೀರಾವರಿ ಮೂಲಕ ಬಳಸಿಕೊಂಡು ಪಪ್ಪಾಯ, ತರಕಾರಿ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಅತಿಸಣ್ಣ-ಸಣ್ಣ ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿಷ್ಠಾನದಿಂದ ರೈತ ಉತ್ಪಾದಕ ಸಂಘ (ಎಫ್ಪಿಒ) ರಚಿಸಲಾಗಿದ್ದು, ಉತ್ಪನ್ನ ಹೆಚ್ಚಳ ತಂತ್ರಜ್ಞಾನ, ಮಾರುಕಟ್ಟೆ, ಬಿತ್ತನೆಯಿಂದ ಕೊಯ್ಲುವರೆಗೆ ವಿವಿಧ ಸೇವೆ ನೀಡುತ್ತಿದೆ. ಉತ್ತರ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶಗಳ ವಿವಿಧ ಜಿಲ್ಲೆಗಳಲ್ಲಿ ಹತ್ತಿ ಪ್ರಮುಖ ಬೆಳೆಯಾಗಿದೆ. ಹತ್ತಿ ಬೆಳೆಯಲ್ಲಿ ಫ‌ಸಲು ಹೆಚ್ಚಳಕ್ಕೆ ಕ್ರಮ, ಮಾರುಕಟ್ಟೆ ಸಂಪರ್ಕದ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಮೆಣಸಿನಕಾಯಿ ಫ‌ಸಲು ವೃದ್ಧಿಗೆ ಬಳ್ಳಾರಿ ಭಾಗದಲ್ಲಿ ಎಸ್‌ಎಸ್‌ಐ ಯೋಜನೆಯಡಿ ಹಲವು ಸೌಲಭ್ಯಗಳನ್ನು ನೀಡಲಾಗಿದೆ.

Advertisement

ವಿದ್ಯಾರ್ಥಿಗಳಿಗೆ ತರಬೇತಿ: ಸ್ಕಿಲ್ ಇನ್‌ ವಿಲೇಜ್‌ ಯೋಜನೆಯಡಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಸೇರಿದಂತೆ ವಿವಿಧ ಕೌಶಲ ತರಬೇತಿ ನೀಡಲಾಗುತ್ತಿದೆ. ಸುಮಾರು 28 ಗ್ರಾಮಗಳಲ್ಲಿ 1,100ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದು, ಇದರಲ್ಲಿ ಶೇ.60 ವಿದ್ಯಾರ್ಥಿನಿಯರಿದ್ದಾರೆ. ನಾಲ್ಕಾರು ದೇಶಗಳ ಪ್ರತಿನಿಧಿಗಳೊಂದಿಗೆ ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿಯೇ ಸಂವಾದ ನಡೆಸಿದ್ದಾರೆ.

7 ಸಾವಿರ ಸೂಕ್ಷ್ಮ ಉದ್ಯಮದಾರರಿಗೆ ತರಬೇತಿ; ಸಾಲ ಸೌಲಭ್ಯ

ಸೀಮಿತ ವ್ಯಾಪ್ತಿಯಲ್ಲಿದ್ದ ಗ್ರಾಮೀಣ ಹಾಗೂ ನಗರ ಪ್ರದೇಶದ ಸಣ್ಣಪುಟ್ಟ ಕರಕುಶಲಕರ್ಮಿಗಳನ್ನು ಗುರುತಿಸಿ ಸೂಕ್ಷ್ಮ ಉದ್ಯಮದಾರರೆಂದು ಪರಿಗಣಿಸಿ ಮೇಲ್ದರ್ಜೆಗೇರಿಸುವ ತರಬೇತಿಯನ್ನು ದೇಶಪಾಂಡೆ ಪ್ರತಿಷ್ಠಾನ ನೀಡುತ್ತಿದೆ. ಇದುವರೆಗೆ 14,856 ಸೂಕ್ಷ್ಮ ಉದ್ಯಮಿದಾರರ ಸಂಪರ್ಕ ಹೊಂದಿದ್ದು, ಇದರಲ್ಲಿ ಸುಮಾರು 7,000 ಜನರಿಗೆ ತರಬೇತಿ ನೀಡಲಾಗಿದೆ. ಇದರಿಂದ ಒಟ್ಟು 12 ಕೋಟಿ ರೂ. ವಹಿವಾಟು ನಡೆಯುತ್ತಿದೆ. 1.82 ಕೋಟಿ ರೂ. ಸಾಲ ಸೌಲಭ್ಯ ದೊರಕಿಸಲಾಗಿದ್ದು, ಸುಮಾರು 1,000 ಉದ್ಯೋಗ ಸೃಷ್ಟಿಸಲಾಗಿದೆ.
ಉಕ ಭಾಗದ 8000 ಯುವಕ-ಯುವತಿಯರಿಗೆ ಕೌಶಲ ಪಾಠ:

ಉಕ ಕೇಂದ್ರೀಕರಿಸಿ ಯುವಕ-ಯುವತಿಯರಿಗೆ ಕೌಶಲ ತರಬೇತಿಯನ್ನು ದೇಶಪಾಂಡೆ ಎಜುಕೇಶನ್‌ ಟ್ರಸ್ಟ್‌ ಅಡಿಯಲ್ಲಿ ನೀಡಲಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಯುವಕ-ಯುವತಿಯರು ಹೆಚ್ಚು ತರಬೇತಿ ಪಡೆಯುತ್ತಿದ್ದು, ಇದುವರೆಗೆ ಸುಮಾರು 8,000 ಜನರಿಗೆ ಕೌಶಲ ತರಬೇತಿ ನೀಡಲಾಗಿದೆ. 300ಕ್ಕೂ ಹೆಚ್ಚು ಉದ್ಯೋಗದಾತ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ ತರಬೇತಿ ಪಡೆದವರಲ್ಲಿ ಶೇ.75-80 ಮಂದಿ ಉದ್ಯೋಗ ಪಡೆದಿದ್ದಾರೆ.
•ಅಮರೇಗೌಡ ಗೋನವಾರ
Advertisement

Udayavani is now on Telegram. Click here to join our channel and stay updated with the latest news.

Next